ಲಕ್ನೋ : ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಕುಟುಂಬದವರು ಇಂದು ಮಂಗಳವಾರ ಭಾರತೀಯ ವಾಯು ಪಡೆ ಪಾಕಿಸ್ಥಾನದ ಮೇಲೆ ನಡೆಸಿರುವ ವೈಮಾನಿಕ ಬಾಂಬ್ ದಾಳಿಯನ್ನು ಪ್ರಶಂಸಿಸಿ ಸ್ವಾಗತಿಸಿದ್ದಾರೆ.
ಇದರಿಂದ ತಮಗೆ ತೃಪ್ತಿ, ಸಮಾಧಾನ ಉಂಟಾಗಿದೆ ಎಂದವರು ಹೇಳಿದ್ದಾರೆ. ಮಾತ್ರವಲ್ಲದೆ ಪಾಕಿಸ್ಥಾನದಲ್ಲಿ ಎಲ್ಲೆಲ್ಲ ಉಗ್ರ ಶಿಬಿರಗಳು ಮತ್ತು ಉಗ್ರರು ಇದ್ದಾರೋ ಅವೆಲ್ಲವನ್ನೂ ಸರ್ವ ನಾಶ ಮಾಡಬೇಕೆಂದು ಭಾರತೀಯ ಸೇನೆಯನ್ನು ಕೋರಿದ್ದಾರೆ.
ಪಾಕಿಸ್ಥಾನದ ಬಾಲಕೋಟ್‌ನಲ್ಲಿರುವ ಜೈಶ್ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ದಾಳಿ ನಡೆಸಿ 300 ಉಗ್ರರನ್ನು ಬಲಿ ಪಡೆದಿರುವಲ್ಲಿ ನಮ್ಮ ಹೃದಯದಾಳದ ನೋವು ಸ್ವಲ್ಪ ಮಟ್ಟಿಗೆ ಶಮನಗೊಂಡಿರುವುದಾಗಿ ಹುತಾತ್ಮರ ಕುಟುಂಬದವರು ಹೇಳಿದ್ದಾರೆ.
ಭಾರತೀಯ ವಾಯು ಪಡೆಯ ಇಂದಿನ ದಾಳಿಗೆ ಉನ್ನಾವೋ ಸಂತ್ರಸ್ತೆ ರಾಜವಂತಿ ಹೇಳಿರುವುದು ಹೀಗೆ : ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಮೇಲಿನ ದಾಳಿಗೆ ಆದೇಶ ನೀಡಿರುವುದು ತಮ್ಮ ಪುತ್ರ ಯೋಧರನ್ನು ಕಳೆದುಕೊಂಡಿರುವ ಹಲವು ತಾಯಂದಿರಿಗೆ ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ.
ಇದೇ ರೀತಿ ಹುತಾತ್ಮ ಯೋಧ ಅಜಿತ್ ಸಿಂಗ್ ಅವರ ತಾಯಿ ಆಶೆ, ಹುತಾತ್ಮ ಯೋಧ ಅಜಿತ್ ಕುಮಾರ್ ಆಜಾದ್ ಅವರ ವಿಧವೆ ಮೀನಾ, ಹುತಾತ್ಮ ಯೋಧ ರಮೇಶ್ ಯಾದವ್ ಅವರ ಕುಟುಂಬದವರು ಪಾಕ್ ಮೇಲಿನ ವಾಯು ದಾಳಿಯನ್ನು ಸ್ವಾಗತಿಸಿದ್ದಾರೆ.