ದಾವಣಗೆರೆ: ಬೇಡವಾದ ಮಕ್ಕಳ ರಕ್ಷಣೆಗೆ ಇನ್ನು ಮುಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಸ್ಪತ್ರೆಗಳಲ್ಲಿ ತೊಟ್ಟಿಲು ಇಡುವ ಕಾರ್ಯಕ್ರಮ ರೂಪಿಸಿದೆ ಎಂದು ಇಲಾಖೆಯ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್ ತಿಳಿಸಿದ್ದಾರೆ.
ಸೋಮವಾರ ಸರ್ಕಾರಿ ಬಾಲಕರ ಮಂದಿರದಲ್ಲಿ ಆರ್ಥಿಕ ಹಿಂದುಳಿದ ಮಕ್ಕಳ ಬೇಸಿಗೆ ಶಿಬಿರ ವಿದ್ಯಾ ವಿಹಾರ ಸಮಾರೋಪದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಇಷ್ಟವಿಲ್ಲದೆ ಮಕ್ಕಳನ್ನು ಹೆರುವವರು ಆ ನವಜಾತ ಶಿಶುವನ್ನ ಎಲ್ಲೆಂದರಲ್ಲಿ ಬೀಸಾಡುವ ಬದಲು ನಮ್ಮ ಇಲಾಖೆಯಿಂದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಇಡಲಾಗುವ ತೊಟ್ಟಿಲಲ್ಲಿ ಹಾಕಿ ಹೋದರೆ ಸಾಕು.
ನಾವು ಅವುಗಳನ್ನು ರಕ್ಷಣೆ, ಪಾಲನೆ-ಪೋಷಣೆ ಮಾಡುತ್ತೇವೆ ಎಂದರು. ಇಂದು ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬೀಸಾಡಿ ಹೋಗುವ ಪ್ರಕರಣ ಹೆಚ್ಚುತ್ತಿವೆ. ಅಂತಹ ಶಿಶುಗಳು ಜನರ ಕಣ್ಣಿಗೆ ಬಿದ್ದರೆ ರಕ್ಷಣೆ ಆಗಲಿವೆ. ಬೀಳದೇ ಹೋದರೆ ನಾಯಿ, ಹಂದಿ, ನೀರು ಪಾಲಾಗುವ ಆತಂಕ ಇರುತ್ತದೆ.
ಇದನ್ನು ತಪ್ಪಿಸುವ ಉದ್ದೇಶದಿಂದ ಈ ತೊಟ್ಟಿಲು ಇಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ತಿಳಿಸಿದರು. ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಬಾಲ ಭವನದ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಆಟಿಕೆ ರೈಲು ಬಂದಿದೆ. ಮಾರ್ಗ ಸಹ ಸಿದ್ಧಗೊಂಡಿದೆ. ಸಣ್ಣ ಪುಟ್ಟ ಕೆಲಸ ಮಾತ್ರ ಬಾಕಿ ಇವೆ.
ಒಟ್ಟು 2.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಪಾರ್ಕ್‌ನಲ್ಲಿ ಮಕ್ಕಳ ಆಟಿಕೆ ಅಳವಡಿಕೆಗೆ 50 ಲಕ್ಷ ರೂ. ಅನುದಾನ ಕೋರಲಾಗಿದೆ ಎಂದು ಅವರು ತಿಳಿಸಿದರು. ನಮ್ಮ ಇಲಾಖೆಯಿಂದ ನಡೆಸಲ್ಪಡುವ ಬಾಲ ಮಂದಿರಗಳಲ್ಲಿ ಈಗ 15 ಅನಾಥ ಮಕ್ಕಳಿದ್ದಾರೆ. ಅವುಗಳನ್ನು ನಾವು ದತ್ತು ಕೊಡಲು ಸಿದ್ಧರಿದ್ದೇವೆ.
ಆನ್‌ಲೈನ್ ಮೂಲಕ ಅರ್ಜಿ ಹಾಕಿ, ಇಚ್ಛೆಯುಳ್ಳವರು ಅವರನ್ನು ದತ್ತು ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದರು. ಬೆಂಗಳೂರಿನ ಟ್ಯಾಲೆಂಟ್ ಸರ್ಚ್ ಫೌಂಡೇಷನ್ ಅಧ್ಯಕ್ಷ ಡಾ| ಸಲೀಂ ಜಿ. ಸೊನೆಖಾನ್ ಮಾತನಾಡಿ, ರಾಜ್ಯ, ಕೇಂದ್ರ ಪಠ್ಯಕ್ರಮದಲ್ಲಿ ಮಕ್ಕಳ ಕಲೆ ಗುರುತಿಸುವ ವಿಷಯಗಳು ಇಲ್ಲ.
ಇಂಥ ಶಿಬಿರ ಮೂಲಕ ಮಕ್ಕಳ ಕಲೆ ಕಂಡು ಹಿಡಿದು ಪ್ರೋತ್ಸಾಹಿಸಬೇಕಾಗಿದೆ ಎಂದರು. ಅಸಾಧರಣ ಮತ್ತು ಮುರುಘಾಮಠದ ಜಯದೇವಶ್ರೀ ಪ್ರಶಸ್ತಿ ಪಡೆದ ಸಿರಿ ಎಂಬ ವಿದ್ಯಾರ್ಥಿ ಎರಡು ಪ್ರಶಸ್ತಿ ಮೊತ್ತ 20 ಸಾವಿರ ರೂ.ಗಳನ್ನು ಮಕ್ಕಳ ದಿನಾಚರಣೆ ನಿಧಿಗೆ ಕೊಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದಳು.