Advertisement
ಇರಾನ್‌ನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರತಿಬಂಧದ ಮೊದಲ ಹಂತ ಈ ವಾರದಲ್ಲಿ ಜಾರಿಗೆ ಬಂದಿದೆ. ಇದರಲ್ಲಿ ಭಾರತದ ಆತಂಕವನ್ನು ಕಡಿಮೆ ಮಾಡುವಂಥ ಯಾವ ಸಂಕೇತಗಳೂ ಸಿಗುತ್ತಿಲ್ಲ. ಅಮೆರಿಕದ ಕಾಂಗ್ರೆಸ್ ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಒಪ್ಪಂದದ ವಿಷಯಗಳಲ್ಲಿ ವಿನಾಯಿತಿ ಕೊಟ್ಟಿದೆಯಾದರೂ ಈ ವಿನಾಯಿತಿಗೂ ಹಲವು ನಿರ್ಬಂಧಗಳಿವೆ, ನಿರ್ದಿಷ್ಟ ಗಡುವು ವಿಧಿಸಲಾಗಿದೆ ಎನ್ನುವುದು ಗಮನಿಸಬೇಕಾದ ಅಂಶ. ಭಾರತ ಬಹಳ ವರ್ಷಗಳಿಂದಲೂ ರಾಷ್ಯಾದ ಅತಿದೊಡ್ಡ ಶಸ್ತ್ರಾಸ್ತ್ರ ಖರೀದಿದಾರ ದೇಶವಾಗಿದೆ. ಚೀನಾದ ನಂತರ ಭಾರತವೇ ಇರಾನ್‌ನ ಎರಡನೇ ಅತಿದೊಡ್ಡ ತೈಲ ಆಮದು ರಾಷ್ಟ್ರ.
ಇನ್ನು “ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್'(ಕಾಟ್ಸಾ) ಹೆಸರಿನ ಹೊಸ ಕಾನೂನು ಹೇಗಿದೆಯೆಂದರೆ ರಷ್ಯಾದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ದೇಶಗಳಿಗೆ ಬೆದರಿಕೆಯೊಡ್ಡುವುದಕ್ಕಾಗಿಯೇ ರೂಪಪಡೆದಿದೆ ಎನ್ನುವುದು ಸ್ಪಷ್ಟ. ಒಟ್ಟಲ್ಲಿ ಇಡೀ ಜಗತ್ತು ತನ್ನಿಂದಲೇ ಶಸ್ತ್ರಾಸ್ತ್ರ ಖರೀದಿ ಮಾಡಬೇಕು ಎನ್ನುವ ಮೂಲ ಉದ್ದೇಶ ಕಾಟ್ಸಾ ಕಾನೂನಿನ ಹಿಂದಿದೆ.
Related Articles
ಅಮೆರಿಕವು ಭಾರತ ಜೊತೆಗೆ ಇಂಡೋನೇಷ್ಯಾ, ವಿಯೆಟ್ನಾಂಗೂ ಕೂಡ ವಿನಾಯಿತಿ ನೀಡುವುದಕ್ಕೆ ಕಾರಣವೇನೆಂದರೆ ಈ ದೇಶಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅದು ಬಯಸುತ್ತಿದೆ ಎನ್ನುವುದೇ ಆಗಿದೆ. ಅತ್ತ ಟರ್ಕಿ ಕೂಡ ರಷ್ಯಾದಿಂದ ಎಸ್-400 ಖರೀದಿ ಮಾಡುತ್ತಿದೆ, ಆದರೆ ಇನ್ಯಾವ ಕಾರಣಕ್ಕೋ ಏನೋ ಅಮೆರಿಕದ ಸಂಸತ್ತು ಈ ನ್ಯಾಟೋ ದೇಶದ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿಬಿಟ್ಟಿದೆ. ಹಾಗೆಂದರೆ ಭಾರತ, ಇಂಡೋನೇಷ್ಯಾ ಮತ್ತು ವಿಟೆಯ್ನಾಂ ಮೇಲಿನ ಅಮೆರಿಕದ ಪರೋಕ್ಷ ಒತ್ತಡದ ಕಾರ್ಮೋಡಗಳು ಪೂರ್ಣವಾಗಿ ಸರಿದುಹೋಗಿಲ್ಲ ಎಂದಾಯಿತು. ಏಕೆಂದರೆ ಈ ಮೂರೂ ದೇಶಕ್ಕೂ ಪೂರ್ಣ ವಿನಾಯಿತಿ ದೊರೆತಿಲ್ಲ. ಅಮೆರಿಕವು ಇರಾನ್ ಮೇಲಿನ ಇಂಧನ ಸಂಬಂಧಿ ಪ್ರತಿಬಂಧಗಳ ಮೂಲಕ ಭಾರತದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಭಾರತವೀಗ ತನ್ನ ಒಟ್ಟೂ ತೈಲ ಆಮದಿನಲ್ಲಿ ಬಹುತೇಕ ಕಚ್ಚಾತೈಲವನ್ನು ಇರಾನ್‌ನಿಂದಲೇ ಪಡೆಯುತ್ತದೆ. ಅಂತಾರಾಷ್ಟ್ರಿಯ ಇಂಧನ ಮಾರುಕಟ್ಟೆಯ ಪ್ರಕಾರ 2040ರ ವೇಳೆಗೆ ಭಾರತವು ಪ್ರಪಂಚದ ಅತಿದೊಡ್ಡ ಕಚ್ಚಾ ತೈಲ ಗ್ರಾಹಕ ರಾಷ್ಟ್ರವಾಗಲಿದೆ. ಇರಾನ್‌ನೊಂದಿಗೆ ಭಾರತದ ನಿಕಟ ಸಂಪರ್ಕ ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ. ನಮ್ಮ ದೇಶವೇನಾದರೂ ಅಮೆರಿಕದ ಪರೋಕ್ಷ ಒತ್ತಡಕ್ಕೆ ಮಣಿದು ಇರಾನ್‌ನಿಂದ ವ್ಯಾಪಾರದಲ್ಲಿ ಬದಲಾವಣೆ ಮಾಡಿಕೊಂಡಿತೆಂದರೆ ಅದು ಎರಡೂ ರಾಷ್ಟ್ರಗಳ ನಡುವಿನ ರಾಜಕೀಯ ಸಹಯೋಗಕ್ಕೂ ಹಾನಿ ಮಾಡಲಿದೆ. ಅಲ್ಲದೇ ಇರಾನ್‌ನಲ್ಲಿನ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಬಹಾರ್ ಬಂದರಿನ ಮೇಲೆಯೂ ಯಾವ ರೀತಿಯ ಪರಿಣಾಮ ಉಂಟಾ ಗಲಿದೆ ಎನ್ನುವುದನ್ನು ನಾವು ಗಮನಿಸಬೇಕಾಗುತ್ತದೆ. ಈ ಬಂದರು ಇರಾನ್ ಮತ್ತು ಭಾರತವಷ್ಟೇ ಅಲ್ಲದೆ ಅಫ್ಘಾನಿಸ್ತಾನದ ವ್ಯಾಪಾರ ಶಕ್ತಿಯನ್ನೂ ಇಮ್ಮಡಿಸಲಿದೆ. ಇರಾನ್-ಭಾರತ-ಅಘಾನಿಸ್ಥಾನದ ಸಹಯೋಗದ ರೂಪಕವಾಗಿರುವ ಈ ಬಂದರು ಯೋಜನೆಯು ಆಫ್ಘಾನಿಸ್ತಾನಕ್ಕೆ ಆರ್ಥಿಕ ಅವಕಾಶಗಳ ಹೊಸ ದ್ವಾರವನ್ನೇ ತೆರೆಯಲಿದೆ ಎಂದು ಕಳೆದ ವರ್ಷ ಆಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನಾ ಜನರಲ್ ಒಬ್ಬರು ಹೇಳಿದ್ದರು.
ರಷ್ಯಾ ಮತ್ತು ಇರಾನ್‌ನ ಮೇಲೆ ಪ್ರತಿಬಂಧ ಹೇರಿ ಭಾರತವನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿರುವ ಅಮೆರಿಕವು ಇನ್ನೊಂದೆಡೆ ಹಿಂದೂ ಮಹಾಸಾಗರದಲ್ಲಿನ ತನ್ನ ಸ್ವಹಿತಾಸಕ್ತಿಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುವುದು ನಿರ್ವಿವಾದ. ಅಮೆರಿಕದ ಪ್ರತ್ಯಕ್ಷ ಮತ್ತು ಪರೋಕ್ಷ ನಡೆಗಳು ಭಾರತದ ವಿದೇ
ಶಾಂಗ ನೀತಿಗಳಿಗೆ ಸವಾಲು ಒಡ್ಡುತ್ತಿವೆ. ಇದನ್ನೆಲ್ಲ ಗಮನಿಸಿ ಕೇಂದ್ರ ಸರ್ಕಾರವು ಹೆಚ್ಚು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ.
Advertisement
* ಬ್ರಹ್ಮ ಚೇಲಾನಿ