Advertisement

ಕಸಕ್ಕೆ ಕಡಿವಾಣ ಹಾಕಲು ಕ್ರಷರ್‌ ಯಂತ್ರ ಕಡ್ಡಾಯ

11:29 AM Nov 14, 2017 | Team Udayavani |

ಬೆಂಗಳೂರು: ಬಿಬಿಎಂಪಿ ವತಿಯಿಂದ ಕಟ್ಟಡ ನಕ್ಷೆ ಮಂಜೂರು ಮಾಡಲು ತ್ಯಾಜ್ಯ ಪ್ರಮಾಣ ಕಡಿಮೆ ಮಾಡುವ ಕ್ರಷರ್‌ ಮೆಷಿನ್‌ (ಹಸಿ ತ್ಯಾಜ್ಯದಲ್ಲಿನ ನೀರಿನಾಂಶ ತೆಗೆಯುವ ಯಂತ್ರ) ಅಳವಡಿಕೆ ಕಡ್ಡಾಯಗೊಳಿಸುವಂತೆ ಮೇಯರ್‌ ಆರ್‌.ಸಂಪತ್‌ರಾಜ್‌ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Advertisement

ಸೋಮವಾರ ಬಿಬಿಎಂಪಿ ಪೂರ್ವ ವಲಯದಲ್ಲಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರತಿಯೊಂದು ಮನೆಯಲ್ಲಿ ಕ್ರಷರ್‌ ಯಂತ್ರ ಅಳವಡಿಕೆ ಮಾಡಿಕೊಳ್ಳುವುದರಿಂದ ತ್ಯಾಜ್ಯ ಪ್ರಮಾಣ ಕಡಿಮೆಯಾಗಲಿದೆ. ಇದರೊಂದಿಗೆ ಲಿಚೆಟ್‌ ನೀರು ರಸ್ತೆಗಳಲ್ಲಿ ಸೋರುವುದನ್ನು ತಪ್ಪಿಸಬಹುದಾಗಿದ್ದು, ಕಟ್ಟಡ ನಕ್ಷೆ ಮಂಜೂರಾತಿಗೆ ಕ್ರಷರ್‌ ಯಂತ್ರ ಅಳವಡಿಕೆ ಕಡ್ಡಾಯಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಬಿಬಿಎಂಪಿ ವತಿಯಿಂದ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಕಾಂಪ್ಯಾಕ್ಟರ್‌ಗಳಲ್ಲಿ ತ್ಯಾಜ್ಯ ಸಾಗಿಸುವ ವೇಳೆ ಲಿಚೆಟ್‌ ನೀರು ರಸ್ತೆಗಳಿಗೆ ಸೋರಿ ದುರ್ವಾಸನೆ ಬರುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿವೆ. ಕ್ರಷರ್‌ ಯಂತ್ರಗಳನ್ನು ಅಳವಡಿಕೆ ಮಾಡಿಕೊಳ್ಳುವುದರಿಂದ ಮನೆಯಲ್ಲಿ ಸಂಗ್ರಹವಾದ ತ್ಯಾಜ್ಯದಲ್ಲಿನ ನೀರಿನಾಂಶವು ಒಳಚರಂಡಿಗೆ ಹೋಗಲಿದ್ದು, ಒಣ ತ್ಯಾಜ್ಯ ಮಾತ್ರ ಉಳಿಯುವುದರಿಂದ ತ್ಯಾಜ್ಯ ವಿಲೇವಾರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದ್ದಾರೆ. 

ಅಧಿಕಾರಿಗಳಿಗೆ ಅಮಾನತು ಎಚ್ಚರಿಕೆ: ಸಭೆಯಲ್ಲಿ ಪೂರ್ವ ವಲಯದಲ್ಲಿ ಎಷ್ಟು ಆಸ್ತಿಗಳಿಂದ ತೆರಿಗೆ ಬಾಕಿ ಉಳಿದಿದೆ ಎಷ್ಟು ಆಸ್ತಿಗಳನ್ನು ಟೋಟಲ್‌ ಸ್ಟೇಷನ್‌ ಸರ್ವೆಗೆ ಒಳಪಡಿಸಲಾಗಿದೆ ಎಷ್ಟು ಕಟ್ಟಡಗಳು ತಪ್ಪು ಮಾಹಿತಿ ನೀಡಿವೆ ಎಂಬ ಮಾಹಿತಿ ನೀಡುವಂತೆ ಕೋರಿದ ಅವರು, ವಲಯದಲ್ಲಿ ಎಲ್ಲ ಕಾಮಗಾರಿಗಳು ಪ್ರಗತಿ ಹಾಗೂ ಎಷ್ಟು ಆಸ್ತಿಗಳಿಂದ ಪಾಲಿಕೆಗೆ ತೆರಿಗೆ ಬರಬೇಕು ಎಂಬ ಮಾಹಿತಿಯನ್ನು ಎರಡು ವಾರದೊಳಗೆ ನೀಡಬೇಕು ಎಂದು ತಿಳಿಸಿದರು. 

ಮುಂದಿನ ದಿನಗಳಲ್ಲಿ ವಲಯದ ಹಲವು ಕಟ್ಟಡಗಳಿಗೆ ತೆರಿಗೆ ತೆರಿಗೆ ಪಾವತಿಯ ಕುರಿತು ಮಾಹಿತಿ ಪಡೆಯಲಾಗುವುದು. ಈ ವೇಳೆ ಆಸ್ತಿಗಳು ತೆರಿಗೆ ಪಾವತಿ ಮಾಡದಿರುವುದು ಕಂಡು ಬಂದರೆ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ. 

Advertisement

ಇದೇ ವೇಳೆ ವಲಯದ ಎಲ್ಲ ಪ್ರಮುಖ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಹಾಗೂ ವಲಯದಲ್ಲಿನ ಎಲ್ಲ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಸಭೆಯಲ್ಲಿ ಉಪಮೇಯರ್‌ ಪದ್ಮಾವತಿ ನರಸಿಂಹಮೂರ್ತಿ, ಪೂರ್ವ ವಲಯದ ಜಂಟಿ ಆಯುಕ್ತ ಅಶೋಕ್‌, ಆಡಳಿತ ಪಕ್ಷ ನಾಯಕ ಮಹಮದ್‌ ನವಾಬ್‌ ರಿಜ್ವಾನ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. 

ಗುತ್ತಿಗೆದಾರರ ಠೇವಣಿ ಹಣ ಜಪ್ತಿ ಮಾಡಿ: ಬಿಬಿಎಂಪಿ ವತಿಯಿಂದ ನಗರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರೂ, ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮೇಯರ್‌, ಟೆಂಡರ್‌ ಪಡೆದ ಗುತ್ತಿಗೆದಾರರು 21 ದಿನಗಳೊಳಗೆ ಕಾರ್ಯಾದೇಶ ಪಡದು ಕಾಮಗಾರಿ ಆರಂಭಿಸದಿದ್ದರೆ ಮುಂಗಡ ಹಣ ಠೇವಣಿ (ಇಎಂಡಿ)ಯನ್ನು ಜಪ್ತಿ ಮಾಡುವುದಾಗಿ ನೋಟಿಸ್‌ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಟೆಂಡರ್‌ ಪಡೆದ ಗುತ್ತಿಗೆದಾರರು ಹಲವು ದಿನಗಳಾದರೂ ಕಾರ್ಯಾದೇಶ ಪಡೆದು ಕಾಮಗಾರಿ ಆರಂಭಿಸಲು ಮುಂದಾಗುವುದಿಲ್ಲ ಎಂದು ಅಧಿಕಾರಿಗಳು ಆರೋಪಿಸಿದರು. ಅದಕ್ಕೆ ಉತ್ತರಿಸಿದ ಅವರು ನಿಯಮದಂತೆ 21 ದಿನಗಳಲ್ಲಿ ಅವರು ಕಾರ್ಯಾದೇಶ ಪಡೆದು ಕಾಮಗಾರಿ ಆರಂಭಿಸಬೇಕಿದ್ದು, ಕಾಮಗಾರಿ ಆರಂಭಿಸದ ಗುತ್ತಿಗೆದಾರರ ಠೇವಣಿಯನ್ನು ಮುಲಾಜಿಲ್ಲದೆ ಜಪ್ತಿ ಮಾಡಿಕೊಳ್ಳಿ ಎಂದು ಸೂಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next