Advertisement
ಮೂರು ಕಡೆ ತೈಲ ಸಂಗ್ರಹ ಸ್ಥಾವರಪೆಟ್ರೋಲಿಯಂ ಸಚಿವಾಲಯದ ಅಧೀನದ ಐ.ಎಸ್.ಪಿ.ಆರ್.ಎಲ್. (ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್) ವತಿಯಿಂದ ಭೂಗರ್ಭದಲ್ಲಿ ಮೂರು ಕಡೆ ನಿರ್ಮಿಸಿದೆ. ಉಡುಪಿ ಸಮೀಪದ ಪಾದೂರು ಸ್ಥಾವರದಲ್ಲಿ 2.5 ಮಿಲಿಯನ್ ಮೆ.ಟನ್ (1,693 ಕೋ.ರೂ ವೆಚ್ಚ), ಮಂಗಳೂರಿನ ಪೆರ್ಮುದೆ ಸ್ಥಾವರದಲ್ಲಿ 1.5 ಮಿಲಿಯನ್ ಮೆ.ಟನ್(1,227 ಕೋ.ರೂ.), ವಿಶಾಖಪಟ್ಟಣದಲ್ಲಿ 1.3 ಮಿಲಿಯನ್ ಮೆ.ಟನ್ (1,178 ಕೋ.ರೂ) ಸೇರಿದಂತೆ ಸುಮಾರು 5.3 ಮಿಲಿಯನ್ ಮೆಟ್ರಿಕ್ ಟನ್ ತೈಲ ಸಂಗ್ರಹದ ಗುರಿ ಹೊಂದಲಾಗಿದೆ. ಪಾದೂರುವಿನಲ್ಲಿ ಹೆಚ್ಚುವರಿಯಾಗಿ 2.5 ಮಿಲಿಯ ಮೆಟ್ರಿಕ್ ಟನ್ ಸಾಮರ್ಥ್ಯದ ಸ್ಥಾವರ ನಿರ್ಮಾಣವಾಗಲಿದೆ. ಇದು ತುರ್ತು ಸಂದರ್ಭಗಳಲ್ಲಿ ದೇಶದ 13 ದಿನಗಳ ಬೇಡಿಕೆ ಪೂರೈಸಬಹುದು. ಪಾದೂರು ಹಾಗೂ ಒಡಿಶಾದಲ್ಲಿ ಹೊಸದಾಗಿ ಎರಡು ಸ್ಥಾವರ ನಿರ್ಮಾಣವಾಗುವುದರಿಂದ ಒಟ್ಟೂ 25 ದಿನಗಳ ಅಗತ್ಯದಷ್ಟು ತೈಲ ಸಂಗ್ರಹವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪಾದೂರಿನಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ತೈಲಸಂಗ್ರಹಕ್ಕೆ ಪೆಟ್ರೋಲಿಯಂ ಸಚಿವಾಲಯ ಸೂಚಿಸಬೇಕಿದೆ. ಪೆರ್ಮುದೆ ಸ್ಥಾವರಕ್ಕೆ ಇರಾನ್ ಮತ್ತು ‘ಅಬುಧಾಬಿ ನ್ಯಾಷನಲ್ ಆಯಿಲ್ ಕಂಪೆನಿ’ (ಅಡ್ನೋಕ್) ತರಿಸಿದ ತೈಲವನ್ನು ಇಲ್ಲಿ ಸಂಗ್ರಹಿಸಲಾಗಿದೆ. ತೈಲದ ಒಂದು ಭಾಗವನ್ನು ಆಡ್ನಾಕ್ ಕಂಪೆನಿ ಭಾರತದ ಗ್ರಾಹಕರಿಗೆ ಪೂರೈಸಲಿದೆ. ಉಳಿದದ್ದು ತುರ್ತು ಸಂದರ್ಭಗಳಿಗೆ ಮೀಸಲು. ಇರಾನ್‌ನಿಂದ ಮಂಗಳೂರಿಗೆ ಕಚ್ಚಾ ತೈಲ ಆಮದು
ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲು ಭಾರತ, ಚೀನ ಸಹಿತ ಅನೇಕ ದೇಶಗಳಿಗೆ ಅಮೆರಿಕ ನ.4ರ ಗಡುವು ವಿಧಿಸಿದೆ. ಇದಕ್ಕೆ ತಪ್ಪಿದಲ್ಲಿ ಆರ್ಥಿಕ ನಿಷೇಧ ಅನಿವಾರ್ಯ ಎಂದಿದೆ ಅಮೆರಿಕ. ಇರಾಕ್ ಹಾಗೂ ಸೌದಿ ಅರೇಬಿಯಾದ ಅನಂತರ ಭಾರತಕ್ಕೆ ಮೂರನೇ ಅತೀಹೆಚ್ಚು ತೈಲ ಪೂರೈಸುವ ರಾಷ್ಟ್ರ ಇರಾನ್. 2017 ಅ.12ರಂದು ಇರಾನ್‌ನಿಂದ 2.60 ಲಕ್ಷ ಮೆಟ್ರಿಕ್ ಟನ್ ಮಿಕ್ಸೆಡ್ ಕಚ್ಚಾ ತೈಲವು ‘ಡಿನೊ’ ಬೃಹತ್ ನೌಕೆಯಲ್ಲಿ ಮಂಗಳೂರಿಗೆ ಆಮದಾಗಿತ್ತು. ಇದನ್ನು ಪೆರ್ಮುದೆ ತೈಲ ಸಂಗ್ರಹಾಗಾರ ಸ್ಥಾವರದಲ್ಲಿ ಸಂಗ್ರಹಿಸಿಡಲಾಗಿದೆ. ಬಳಿಕ ಇರಾನ್ ನಿಂದ 2.50 ಲಕ್ಷ ಮೆಟ್ರಿಕ್ ಟನ್ ತೈಲವನ್ನು ‘ಗ್ರೀಕ್ ವಾರಿಯರ್’ ಎಂಬ ಬೃಹತ್ ನೌಕೆಯ ಮೂಲಕ ತರಿಸಲಾಗಿತ್ತು. ಇವೆರಡನ್ನೂ ಮಂಗಳೂರಿನಲ್ಲಿ ಸಂಗ್ರಹಿಸಿಡಲಾಗಿದೆ. ಎಂ.ಆರ್.ಪಿ.ಎಲ್. ಸಂಸ್ಥೆಗೂ ಆಂಶಿಕ ಪ್ರಮಾಣದಲ್ಲಿ ಇರಾನ್ ನಿಂದ ಸದ್ಯ ತೈಲ ಆಮದು ಮಾಡಲಾಗುತ್ತಿದೆ. ಮುಂದೆಯೂ ಇರಾನ್‌ನಿಂದ ತೈಲ ಆಮದಿಗೆ ಭಾರತ ಸರಕಾರ ಚಿಂತನೆ ನಡೆಸುವಾಗಲೇ ಅಮೆರಿಕದ ನಿಲುವು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.
Related Articles
ನವಮಂಗಳೂರು ಬಂದರಿಗೆ ಆಗಮಿಸುವ ಕಚ್ಚಾತೈಲವನ್ನು ಹಡಗಿನಿಂದ ತೇಲುಜೆಟ್ಟಿ ಮೂಲಕ ತಣ್ಣೀರುಬಾವಿಯಲ್ಲಿರುವ ಐ.ಎಸ್.ಪಿ.ಆರ್.ಎಲ್.ನ ಪಂಪಿಂಗ್ ಸ್ಟೇಷನ್ ಗೆ ತಂದು ಬಳಿಕ ಪೆರ್ಮುದೆಯ ಭೂಗತ ಸಂಗ್ರಹಾಗಾರಕ್ಕೆ ಪಂಪಿಂಗ್ ಮಾಡಲಾಗುತ್ತಿದೆ. ಇದಕ್ಕಾಗಿ ತಣ್ಣೀರುಬಾವಿಯಿಂದ ಪೆರ್ಮುದೆಗೆ 12 ಕಿ.ಮೀ. ವರೆಗೆ 48 ಇಂಚಿನ ಪೈಪ್‌ಲೈನ್ ಅಳವಡಿಸಲಾಗಿದೆ. ಪೆರ್ಮುದೆಯಿಂದ ಪಾದೂರಿಗೂ 36 ಕಿ.ಮೀ. ವರೆಗೆ ತೈಲ ಸಾಗಣೆಗೆ 42 ಇಂಚಿನ ಪೈಪ್‌ಲೈನ್ ಅಳವಡಿಸಲಾಗಿದೆ.
Advertisement
— ದಿನೇಶ್ ಇರಾ