ದೇವರಹಿಪ್ಪರಗಿ: ಜನತೆ ಹಾಗೂ ಜಾನುವಾರಗಳಿಗಾಗಿ ತಾಲೂಕಿನ ಕೆರೆಗಳನ್ನು ಭರ್ತಿ ಮಾಡಲು ಸರ್ಕಾರ ಕಾಲುವೆ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಂಡಿದೆ. ಆದರೆ ಕಲ್ಲು ಕ್ರಷರ್ ಮಾಲೀಕರು ಮಾತ್ರ ಕಾಲುವೆ ಒಡೆದು ಅನಧಿಕೃತ ನೀರು ಪಡೆಯುವುದರ ಮೂಲಕ ಕೆರೆಗಳ ಭರ್ತಿಗೆ ಅಡ್ಡಿಯಾಗಿದ್ದಾರೆ.
ಪಟ್ಟಣ ಸೇರಿದಂತೆ ತಾಲೂಕಿನ ಪ್ರಮುಖ ಕೆರೆಗಳಿಗೆ ನೀರು ಪೂರೈಸುವುದರ ಮೂಲಕ ಬೇಸಿಗೆಯಲ್ಲಿ ನೀರಿನ ತಾಪತ್ರಯ ತಪ್ಪಿಸಲು ಕಾಲುವೆಗೆ ನೀರು ಹರಿಸಲಾಗುತ್ತಿದೆ. ಆದರೆ ಪಡಗಾನೂರ ವ್ಯಾಪ್ತಿಯಲ್ಲಿನ 4ಕ್ಕೂ ಹೆಚ್ಚು ಕ್ರಷರ್‌ಗಳು ತಮ್ಮ ಗಣಿಗಳನ್ನು ಭರ್ತಿ ಮಾಡಲು ನೂರಾರು ಕೋಟಿ ಖರ್ಚು ಮಾಡಿ ನಿರ್ಮಿಸಿದ ಕಾಲುವೆಗಳನ್ನು ಒಡೆದು ಸ್ವಾರ್ಥಕ್ಕಾಗಿ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಈ ಕುರಿತು ರೈತರಾದ ಅಜೀಜ್ ಯಲಗಾರ, ರಾಮು ದೇಸಾಯಿ ಮಾತನಾಡಿ, ಎಂ.ಬಿ. ಪಾಟೀಲ ಹಾಗೂ ಶಾಸಕ ಸೋಮನಗೌಡ ಪಾಟೀಲರ ಪ್ರಯತ್ನದಿಂದ ಪ್ರತಿ ವರ್ಷ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಪೂರೈಕೆಯಾಗುತ್ತಿದೆ. ಇದರಿಂದ ರೈತರು ನೆಮ್ಮದಿ ಕಾಣುವಂತಾಗಿದೆ. ಆದರೆ ಈಗ ಕೆಲವು ದಿನಗಳಿಂದ ಕ್ರಷರ್‌ಗಳು ಅನಧಿಕೃತವಾಗಿ ನೀರು ಪಡೆಯುತ್ತಿವೆ ಎಂದರು.
ಪಡಗಾನೂರ ಗ್ರಾಮದ ಹತ್ತಿರದ ಆಲೂರ ಎಂಬುವವರಿಗೆ ಸೇರಿದ ಕ್ರಷರ್ ಈಗ ಕಾಲುವೆಯನ್ನೇ ಒಡೆದು ನೀರು ಪಡೆಯುತ್ತಿದೆ. ಹೀಗಾದರೇ ಬಹುತೇಕ ನೀರು ಕೆರೆ ತಲುಪದೇ ಇವರ ಕಲ್ಲಿನ ಗಣಿ ಭರ್ತಿ ಮಾಡುತ್ತದೆ. ಇಲ್ಲಿನ ಕ್ರಷರ್ ಮಾಲೀಕರು ಜನತೆ ಹಾಗೂ ರೈತರ ಹಿತ ಕಾಯದೆ ಬೇಕಾಬಿಟ್ಟಿಯಾಗಿ ನೀರು ಪಡೆಯುತ್ತಿರುವುದು ಅಕ್ಷಮ್ಯ ಅಪರಾಧ. ಇವರಿಗೆ ಹೇಳುವವರು, ಕೇಳುವವರು ಯಾರು ಇಲ್ಲವೇ? ಇವರಿಗೆ ಒಂದು ನ್ಯಾಯ, ಉಳಿದವರಿಗೆ ಇನ್ನೋಂದು ನ್ಯಾಯವೇ ಎಂದು ಪ್ರಶ್ನಿಸಿದರು.
ಸರ್ಕಾರ ಕೂಡಲೇ ಕ್ರಷರ್‌ಗಳಿಗೆ ಅನಧಿಕೃತ ನೀರು ಪೂರೈಕೆ ತಡೆದು ಕೆರೆ ತುಂಬಬೇಕು. ಮುಂದಿನ ದಿನಗಳಲ್ಲಿ ಕಾಲುವೆ ಒಡೆದು ನೀರು ಪಡೆಯುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುವುದು ಎಂದು ರೈತರಾದ ಶರಣು ಸೌದಿ, ಮಲ್ಲು ಭಂಡಾರಿ, ಬಸವರಾಜ ಬುದ್ನಿ, ಸಂಗು ಜಿರ್ಲಿ, ಗುರುರಾಜ್ ಜಡಗೊಂಡ, ಸೋಮಶೇಖರ ಹಿರೇಮಠ, ಗೌಡು ದಾನಗೊಂಡ, ಶ್ರೀಶೈಲ ದೇಸಾಯಿ, ಅಪ್ಪೋಜಿ ದೇಸಾಯಿ, ಬಸವರಾಜ ಕಲ್ಲೂರ, ಸಿದ್ದು ಮಸಬಿನಾಳ ಎಚ್ಚರಿಸಿದ್ದಾರೆ.