Advertisement
ಅಗಲ ಕಿರಿದಾದ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ವಾಹನದಿಂದಾಗಿ ಟ್ರಾಫಿಕ್ ಜಾಮ್ ಪ್ರತಿನಿತ್ಯದ ಸಮಸ್ಯೆಯಾಗಿ ಮಾರ್ಪಟ್ಟಿದೆ. ಮಲ್ಪೆಯ ಸರ್ಕಲ್‌ನಿಂದ ಹಿಡಿದು ಕಲ್ಮಾಡಿವರೆಗೂ ಸುಮಾರು ಒಂದೂವರೆ ಕಿ.ಮೀ. ಉದ್ದಕ್ಕೆ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಅಡ್ಡಾದಿಡ್ಡಿ ವಾಹನವನ್ನು ನುಗ್ಗಿಸುವ ಚಾಲಕರಂತೂ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದ್ದಾರೆ.
Related Articles
Advertisement
ಇಕ್ಕಟ್ಟಾದ ರಸ್ತೆ
ಮಲ್ಪೆ ಪ್ರಮುಖ ಮೀನುಗಾರಿಕಾ ಬಂದರು ಆಗಿ ಅಭಿವೃದ್ಧಿಯನ್ನು ಹೊಂದುತ್ತಿದ್ದು ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದಕ್ಕೆ ಪೂರಕದ ರಸ್ತೆಯ ವಿಸ್ತರಣೆ ಮತ್ತು ಅಭಿವೃದ್ಧಿ ಆಗುತ್ತಿಲ್ಲ. 60-70 ವರ್ಷಗಳ ಹಿಂದೆ ಇದ್ದ ಇಕ್ಕಟ್ಟಾಗಿರುವ ರಸ್ತೆ ಈಗಲೂ ಅದೇ ರೀತಿ ಇದೆ. ರಸ್ತೆ ವಿಸ್ತರಣೆ ಆಗುತ್ತದೆ ಎಂಬ ಮಾತು ಕಳೆದ 45 ವರ್ಷದಿಂದ ಕೇಳಿ ಬರುತ್ತಲೇ ಇದೆ. ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಗುರುತಿಸಿಕೊಂಡಿದೆ. ವಿಸ್ತರಣೆ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ ಎನ್ನಲಾಗಿದೆ.
ಸಮಸ್ಯೆಗಳಿಗೆ ಪರಿಹಾರ
ಮಲ್ಪೆ ಆದಿವುಡುಪಿ ಚತುಷ್ಪತ ರಸ್ತೆ ಟೆಂಡರ್ ಈಗಾಗಲೇ ಅಂತಿಮವಾಗಿದೆ. ಅನುಮೋದನೆಗೆ ದಿಲ್ಲಿಗೆ ಹೋಗಿದೆ. ವಾರದೊಳಗೆ ಆ ಪ್ರಕ್ರಿಯೆ ಮುಗಿಯಲಿದೆ. ಭೂ ಸ್ವಾಧೀನ ಪ್ರಥಮ ಹಂತ ಆಗಿದ್ದು, ಇನ್ನು 3ಡಿ ಬರಲಿಕ್ಕಿದೆ. ಇದೆಲ್ಲ ಪ್ರಕ್ರಿಯೆಗಳು ವಿಳಂಬವಾಗುತ್ತದೆಂದು ಕುಂದಾಪುರ ಸಹಾಯಕ ಕಮಿಷನರ್‌ಗೆ ಕೊಡಬೇಕು ಎಂದು ಒತ್ತಡ ಹೇರಿದ್ದೇವೆ. 3 ತಿಂಗಳೊಳಗೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಬೇಕೆಂದಿದ್ದೇವೆ. ಬಂದರು ಗೇಟ್ ವರೆಗೆ ಕಾಂಕ್ರೀಟ್ ರಸ್ತೆಯಾಗಲಿದ್ದು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. -ಕೆ. ರಘುಪತಿ ಭಟ್, ಶಾಸಕರು, ಉಡುಪಿ
ವಿಸ್ತರಣೆ ಒಂದೇ ಪರಿಹಾರ
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಟೆಂಪೋ ಮಾಲಕರ ಚಾಲಕರ ಮತ್ತು ಮಲ್ಪೆ ಪೊಲೀಸ್ ಠಾಣೆಯ ಸಹಕಾರದಲ್ಲಿ ಸಭೆ ಕರೆದು ಚರ್ಚಿಸಲಾಗಿತ್ತು. ಮೀನುಗಾರಿಕೆ ಆರಂಭದ 3 ತಿಂಗಳು ಮಂಜುಗಡ್ಡೆ ಹಾಗೂ ಮೀನಿನ ವಾಹನಗಳನ್ನು ಕೊಳ, ಸಿಟಿಜನ್ ಮಾರ್ಗವಾಗಿ ಆಗಮಿಸಲು, ತೆರಳಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಾಗಿತ್ತು. ಈ ಸಮಸ್ಯೆಗೆ ರಸ್ತೆಯ ವಿಸ್ತರಣೆ ಒಂದೇ ಪರಿಹಾರ ಮಾರ್ಗ. -ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮೀನುಗಾರರ ಸಂಘ ಮಲ್ಪೆ
ನಟರಾಜ್ ಮಲ್ಪೆ