Advertisement
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿಆರ್‌ಝಡ್ ಸಂಬಂಧಿತ ಉನ್ನತ ಅಧಿಕಾರಿಗಳು ಚೆನ್ನೈಯ ನ್ಯಾಶನಲ್ ಸೆಂಟರ್ ಫಾರ್ ಸಸ್ಟನೇಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್ (ಎನ್‌ಸಿಎಸ್‌ಸಿಎಂ) ಸಂಸ್ಥೆಗೆ ತೆರಳಿದ್ದು, ಕಳೆದ ಎರಡು ದಿನದಿಂದ ಪರಿಷ್ಕರಣೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸಿದ್ಧಗೊಂಡಿರುವ ಹೊಸ ನಕ್ಷೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಹೊಸ ವರದಿಯನ್ನು ಒಂದೆರಡು ದಿನದಲ್ಲಿ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಹೊಸ ನಕ್ಷೆಯಂತೆ, ಸಿಆರ್‌ಝಡ್ ವ್ಯಾಪ್ತಿಯಲ್ಲಿ ಪರಿಸ್ಥಿತಿ ಹಾಗೂ ಆವಶ್ಯಕತೆಗೆ ಅನುಗುಣವಾಗಿ ನಿಯಮದ ಪ್ರಕಾರ ಬದಲಾವಣೆ ನಡೆಸಲು ಅವಕಾಶವಿದ್ದು, ಇದರಿಂದ ಈ ವಲಯದ ವ್ಯಾಪ್ತಿಗೆ ಬರುವ ನಿವಾಸಿಗಳ ಜನಜೀವನಕ್ಕೆ ವಿಧಿಸಲಾಗಿರುವ ನಿರ್ಬಂಧದಲ್ಲಿ ಸಡಿಲಿಕೆಯಾಗುವ ಸಾಧ್ಯತೆಯಿದೆ.
Related Articles
Advertisement
1991ರ ಸಿಆರ್‌ಝಡ್ ಅಧಿಸೂಚನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ 2006ರಲ್ಲಿ ಕರಾವಳಿ ನಿರ್ವಹಣ ವಲಯ (ಸಿಎಂಝಡ್) ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಇದರಲ್ಲಿ ಸಿಆರ್‌ಝಡ್‌ನ “ನಿಯಂತ್ರಣ’ ಎಂಬ ಪದವನ್ನು ತೆಗೆದು “ನಿರ್ವಹಣೆ’ ಎಂದು ಸೇರಿಸಲಾಗಿತ್ತು. ಈ ಅಧಿಸೂಚನೆಯ ಮೇಲೆ ಬಹಳಷ್ಟು ಚರ್ಚೆಗಳು ನಡೆದು, ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಪರಿಸರ ಹಾಗೂ ಅರಣ್ಯ ಸಚಿವಾಲಯವು ಸಿಎಂಝಡ್ ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಂಡು 1991ರ ಸಿಆರ್‌ಝಡ್ ಅಧಿಸೂಚನೆಯಲ್ಲಿ ಕೆಲವೊಂದು ತಿದ್ದುಪಡಿಗಳೊಂದಿಗೆ 2011ರಲ್ಲಿ ಮತ್ತೆ ಅನುಷ್ಠಾನಕ್ಕೆ ತಂದಿದೆ. ಇದರ ಆಧಾರದ ಮೇಲೆ ಹೊಸ ಕರಡು ನಕ್ಷೆ ಸಿದ್ಧಗೊಳಿಸಲಾಗಿದೆ.
25 ಸಲ ತಿದ್ದುಪಡಿಯಾದ ಅಧಿಸೂಚನೆ!
ಸಿಆರ್‌ಝಡ್ ಒಟ್ಟು 4 ವರ್ಗೀಕರಣವನ್ನು ಹೊಂದಿದೆ. ಇವುಗಳನ್ನು ಸರಳವಾಗಿ ಹೇಳುವು ದಾದರೆ ವರ್ಗ 1ರಲ್ಲಿ ಭರತ ಮತ್ತು ಇಳಿತ ನಡುವಣ ಪ್ರದೇಶ ಹಾಗೂ ಸಾಗರತೀರದಲ್ಲಿ ಪರಿಸರಾತ್ಮಕವಾಗಿ ಅತಿ ಸೂಕ್ಷ್ಮ ಪ್ರದೇಶಗಳು ಇದರಲ್ಲಿ ಒಳಗೊಳ್ಳುತ್ತವೆ. ವರ್ಗೀಕರಣ-2ರಲ್ಲಿ ಸಾಗರ ತೀರಕ್ಕೆ ಹತ್ತಿರವಿರುವ ಅಥವಾ ತೀರದವರೆಗೆ ಈಗಾಗಲೇ ಅಭಿವೃದ್ಧಿ ಹೊಂದಿದ ಪ್ರದೇಶ. ವರ್ಗೀಕರಣ- 3ರಲ್ಲಿ ಹೊಂದಿಕೊಂಡತೆ ಅಬಾಧಿತ ಅಥವಾ 1 ಮತ್ತು 2ಕ್ಕೆ ಸೇರದ, ಗ್ರಾಮಾಂತರ ಪ್ರದೇಶದಲ್ಲಿ ಕರಾವಳಿ ಪ್ರದೇಶಗಳು ಹಾಗೂ ವರ್ಗೀಕರಣ- 4ರಲ್ಲಿ ಇಳಿತ ರೇಖೆಯಿಂದ 12 ನಾಟಿಕಲ್ ಮೈಲ್ ಸಮುದ್ರಮುಖ ಪ್ರದೇಶಗಳು, ಭರತ ಸಮಯದಲ್ಲಿ ನೀರು ನುಗ್ಗುವ ಪ್ರದೇಶಗಳು ಒಳಗೊಳ್ಳುತ್ತವೆ. ಸಾಗರತೀರ ಸಂರಕ್ಷಣೆಯ ಮಹತ್ವವನ್ನು ಮನಗಂಡಿದ್ದ ಪ್ರಧಾನಿ ಇಂದಿರಾ ಗಾಂಧಿ ಅವರು 1981ರಲ್ಲಿ ಸಮರ್ಥ ಕಾಯ್ದೆಯೊಂದರ ರಚನೆ ಆವಶ್ಯಕತೆಯನ್ನು ಪ್ರತಿಪಾದಿಸಿದ್ದರು. ಇದಾದ ಬಳಿಕ 10 ವರ್ಷಗಳ ಅನಂತರ 1991ರಲ್ಲಿ ಸಿಆರ್‌ಝಡ್ ಅಧಿಸೂಚನೆ ರೂಪಿತವಾಯಿತು. ಪ್ರಕಟಗೊಂಡ ಬಳಿಕ ಇದು ಈವರೆಗೆ 25 ಬಾರಿ ತಿದ್ದುಪಡಿ ಕಂಡಿದೆ. ಇದನ್ನು ಪೂರ್ಣವಾಗಿ ಕೈಬಿಟ್ಟು ಸಿಎಂಝಡ್ (ಕರಾವಳಿ ನಿರ್ವಹಣ ವಲಯ) ಜಾರಿಗೆ ತರುವ ಪ್ರಕ್ರಿಯೆಯೂ ಒಂದೊಮ್ಮೆ ನಡೆಯಿತು. ಅದಕ್ಕೆ ವ್ಯಾಪಕ ಪ್ರತಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಸಿಆರ್‌ಝಡ್ ಅನ್ನು ಅಪ್ಪಿಕೊಳ್ಳಲಾಯಿತು.
– ದಿನೇಶ್ ಇರಾ