ಹೊಸದಿಲ್ಲಿ: ಗಡಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಅರೆಸೇನಾ ಸಿಬಂದಿಗೆ ಕಳಪೆ ದರ್ಜೆಯ ಆಹಾರ ನೀಡಲಾಗುತ್ತಿದೆ ಎಂದು ಬಿಎಸ್‌ಎಫ್ ಯೋಧನೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವಾಗಲೇ ಸಿಆರ್‌ಪಿಎಫ್ ಯೋಧನೊಬ್ಬ ಕೂಡ ತನ್ನ ದೂರು ಹೇಳಿಕೊಳ್ಳಲು ವಿಡಿಯೋ ಮೊರೆ ಹೋಗಿದ್ದಾನೆ.
ಸೇನಾ ಸಿಬಂದಿಗೆ ನೀಡಲಾಗುವ ವೇತನ ಹಾಗೂ ಭತ್ತೆಯಂತೆಯೇ ಅರೆಸೇನಾ ಪಡೆಯ ಸಿಬಂದಿಗೂ ಸಮಾನ ವೇತನ, ಭತ್ತೆ ನೀಡಬೇಕು ಎಂದು ಸಿಆರ್‌ಪಿಎಫ್ ಯೋಧನೊಬ್ಬ ಒತ್ತಾಯಿಸುವ ವಿಡಿಯೋ ಬೆಳಕಿಗೆ ಬಂದಿದೆ. ಅರೆಸೇನಾ ಪಡೆಯ ಸಮವಸ್ತ್ರ ಧರಿಸಿ, ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಈ ಯೋಧ ವಿಡಿಯೋ ಮಾಡಿದ್ದಾನೆ.
“ಈ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ವಿಡಿಯೋ ಮಾಡಿದ ಯೋಧನ ಹೆಸರು ಜೀತ್ ಸಿಂಗ್. ಆತನಿಗೆ ಸೇವೆ ಸಂಬಂಧಿ ದೂರುಗಳಿದ್ದವು. ಮಹಾ ನಿರ್ದೇಶಕ ದರ್ಜೆಯ ಅಧಿಕಾರಿಯೊಬ್ಬರು ಈಗಾಗಲೇ ಜೀತ್‌ಸಿಂಗ್ ಜತೆ ಸಂಪರ್ಕದಲ್ಲಿದ್ದಾರೆ’ ಎಂದು ದೇಶದ ಅತಿ ದೊಡ್ಡ ಅರೆಸೇನಾ ಪಡೆಯಾಗಿರುವ ಸಿಆರ್‌ಪಿಎಫ್ನ ಮಹಾನಿರ್ದೇಶಕರು ತಿಳಿಸಿದ್ದಾರೆ.
ಜೀತ್ ಸಿಂಗ್‌ನ ವಿಡಿಯೋ ಹಳೆಯದು. ಕಳೆದ ವರ್ಷ ಏಕ ಶ್ರೇಣಿ, ಏಕ ಪಿಂಚಣಿ (ಒಆರ್‌ಒಪಿ) ಹೋರಾಟ ನಡೆಯುತ್ತಿದ್ದಾಗಲೇ ಈ ವಿಷಯವನ್ನು ಗಮನಕ್ಕೆ ತಂದಿದ್ದ. ಅದನ್ನು ಏಳನೇ ವೇತನ ಆಯೋಗಕ್ಕೂ ತಿಳಿಸಲಾಗಿದೆ ಎಂದಿದ್ದಾರೆ.
ಯೋಧರ ದೂರುಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಅವರ ಸ್ಥಿತಿ ಸುಧಾರಣೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.