ಕೋಲಾರ: ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಚ್ಚೆತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಕ್ರಷರ್ ಮಾಲೀಕರು ಹಾಗೂ ಗಣಿ ಗುತ್ತಿಗೆದಾರರೊಂದಿಗೆ ಬುಧವಾರ ಸಭೆ ನಡೆಸಿದರು.
ನಗರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂ ವಿಜ್ಞಾನಿ ಶಣ್ಮುಗಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿ ಕ್ರಷರ್ ಮಾಲೀಕರಿಂದ ನಿಗದಿತ ನಮೂನೆಯಲ್ಲಿ ಜಿಲೆಟಿನ್ ಸಂಗ್ರಹ, ಬ್ಲಾಸ್ಟಿಂಗ್ ಸಂಬಂಧ ಮಾಹಿತಿ ಸಂಗ್ರಹಿಸಿ ದರು. ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚಿಸಿ, ನಿಯಮ ಮೀರಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕಳೆದ 2 ತಿಂಗಳಲ್ಲಿ ನಡೆದ ಜಿಲೆಟಿನ್ ಸ್ಫೋಟದ ದುರ್ಘಟನೆಯಿಂದ ಇಡೀ ರಾಜ್ಯದ ಜನ ಬೆಚ್ಚಿ ಬೀಳುವಂತೆ ಮಾಡಿದೆ. ಈ ನಡುವೆ ಅತಿಹೆಚ್ಚು ಕಲ್ಲು ಕ್ವಾರಿ ಹಾಗೂ ಕ್ರಷರ್‌ಗಳಿರುವ ಜಿಲ್ಲೆಗಳ ಪೈಕಿ ಕೋಲಾರವೂ ಒಂದಾಗಿರುವುದರಿಂದ ಜಿಲ್ಲೆಯ ಜನರಲ್ಲೂ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಕಲ್ಲು ಕ್ವಾರಿ ಹಾಗೂ ಕ್ರಷರ್ ಹೊಂದಿರುವ ಕೋಲಾರ ಜಿಲ್ಲೆಯಲ್ಲಿಯೂ ಸ್ಫೋಟಕ್ಕೆ ಸಂಬಂಧಿಸಿದಂತೆ ಆತಂಕ ಶುರುವಾಗಿದೆ.
ಶಿವಮೊಗ್ಗ ಆದ ನಂತರ ಪಕ್ಕದ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಬೆಂಗಳೂರು ನಗರಕ್ಕೆ ಕೂಗಳತೆ ದೂರದ ಕೋಲಾರದಲ್ಲಿ ಜಲ್ಲಿ ಕ್ರಷರ್‌ಗಳ ಅಬ್ಬರ ಜೋರಾಗಿದೆ. ಪರಿಣಾಮ ಕೋಲಾರದಲ್ಲೂ ಅಕ್ರಮವಾಗಿ ಜಿಲೆಟಿನ್ ಸೇರಿದಂತೆ ಸ್ಫೋಟಕ ಸಂಗ್ರಹಿಸಿಟ್ಟಿರುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಈಗಾಗಲೇ ಕೋಲಾರ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದ್ದು, ನಿನ್ನೆಯಿಂದಲೇ ಕ್ರಷರ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಕ್ರಷರ್‌ಗಳಲ್ಲಿ ಅಕ್ರಮ ಸ್ಫೋಟಕ ಸಂಗ್ರಹದಕುರಿತು ತನಿಖೆ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಕ್ರಷರ್ ಮಾಲೀಕರ ಸಭೆ ಕರೆದು ನಿಯಮ ಉಲ್ಲಂಘಿಸಿ, ಸ್ಫೋಟಕ ಸಂಗ್ರಹ ಹಾಗೂ ಗಣಿಗಾರಿಕೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. 33 ಕ್ರಷರ್‌ಗಳು: ಜಿಲ್ಲೆಯಲ್ಲಿ ಒಟ್ಟು 33 ಕ್ರಷರ್ ಗಳು ಕಾರ್ಯನಿರ್ವಹಿಸುತ್ತಿದ್ದರೆ, 71 ಕಲ್ಲುಗಣಿ ಗುತ್ತಿಗೆಗೆ ಪರವಾನಿಗೆ ನೀಡಲಾಗಿದೆ. ಈ ಪೈಕಿ ಒಂದು ಕ್ರಷರ್ ನಿಯಮ ಉಲ್ಲಂಘಿಸಿದ ಹಿನ್ನೆಲೆ ಆ ಕ್ರಷರ್‌ಗೆ ಬೀಗ ಹಾಕಲಾಗಿದೆ. ಜಿಲ್ಲೆಯಲ್ಲಿ ಇಬ್ಬರು ಮಾತ್ರ ಬ್ಲಾಸ್ಟಿಂಗ್ ಮಾಡೋದಕ್ಕೆ ಪರವಾನಿಗೆ ಹೊಂದಿದ್ದು, ಪರವಾನಿಗೆ ಹೊಂದಿರುವವರಿಂದಲೇ, ನಿಯಮಾನುಸಾರ ಬ್ಲಾಸ್ಟಿಂಗ್ ಮಾಡಬೇಕು ಎಂದು ಸೂಚಿಸಲಾಗಿದೆ.