ಹುಬ್ಬಳ್ಳಿ: ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಹಾನಿಗೊಳಗಾದ ಗ್ರಾಮಗಳಿಗೆ ಕೈಮಗ್ಗ, ಜವಳಿ, ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯರ ಮನವಿಗಳನ್ನು ಸ್ವೀಕರಿಸಿ ಆದಷ್ಟು ಬೇಗ ಬೆಳೆ ಹಾನಿ ಹಾಗೂ ಮನೆ ಹಾನಿ ಪರಿಹಾರ ದೊರೆಯಲಿದೆ ಎಂದು ಭರವಸೆ ನೀಡಿದರು.
ನವಲಗುಂದ ಹಾಗೂ ಕುಂದಗೋಳ ತಾಲೂಕಿನ ಕೆಲ ಗ್ರಾಮಗಳಿಗೆ ಭೇಟಿ ನೀಡಿದರು. ಪ್ರಮುಖವಾಗಿ ಬೆಹಳ್ಳದ ಪ್ರವಾಹದಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ವಾಡಿಕೆಗಿಂತ ಹೆಚ್ಚಿನ ಮಳೆಯಾದ ಪ್ರತಿ ಬಾರಿಯೂ ಹಳ್ಳದ ಅಕ್ಕಪಕ್ಕದ ರೈತರು ಬೆಳೆ ಕಳೆದುಕೊಳ್ಳುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿದರು.
ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತರು, ಹಳ್ಳದ ಪಕ್ಕದಲ್ಲಿರುವ ಎಲ್ಲಾ ಬೆಳೆ ಪ್ರವಾಹದಿಂದ ಹಾಳಾಗಿದೆ. ಮುಂಗಾರು ಸಂದರ್ಭದಲ್ಲಿಯೂ ಇದೇ ಪರಿಸ್ಥಿತಿ ಉಂಟಾಗಿತ್ತು. ಹಿಂಗಾರಿಗಾದರೂ ಒಂದಿಷ್ಟು ಪೈರು ಪಡೆಯೋಣ ಎನ್ನುವ ರೈತರಿಗೆ ಅಕಾಲಿಕ ಮಳೆ ದೊಡ್ಡ ಹೊಡೆತ ನೀಡಿದೆ. ಮುಂಗಾರು ಹಂಗಾಮಿನಲ್ಲಿ ಹಾನಿಯಾದ ಪರಿಹಾರ ಇನ್ನೂ ಜಮೆಯಾಗಿಲ್ಲ. ಇದೀಗ ಹಿಂಗಾರು ಬೆಳೆ ಕಳೆದುಕೊಂಡು ಮುಂದೆ ಏನು ಎನ್ನುವ ಚಿಂತೆ ಕಾಡುತ್ತಿದೆ. ಆದಷ್ಟು ಬೇಗ ಮುಂಗಾರು ಹಾಗೂ ಹಿಂಗಾರು ಬೆಳೆ ಹಾನಿ ಪರಿಹಾರ ಸರಕಾರದಿಂದ ಕೊಡುವಂತೆ ಅಲವತ್ತುಕೊಂಡರು.
ಶೀಘ್ರದಲ್ಲಿ ಪರಿಹಾರ: ಸರಕಾರ ಬೆಳೆ ಹಾನಿ ಹಾಗೂ ಮನೆ ಕಳೆದುಕೊಂಡಿರುವ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ. ಈಗಾಗಲೇ ಸಮೀಕ್ಷೆಗೆ ಗಡುವು ನೀಡಿದ್ದು, ಈ ಕಾರ್ಯ ಮುಗಿಯುತ್ತಿದ್ದಂತೆ ಬೆಳೆ ಹಾನಿ ಪರಿಹಾರ ವಿತರಣೆ ಕಾರ್ಯ ಆರಂಭವಾಗಲಿದೆ. ಮುಂಗಾರು ಸಂದರ್ಭದಲ್ಲಿನ ಬೆಳೆ ಹಾನಿ ಪರಿಹಾರ ಮೊತ್ತ ಈಗಾಗಲೇ ರೈತರ ಖಾತೆಗೆ ವರ್ಗಾವಣೆ ಮಾಡುವ ಕೆಲಸ ನಡೆಯುತ್ತಿದೆ. ತಾಂತ್ರಿಕ ಕಾರಣದಿಂದ ಕೆಲ ರೈತರಿಗೆ ತಲುಪಿಲ್ಲ ಎನ್ನುವ ಮಾಹಿತಿ ಬಂದಿದೆ. ಇಂತಹ ಪ್ರಕರಣಗಳನ್ನು ಗುರುತಿಸಿ ರೈತರಿಗೆ ಬೆಳೆ ಪರಿಹಾರ, ವಿಮೆ ಕೊಡಿಸುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವ ಮುನೇನಕೊಪ್ಪ ಭರವಸೆ ನೀಡಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ನ.30ರೊಳಗೆ ಜಂಟಿ ಸಮೀಕ್ಷೆ ಮುಗಿಸುವಂತೆ ಸರಕಾರದಿಂದ ಗಡುವು ನೀಡಿದ್ದಾರೆ. ಬೆಳೆ ಹಾನಿ ಹಾಗೂ ಮನೆ ಹಾನಿ ಅಷ್ಟರೊಳಗೆ ಜಂಟಿ ಸಮೀಕ್ಷೆ ಪೂರ್ಣಗೊಳ್ಳಲಿದೆ. ಈ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಸರಕಾರದಿಂದ ಬೆಳೆ ಪರಿಹಾರ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದರು. ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ಗುಡೇನಕಟ್ಟಿ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನಪ್ಪ
ಸೊರಟೂರ, ಸದಸ್ಯರಾದ ಮಮತಾ ಬೆಟದೂರ, ಚನ್ನಪ್ಪ ಮಡಿವಾಳರ, ಕಂದಾಯ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ-ಸಿಬ್ಬಂದಿ ಇದ್ದರು.