ಚಿಕ್ಕಮಗಳೂರು: ಹೊಸ ವರ್ಷಾಚರಣೆ, ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ರವಾಸಿಗರು ಹೋಮ್ ಸ್ಟೇ, ಲಾಡ್ಜ್ ಹಾಗೂ ರೆಸಾರ್ಟ್‌ಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದಾರೆ. ಡಿ.24ರಿಂದ 26ರ ವರೆಗೆ ದತ್ತ ಜಯಂತಿ ಪ್ರಯುಕ್ತ ಪಶ್ಚಿಮ ಘಟ್ಟ ಪ್ರದೇಶದ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಗಾಳಿಕೆರೆ ಹಾಗೂ ಮಾಣಿಕ್ಯಧಾರಾ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗರು ಬರದಂತೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಹೆಚ್ಚಿನ ಪ್ರವಾಸಿಗರು ಜಿಲ್ಲೆಯ ಭದ್ರಾ ಅಭಯಾರಣ್ಯ, ದೇವರ ಮನೆ, ಮುತ್ತೋಡಿ ಅಭಯಾರಣ್ಯ, ಕೆಮ್ಮಣ್ಣುಗುಂಡಿ ಸೇರಿ ಇತರೆಡೆ ಲಗ್ಗೆ ಇಡಲು ಮುಂದಾಗಿದ್ದಾರೆ.
Advertisement
ಆರ್ಥಿಕ ಚಟುವಟಿಕೆ ಚುರುಕುಮಂಡ್ಯ: ಡಿಸೆಂಬರ್‌ನಲ್ಲಿ ದುಪ್ಪಟ್ಟು ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಲಗ್ಗೆ ಇಡುತ್ತಿದ್ದಾರೆ. ಕೆಆರ್‌ಎಸ್ ಬೃಂದಾವನ, ರಂಗನತಿಟ್ಟು, ಮೇಲುಕೋಟೆ, ಶ್ರೀರಂಗಪಟ್ಟಣದ ಕರಿಘಟ್ಟ, ಎಡಮುರಿ, ಬಲಮುರಿ, ಪಾಂಡವಪುರದ ಕುಂತಿಬೆಟ್ಟ, ಮಳವಳ್ಳಿ ಗಗನಚುಕ್ಕಿ ಸೇರಿ ವಿವಿಧ ತಾಣ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಪ್ರವಾಸಿಗರ ಹೆಚ್ಚಳದಿಂದ ಸಹಜವಾಗಿಯೇ ವ್ಯಾಪಾರ, ವಹಿವಾಟು ಸೇರಿ ಆರ್ಥಿಕ ಚಟುವಟಿಕೆ ಚುರುಕುಗೊಂಡಿದೆ. ಆದರೆ ಪ್ರವಾಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆ ಕಡಿಮೆ ಇದೆ. ಕೆಆರ್‌ಎಸ್‌ನಲ್ಲಿ ವಾಸ್ತವ್ಯಕ್ಕೆ ಹೊಟೇಲ್ ಹೊರತುಪಡಿಸಿದರೆ, ಯಾವುದೇ ಪ್ರವಾಸಿ ತಾಣಗಳಲ್ಲಿ ಕೊಠಡಿ, ರೂಂ ವ್ಯವಸ್ಥೆ ಇಲ್ಲ.
ಮಂಗಳೂರು: ವರ್ಷಾಂತ್ಯಕ್ಕೆ ಕರಾವಳಿಯಲ್ಲಿ ಪ್ರವಾಸೋದ್ಯಮ ಗರಿಗೆದರಿದೆ. ಮಂಗಳೂರು, ಉಡುಪಿಯ ಹೊಟೇಲ್‌ಗಳಲ್ಲಿ ಕಳೆದ ಡಿ. 20ರಿಂದ ಜನವರಿ ಮೊದಲ ವಾರದವರೆಗೆ ನೋ ಬುಕಿಂಗ್. ಬಹುತೇಕ ಎಲ್ಲ ದುಬಾರಿ ಹೊಟೇಲ್, ಮಧ್ಯಮ ದರ್ಜೆಯ ವಸತಿಗೃಹಗಳು ರೆಸಾರ್ಟ್, ಹೋಂ ಸ್ಟೇ, ಸರ್ವಿಸ್ ಅಪಾರ್ಟ್‌ಮೆಂಟ್, ಬೀಚ್ ಗೆಸ್ಟ್‌ಹೌಸ್‌ಗಳೆಲ್ಲವೂ ಭರ್ತಿಯಾಗಿವೆ. ಕರಾವಳಿಯಲ್ಲಿನ ಧರ್ಮಸ್ಥಳ, ಕೊಲ್ಲೂರು, ಉಡುಪಿ ಅಷ್ಟಮಠ, ಕಟೀಲು ಸಹಿತ ತೀರ್ಥಕ್ಷೇತ್ರಗಳಲ್ಲಿ ಭಾರೀ ಜನಸಂದಣಿ ಕಂಡು ಬಂದಿದೆ. ಇದು ವರ್ಷಾಂತ್ಯದದ ವರೆಗೂ ಮುಂದುವರಿಯಲಿದೆ. ಪ್ರವಾಸಿಗರ ಸ್ವಾಗತಕ್ಕೆ ಉಡುಪಿಯಲ್ಲಿ ಸಿದ್ಧತೆ
ಉಡುಪಿ: ಪ್ರವಾಸೋದ್ಯಮ ಇಲಾಖೆ ಯಿಂದ ಅನುಮತಿ ಪಡೆದಿರುವ 121 ಹೋಂ ಸ್ಟೇ, 21 ಹೊಟೇಲ್ ಮತ್ತು ರೆಸಾರ್ಟ್, 1 ಅಮ್ಯೂಸ್‌ಮೆಂಟ್ ಪಾರ್ಕ್, 5 ವಾಟರ್‌ನ್ಪೋರ್ಟ್ಸ್, ಕುಂದಾಪುರ ಹಾಗೂ ಕಾಪುವಿನಲ್ಲಿ ಸ್ಕೂéಬಾ ಡೈವ್ ಹಾಗೂ ಕಾಂಡ್ಲಾವನ ಮಧ್ಯೆ 15 ಕಯಾಕಿಂಗ್ ತಾಣಗಳು ಜಿಲ್ಲೆ ಯಲ್ಲಿವೆ. ಇದರ ಜತೆಗೆ ಬೀಚ್, ಕುದ್ರು (ದ್ವೀಪ), ಜಲಪಾತ, ಹಿಲ್‌ಸ್ಟೇಶನ್ ಸಹಿತ ವಿವಿಧ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿ ನಿಂತಿವೆ. ಮಲ್ಪೆ ಬೀಚ್, ಕಾಪು ಬೀಚ್, ಪಡುಬಿದ್ರಿ, ಸೋಮೇಶ್ವರ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಹೊಟೇಲ್, ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ಈಗಾಗಲೇ ಬುಕ್ಕಿಂಗ್ ಆರಂಭವಾಗಿದೆ.
Related Articles
ಶಿವಮೊಗ್ಗ: ಜಿಲ್ಲೆಯಲ್ಲಿ ಕ್ರಿಸ್‌ಮಸ್‌ಗೆ ಚರ್ಚ್, ಮಾಲ್‌ಗಳು ಅಲಂಕಾರಗೊಂಡರೆ, ಹೊಸ ವರ್ಷಕ್ಕೆ ರೆಸಾರ್ಟ್, ಕ್ಲಬ್‌ಗಳು ಬಗೆ ಬಗೆಯ ಆಫರ್‌ಗಳನ್ನು ನೀಡಿ ಪ್ರವಾಸಿಗರನ್ನು ಸೆಳೆಯುತ್ತಿವೆ. ಸರಕಾರದ ಮಾರ್ಗಸೂಚಿಗಾಗಿ ಕಾಯುತ್ತಿದ್ದರೂ ಬುಕ್ಕಿಂಗ್ ಮಾತ್ರ ನಡೆಯುತ್ತಲೇ ಇದೆ. ಪ್ರಮುಖ ಪ್ರವಾಸಿ ತಾಣಗಳ ಸುತ್ತಮುತ್ತ ಹೊಟೇಲ್, ರೆಸಾರ್ಟ್, ಹೋಂ ಸ್ಟೇಗಳ ಬುಕ್ಕಿಂಗ್ ಜೋರಾಗಿದೆ. ಆಗುಂಬೆ, ಕೊಡಚಾದ್ರಿ, ನಗರ ಸೇರಿ ಹಲವು ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಬೇಡಿಕೆ ಇಲ್ಲ. ಈಗಲೂ ಸಾಕಷ್ಟು ರೂಮ್‌ಗಳು ಖಾಲಿ ಇವೆ ಎನ್ನುತ್ತಾರೆ ಕೊಡಚಾದ್ರಿ ನೇಚರ್ ರಿಟ್ರೀಟ್‌ನ ಪ್ರವೀಣ್. ಜೋಗ ಜಲಪಾತ ಬತ್ತಿದ್ದರೂ ಪ್ರವಾಸಿಗರಿಗೆ ಕುತೂಹಲ ಬತ್ತಿಲ್ಲ. ಜೋಗ ಸುತ್ತಮುತ್ತಲ 13 ಹೋಂ ಸ್ಟೇಗಳು, 2 ರೆಸಾರ್ಟ್‌ಗಳು ಫುಲ್ ಆಗಿವೆ.
Advertisement
ವಾಣಿಜ್ಯೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಮೈಸೂರು: ಸಾಲು ಸಾಲು ರಜೆ ಹಿನ್ನೆಲೆ ನಗರದ ಪ್ರಮುಖ ಹೊಟೆಧೀಲ್‌ಗಳಲ್ಲಿ ರೂಮ್‌ಗಳ ಕಾಯ್ದಿರಿಸುವಿಕೆ ಹೆಚ್ಚಾಗಿದೆ. ಈಗಾಗಲೇ ಶೇ.90ರಷ್ಟು ಕೊಠಡಿಗಳು ಬುಕ್ ಆಗಿದ್ದು, ಶನಿವಾರಕ್ಕೆ ಈ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಹೆಚ್ಚು ಪ್ರವಾಸಿಗರ ಆಗಮನದಿಂದ ಹೊಟೇಲ್ ಉದ್ಯಮ ಮತ್ತು ವಾಣಿಜ್ಯೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಕ್ಕಿದಂತಾಗಿದೆ. ಪ್ರವಾಸೋದ್ಯಮವನ್ನೇ ನಂಬಿರುವ ಪ್ರವಾಸಿ ಟ್ಯಾಕ್ಸಿ , ಆಟೋ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಿಗಳು, ಮಾಲ್, ಚಿತ್ರಮಂದಿರ, ಸಾರಿಗೆ ಸೇರಿ ಎಲ್ಲ ವಲಯಗಳಲ್ಲೂ ವ್ಯಾಪಾರ ಚಟುವಟಿಕೆ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಬಂಡೀಪುರದ ಜಂಗಲ್ ಲಾಡ್ಜಸ್ ಭರ್ತಿ
ಚಾಮರಾಜನಗರ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟ, ಬಂಡೀಪುರ, ಬಿಳಿಗಿರಿ ರಂಗನ ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ವಸತಿ ಗೃಹಗಳಲ್ಲಿ ರೂಮ್‌ಗಳು ಸಂಪೂರ್ಣ ಬುಕ್ ಆಗಿವೆ. ಬಂಡೀಪುರದ ಜಂಗಲ್ ಲಾಡ್ಜಸ್ ಭರ್ತಿಯಾಗಿದೆ. ಬಿಳಿಗಿರಿರಂಗನಾಥಸ್ವಾಮಿಯ ದೇವಾಲಯ ನೋಡಲು ಹಾಗೂ ನಿಸರ್ಗ ಸಿರಿಯನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿ ಸುತ್ತಾರೆ. ಇಲ್ಲಿ ಸರಕಾರಿ ಬಿಳಿಗಿರಿ ಭವನ, ಹೊಟೇಲ್ ಮಯೂರ, ಖಾಸಗಿಯ ಶ್ವೇತಾದ್ರಿ, ಗೊರುಕನ ಮತ್ತಿ ತರ ಬೆರಳೆಣಿಕೆಯಷ್ಟು ವಸತಿ ಗೃಹಗಳಿವೆ. ಕೆ.ಗುಡಿಯಲ್ಲಿ ಅರಣ್ಯ ಇಲಾಖೆ ಕಾಟೇಜ್‌ಗಳೂ ಭರ್ತಿಯಾಗಿವೆ. ಹಾವೇರಿ: ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ
ಹಾವೇರಿ: ಶಿಗ್ಗಾವಿ ತಾಲೂಕಿನ ಗೊಟಗೋಡಿ ಉತ್ಸವ ರಾಕ್ ಗಾರ್ಡನ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ ಈಗ ಶಾಲಾ, ಕಾಲೇಜುಗಳ ಶೈಕ್ಷಣಿಕ ಪ್ರವಾಸ ದಿನಗಳಾದ ಹಿನ್ನೆಲೆಯಲ್ಲಿ ನಿತ್ಯ ನೂರಾರು ವಿದ್ಯಾರ್ಥಿಗಳು ಗಾರ್ಡನ್‌ಗೆ ಭೇಟಿ ನೀಡುತ್ತಿದ್ದಾರೆ. ಶಿಗ್ಗಾವಿ ತಾಲೂಕಿನ ಗಂಗಿಬಾವಿ ರೆಸಾರ್ಟ್‌ನಲ್ಲೂ ಪ್ರವಾಸಿಗರ ದಂಡು ಕಂಡು ಬರುತ್ತಿದೆ. ಕ್ರಿಸ್‌ಮಸ್, ಹೊಸ ವರ್ಷದ ಸಂಭ್ರಮ ಆಚರಿಸಲು ಪ್ರವಾಸಿಗರು ಮುಂಗಡವಾಗಿ ರೆಸಾರ್ಟ್ ಬುಕ್ಕಿಂಗ್ ಮಾಡುತ್ತಿದ್ದಾರೆ. ಪ್ರಮುಖ ಪ್ರವಾಸಿ ತಾಣಗಳಾದ ಕಾಗಿನೆಲೆ ಗಾರ್ಡನ್, ಶಿಗ್ಗಾವಿ ತಾಲೂಕಿನ ಬಾಡದ ಕನಕದಾಸರ ಅರಮನೆ, ಬಂಕಾಪುರದ ನವಿಲುಧಾಮಕ್ಕೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಬೇಡಿಕೆ ಹೆಚ್ಚಿದ್ದರಿಂದ ಪ್ರತ್ಯೇಕ ದರ ನಿಗದಿ
ಹಾಸನ: ಬೇಲೂರು, ಹಳೆಬೀಡು ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಪರಿಸರ ಪ್ರವಾಸೋದ್ಯಮಕ್ಕೆ ಇತ್ತೀಚಿಗೆ ಬೇಡಿಕೆ ಹೆಚ್ಚುತ್ತಿದ್ದು, ಸಕಲೇಶಪುರ ತಾಲೂಕಿನ ರೆಸಾರ್ಟ್‌ಗಳು , ಹೋಂ ಸ್ಟೇಗಳು ವಾರದ ಹಿಂದೆಯೇ ಮುಂಗಡ ಬುಕಿಂಗ್ ಆಗಿವೆ. ವಾರಾಂತ್ಯದ ದಿನಗಳಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಆ ದಿನಗಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ಪ್ರಮುಖ ಪ್ರವಾಸಿ ಸ್ಥಳಗಳಾದ ಮಂಜ್ರಾಬಾದ್ ಕೋಟೆ, ಬಿಸಿಲೆ ಘಾಟ್, ಬೆಟ್ಟದಬೈರವೇಶ್ವರ ದೇವಸ್ಥಾನ, ಮೂಕನಮನೆ ಜಲಪಾತ, ಪಟ್ಟಲ ಬೆಟ್ಟ ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ರೆಸಾರ್ಟ್ ಮತ್ತು ಹೋಂಸ್ಟೇಗಳು ಬಹುತೇಕ ಬುಕ್ಕಿಂಗ್ ಆಗಿದ್ದು, ಸ್ಥಳೀ ಯರನ್ನು ಸಂಪರ್ಕಿಸಿ ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಕೊಠಡಿಗಳಿಗಾಗಿ ಪ್ರವಾಸಿಗರು ದುಂಬಾಲು ಬೀಳುತ್ತಿದ್ದಾರೆ. ಬಡವರ ಪಾಲಿನ ಊಟಿಯಲ್ಲೂ ಜನಸಂದಣಿ
ಚಿಕ್ಕಬಳ್ಳಾಪುರ: ವಿಶ್ವ ವಿಖ್ಯಾತ ನಂದಿಗಿರಿಧಾಮ ಹಾಗೂ ಈಶಾ ಕೇಂದ್ರದ ಆದಿಯೋಗಿ ವೀಕ್ಷಣೆಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಬಡವರ ಪಾಲಿನ ಊಟಿಯೆಂದೇ ಖ್ಯಾತಿ ಪಡೆದಿರುವ ನಂದಿ ಗಿರಿಧಾಮಕ್ಕೆ ಪ್ರೇಮಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಶೈಕ್ಷಣಿಕ ಪ್ರವಾಸದ ಸಮಯ ಆಗಿರುವುದರಿಂದ ನಂದಿಬೆಟ್ಟಕ್ಕೆ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಚಿಂತಾಮಣಿ ತಾಲೂಕಿನ ಕೈವಾರ, ಕೈಲಾಸಗಿರಿ, ಮುರಗಮಲ್ಲ ದರ್ಗಾಗೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಇನ್ನೂ ದಕ್ಷಿಣ ಕಾಶಿಯೆಂದು ಖ್ಯಾತಿ ಪಡೆದಿರುವ ನಂದಿಯ ಬೋಗನಂದೀಶ್ವರ, ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ದೇವಾಲಯಗಳಿಗೂ ಪ್ರವಾಸಿಗರ ಭೇಟಿ ಹೆಚ್ಚಾಗಿದೆ.