ರಾಯಚೂರು: ಜೋರಾಗಿ ಬೀಸಿದ ಬಿರುಗಾಳಿಗೆ ತೆನೆ ಕಟ್ಟಿದ ಜೋಳದ ತೆನೆಯೆಲ್ಲ ನೆಲಕಚ್ಚಿದ ಘಟನೆ ತಾಲೂಕಿನ ಕಡಗಂದೊಡ್ಡಿಯಲ್ಲಿ ನಡೆದಿದೆ. ಇದರಿಂದ ನಷ್ಟದಲ್ಲಿದ್ದ ರೈತರಿಗೆ ಬರೆ ಎಳೆದಂತಾಗಿದೆ.
ಮಂಗಳವಾರ ಸಂಜೆ ಬಿರುಗಾಳಿ ಬೀಸಿದ್ದು, ಇದರಿಂದ ಎದೆಯೆತ್ತರಕ್ಕೆ ಬೆಳೆದು ನಿಂತಿದ್ದ ಜೋಳದ ಬೆಳೆ ನೆಲಕ್ಕುರುಳಿದೆ. ಸುಮಾರು 50 ಎಕರೆಗೂ ಅಧಿಕ ಪ್ರದೇಶದಲ್ಲಿ ಜೋಳದ ಬೆಳೆ ಹಾಳಾಗಿದೆ.
ಹೆಚ್ಚಿನ ಪ್ರಮಾಣದ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಇದರಿಂದ ನಿರಾಸೆಯಾಗಿದೆ. ನೆಲಕ್ಕೆ ಬಿದ್ದ ಜೋಳವನ್ನು ಇಲಿ-ಅಳಿಲುಗಳು ತಿಂದು ಹಾಳು ಮಾಡುತ್ತಿದ್ದು, ರೈತರನ್ನು ನಷ್ಟಕ್ಕೀಡು ಮಾಡಿದೆ.
ಈ ಬಾರಿ ಜೋಳ ಹೆಚ್ಚಾಗಿ ಬೆಳೆದಿರಲಿಲ್ಲ. ಇದರಿಂದ ಇಳುವರಿ ಹೆಚ್ಚಾಗಿ ಬಂದರೆ ಬೆಲೆ ಕೂಡ ಹೆಚ್ಚಾಗಿ ಸಿಗಬಹುದು ಎಂದೇ ಅಂದಾಜಿಸಿದ್ದರು. ಇನ್ನೂ ಒಂದು ತಿಂಗಳಲ್ಲಿ ಜೋಳ ಒಣಗುತ್ತಿತ್ತು. ಆದರೆ, ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಎಕರೆಗೆ 10 ಕ್ವಿಂಟಲ್ ಜೋಳದ ಬೆಳೆ ನಿರೀಕ್ಷೆಯಿತ್ತು. ಆದರೆ, ಈಗ ಬೆಳೆಯೆಲ್ಲ ನೆಲಕಚ್ಚಿದ್ದರಿಂದ ಮಾಡಿದ ಖರ್ಚು ಬರುವುದಿರಲಿ ಎದುರು ಸಾಲ ಮಾಡಿಕೊಳ್ಳುವ ಸ್ಥಿತಿ ರೈತರದ್ದಾಗಿದೆ.
ಪ್ರಕೃತಿ ವಿಕೋಪದಿಂದ ಬೆಳೆ ಹಾಳಾಗಿದ್ದು, ಅಧಿಕಾರಿಗಳು ಸೂಕ್ತ ಸಮೀಕ್ಷೆ ನಡೆಸಿದ ಬೆಳೆ ಹಾನಿ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.