ಹೊಸಪೇಟೆ: ಮಳೆ ನಡುವೆಯೂ ವಿಕೇಂಡ್‌ನಲ್ಲಿ ಹಂಪಿಗೆ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರ ಆಗಮಿಸಿ, ಸ್ಮಾರಕ ವೀಕ್ಷಣೆ ಮಾಡಿದರು. ಆಷಾಢಮಾಸ, ವೀಕೆಂಡ್ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂಪಿ ಕಡೆ ಮುಖಮಾಡಿದ ಪ್ರವಾಸಿಗರು, ಮೊದಲು ವಿರೂಪಾಕ್ಷೇಶ್ವರ, ಪಂಪಾದೇವಿ ಹಾಗೂ ಭುವನೇಶ್ವರಿ ದೇವಿ ದರ್ಶನ ಪಡೆದರು.
ಬಳಿಕ ಪರಿವಾರ ಸಮೇತ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿ ಕಣ್ತುಂಬಿಕೊಂಡರು. ಹೇಮಕೂಟ, ಎದುರು ಬಸವಣ್ಣ ಮಂಟಪ, ಸಾಸವಿಕಾಳು ಗಣಪತಿ, ಕಡಲೆಕಾಳು ಗಣಪತಿ, ಕೃಷ್ಣ ದೇವಾಲಯ, ಉಗ್ರನರಸಿಂಹ, ಬಡವಿಲಿಂಗ, ಭೂಮಿಮಟ್ಟದ ಶಿವಾಲಯ, ಹಾಜರರಾಮ ದೇಗುಲ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ, ಕಮಲ ಮಹಲ್, ಗಜಶಾಲೆ, ವಿಜಯವಿಠಲ ದೇವಾಲಯ ಆವರಣದಲ್ಲಿ ಪ್ರವಾಸಿಗರು ಕಂಡು ಬಂದರು.
ಟಿ.ಬಿ.ಡ್ಯಾಂಗೆ ಜನಸಾಗರ: ನೀರಿನ ಸಂಗ್ರಹ ಹೆಚ್ಚಾಗಿ ತುಂಗಭದ್ರಾ ಜಲಾಶಯ ಮೈದುಂಬಿಕೊಳ್ಳುತ್ತಿಂದತೇ ಟಿ.ಬಿ. ಡ್ಯಾಂ ವೀಕ್ಷಣೆ ಮಾಡಲು ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಜಲಾಶಯ ವೀಕ್ಷಣೆ ಮಾಡಿದ ಬಳಿಕ, ಕೆಳಭಾಗದ ಉದ್ಯಾನವನದಲ್ಲಿ ಸಂಗೀತ ಕಾರಂಜಿ ವೀಕ್ಷಿಸಿ ಕಣ್ತುಂಬಿಕೊಂಡರು.
ಜಲಾಶಯದ ಹಿನ್ನೀರಿನ ಗುಂಡಾ ಪ್ರದೇಶದಲ್ಲಿ ನೀರಿನ ಭೋರ್ಗರೆತ ಕಂಡು ಪುಳಕಿತರಾದರು. ಒಟ್ಟಾರೆ ಹಂಪಿಯಲ್ಲಿ ಪ್ರವಾಸಿಗರಿಂದ ಆರ್ಥಿಕ ಚಟುವಟಿಕೆ ವೇಗವನ್ನು ಪಡೆದವು. ಪೊಲೀಸ್ ಮತ್ತು ಗೃಹರಕ್ಷಕದಳದವರು ಸಾರ್ವಜನಿಕರು ತುಂಗಭದ್ರ ನದಿಯ ಒಳಗಡೆ ಹೋಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.
ಶನಿವಾರ ಮತ್ತು ಭಾನುವಾರ ಇದ್ದ ಕಾರಣ ತುಂಬಿ ಹರಿಯುತ್ತಿರುವ ತುಂಗಭದ್ರಾ ಜಲಾಶಯದಲ್ಲಿನ ನೀರಿನ ರುದ್ರರಮಣೀಯ ನರ್ತನೆ ಕಣ್ತುಂಬಿಕೊಳ್ಳಲು ಪ್ರಕೃತಿ ಪ್ರವಾಸಿಗರು ಲಘು ಪ್ರವಾಸ ಕೈಗೊಂಡು, ಹಂಪೆ ಮತ್ತು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುವ ಮೂಲಕ ಖುಷಿಯ ಅನುಭೂತಿ ಪಡೆದರು.