ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮೇಲೆ ಶುಕ್ರವಾರ ಉಗ್ರರು ದಾಳಿ ನಡೆಸಿದ್ದು, ಸಿಆರ್‌ಪಿಎಫ್ ಯೋಧರೊಬ್ಬರು ಹುತಾತ್ಮರಾಗಿ, 5 ವರ್ಷದ ಮಗು ಮೃತಪಟ್ಟಿದೆ.
ಅನಂತ್‌ನಾಗ್‌ನ ಬಿಜ್‌ಬೆಹರಾ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಹೆದ್ದಾರಿಯ ಭದ್ರತೆಗಾಗಿ ನಿಯೋಜಿಸಲ್ಪಟ್ಟ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಭಯೋತ್ಪಾದಕರು, ಸಿಆರ್‌ಪಿಎಫ್ ಗಸ್ತು ಪಡೆಯ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಪರಿಣಾಮ ಸಿಆರ್‌ಪಿಎಫ್ ಯೋಧ ಹಾಗೂ 5 ವರ್ಷದ ಮಗು ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಇಬ್ಬರೂ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಉಗ್ರರ ಹತ್ಯೆ: ಈ ನಡುವೆ ಕಣಿವೆ ರಾಜ್ಯದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದ್ದು, ಶ್ರೀನಗರದ ತ್ರಾಲ್ ಪ್ರದೇಶದಲ್ಲಿ ಶುಕ್ರವಾರ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದು, ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ.
ಗುರುವಾರ ರಾತ್ರಿ ಆರಂಭವಾದ ಎನ್‌ಕೌಂಟರ್ ಶುಕ್ರವಾರ ಮುಂಜಾನೆಯವರೆಗೂ ಮುಂದುವರಿದಿತ್ತು. ಪುಲ್ವಾಮಾ ಜಿಲ್ಲೆಯ ಅವಂತಿಪೋರಾದ ಚೇವಾ ಉಲಾರ್ ಎಂಬಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಎನ್‌ಕೌಂಟರ್‌ನಲ್ಲಿ ಒಬ್ಬ ಯೋಧ ಹಾಗೂ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಗುರುವಾರವಷ್ಟೇ ಲಷ್ಕರ್ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಸೋಪೋರ್ ಪ್ರದೇಶದಲ್ಲಿ ಸದೆಬಡಿಯಲಾಗಿತ್ತು.