ಹೊಸದಿಲ್ಲಿ: ಇದೇ ಮೊದಲ ಬಾರಿ ಬಿಟ್‌ಕಾಯಿನ್ (ಡಿಜಿಟಲ್ ಹಣ) ಬಳಸಿ ಭಾರತದಾದ್ಯಂತ ಉಗ್ರ ಚಟುವಟಿಕೆ ನಡೆಸಲು ಐಸಿಸ್ ಯತ್ನಿಸಿದ್ದು ಬೆಳಕಿಗೆ ಬಂದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿದ ಆರೋಪಪಟ್ಟಿಯೊಂದರಲ್ಲಿ ಈ ಮಾಹಿತಿಯಿದೆ.
ಮಾ.8ರಂದು ಐಸಿಸ್‌ಗೆ ಸೇರಿದ ಜಹಾನ್‌ಜೈಬ್ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿತ್ತು. ಈ ವೇಳೆ ಗೊತ್ತಾದ ಮಾಹಿತಿ ಪ್ರಕಾರ, ಇಬ್ಬರೂ ಸೇರಿ ದೇಶಾದ್ಯಂತ ಒಂದೇ ದಿನ 100 ಬಾರಿ ಬಾಂಬ್ ಸ್ಫೋಟಿಸಲು ಹುನ್ನಾರ ಮಾಡಿದ್ದರು.
ಈ ಇಬ್ಬರು ಥ್ರಿಮಾ ಎಂಬ ಆ್ಯಪ್ ಬಳಸಿ, ಸಿರಿಯಾ ಮೂಲದ ಬ್ರಿಟನ್ ಮಹಿಳೆಯಿಂದ ಬಿಟ್‌ಕಾಯಿನ್ ಸಂಪಾದಿಸಿದ್ದರು. ಹಾಗೆಯೇ ಲಿಬಿಯಾಕ್ಕೆ ಸೇರಿದ ಐಸಿಸ್ ಉಗ್ರರಿಂದ ತಮ್ಮ ಚಟುವಟಿಕೆಗೆ ಹಣ ಸಂಗ್ರಹಿಸುತ್ತಿದ್ದರು. ತಮಗೆ ಬೇಕಾದ ಶಸ್ತ್ರಾಸ್ತ್ರ ಖರೀದಿಸಲು ಇಬ್ಬರೂ ಕದ್ದ ಕ್ರೆಡಿಟ್ ಕಾರ್ಡ್ ಬಳಸಲು ನಿರ್ಧರಿಸಿದ್ದರು. ಇನ್ನೂ ಗಂಭೀರ ಸಂಗತಿಯೆಂದರೆ ದಿಲ್ಲಿಯ ತಿಹಾರ್ ಜೈಲಿನಲ್ಲಿರುವ ಉಗ್ರ ಅಬ್ದುಲ್ಲಾ ಬಾಸಿತ್, ಅಲ್ಲಿ ಕುಳಿತೇ ಈ ಇಬ್ಬರೊಂದಿಗೆ ಸ್ಫೋಟದ ಬಗ್ಗೆ ಚರ್ಚೆ ನಡೆಸುತ್ತಿದ್ದ ಎಂದೂ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಬಿಟ್ ಕಾಯಿನ್:
ಇಲ್ಲಿ ಹಣದ ತ್ವರಿತವಾದ ವರ್ಗಾವಣೆ ಸಾಧ್ಯವಾಗಿದ್ದು, ಸಂಸ್ಕರಣೆ ಶುಲ್ಕ ಇರುವುದಿಲ್ಲ. ಯಾವುದೇ ಅಡೆತಡೆಯಿಲ್ಲದೇ ಜಗತ್ತಿನಾದ್ಯಂತ ಚಲಾವಣೆ ಮಾಡಬಹುದು. ಬ್ಯಾಂಕಿಂಗ್ ಬಳಕೆ ಅಗತ್ಯವಿಲ್ಲ. ವರ್ಡ್‌ಪ್ರೆಸ್, ರೆಡಿಟ್, ನೇಮ್‌ಚೀಪ್ ಮತ್ತು ಫ್ಲಾಟ್ಟರ್ ನಂತಹ ಅಂತರ್ಜಾಲ ತಾಣಗಳು ಬಿಟ್‌ಕಾಯಿನ್‌ಗಳನ್ನು ನೇರವಾಗಿ ಸ್ವೀಕರಿಸುತ್ತವೆ.