ಶ್ರೀನಗರ : ಕಾಯಿಲೆಯಿಂದ ನರಳುತ್ತಿದ್ದ ತಮ್ಮ ಸಹೋದ್ಯೋಗಿಯೋರ್ವನಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕಿಸದೆ ಆತನ ಸಾವಿಗೆ ಕಾರಣರಾದ ಸಿಆರ್‌ಪಿಎಫ್ ಕಂಪೆನಿ ಕಮಾಂಡರ್ ಓರ್ವರನ್ನು ಅವರ ಅಧೀನದಲ್ಲಿರುವ ಕೆಲವು ಜವಾನರು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.
ಸಿಆರ್‌ಪಿಎಫ್ 28ನೇ ಬೆಟಾಲಿಯನ್‌ನ ಯೋಧ ಖುಪಮಣಿ ಮಿಸಾಲ್ ಎಂಬಾತ ಮೊನ್ನೆ ಶನಿವಾರ ರಾತ್ರಿ ಕೈಮೋಹ್ ಎಂಬಲ್ಲಿ ತೀವ್ರ ಅನಾರೋಗ್ಯ ಪೀಡಿತನಾಗಿದ್ದ. ಆತನನ್ನು ತಡವಾಗಿ ಅನಂತನಾಗ್‌ನಲ್ಲಿನ ಸಿಆರ್‌ಪಿಎಫ್ ಘಟಕದ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿ ಆತ ಮೃತಪಟ್ಟ ಎಂದು ಸಿಆರ್‌ಪಿಎಫ್ ಅಧಿಕಾರಿ ತಿಳಿಸಿದ್ದಾರೆ.
ತಮ್ಮ ಸಹೋದ್ಯೋಗಿಯ ಸಾವಿನಿಂದ ಕ್ರುದ್ಧರಾದ ಕೆಲವು ಜವಾನರು ಸಿಆರ್‌ಪಿಎಫ್ ಕಂಪೆನಿ ಕಮಾಂಡರ್ ಮೇಲೆ ಗಂಭೀರ ಹಲ್ಲೆ ನಡೆಸಿದರು.
ಈ ಘಟನೆಯ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ತನಿಖೆಯ ವರದಿಯನ್ನು ಆಧರಿಸಿ ತಪ್ಪುಗಾರರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಆರ್‌ಪಿಎಫ್ ವಕ್ತಾರ ಹೇಳಿದ್ದಾರೆ.
ವಾರದ ಹಿಂದಷ್ಟೇ ಕೆಲವು ಜವಾನರು ಸೋನಾಮಾರ್ಗ್‌ನಲ್ಲಿನ ಗುಂಡ್ ಎಂಬಲ್ಲಿರುವ ಪೊಲೀಸ್ ಠಾಣೆಯ ಮೇಲೆ ದಾಳಿಗೈದು ಏಳು ಪೊಲೀಸರ ಮೇಲೆ ಹಲ್ಲೆ ಗೈದಿದ್ದರು. ಅದಾಗಿ ಇಂದಿನ ಸೇನಾ ಜವಾನರ ಅಶಿಸ್ತಿನ ಘಟನೆ ನಡೆದಿರುವುದು ಕಳವಳಕ್ಕೆ ಕಾರಣವಾಗಿದೆ.