ಬೆಂಗಳೂರು: ಕಳೆದ ಎಂಟು ದಿನಗಳಲ್ಲಿ ಖಾದಿ ಉತ್ಸವಕ್ಕೆ 25 ಸಾವಿರ ಜನ ಭೇಟಿ ನೀಡಿದ್ದು, ಇದುವರೆಗೆ 8.23 ಕೋಟಿ ರೂ. ವಹಿವಾಟು ನಡೆದಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ರಮೇಶ್ ಎನ್. ಯಲುವನಹಳ್ಳಿ ತಿಳಿಸಿದರು.
ಜ.2ರಿಂದ ಆರಂಭಗೊಂಡ ಉತ್ಸವಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ದೊರೆಯುತ್ತಿದೆ. ನಿತ್ಯ ಸರಾಸರಿ ಮೂರು ಸಾವಿರ ಜನ ಭೇಟಿ ನೀಡುತ್ತಿದ್ದು, ಪ್ರತಿ ದಿನ ಅಂದಾಜು ಒಂದು ಕೋಟಿ ರೂ. ವಹಿವಾಟು ನಡೆಯುತ್ತಿದೆ. ತಿಂಗಳಾಂತ್ಯಕ್ಕೆ 40 ಕೋಟಿ ರೂ. ವಹಿವಾಟು ನಿರೀಕ್ಷಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಹತ್ತುಹಲವು ಕ್ರಮಗಳನ್ನು ಕೈಗೊಂಡಿದ್ದು, ರಜಾ ದಿನಗಳಲ್ಲಿ ಖಾದಿ ಫ್ಯಾಷನ್ ಶೋ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಷ್ಟೇ ಅಲ್ಲ, ಐನಾಕ್ಸ್ ಥಿಯೇಟರ್‌ಗಳು, ಮೆಟ್ರೋ ನಿಲ್ದಾಣಗಳು, ರೈಲು ನಿಲ್ದಾಣಗಳು, ಎಫ್ಎಂ ರೇಡಿಯೊ, ಟಿವಿಗಳಲ್ಲಿ ಪ್ರಚಾರ ಮಾಡಲಾಗುತ್ತಿದ್ದು, ಹೊಸ ವರ್ಗವನ್ನು ಖಾದಿಯತ್ತ ಸೆಳೆಯುವಲ್ಲಿ ಇದರಿಂದ ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಕಳೆದ ವರ್ಷ ಉತ್ಸವದಕ್ಕೆ 1.25 ಲಕ್ಷ ಜನ ಭೇಟಿ ನೀಡಿದ್ದು, 31 ಕೋಟಿ ರೂ. ವಹಿವಾಟು ನಡೆದಿತ್ತು. ವಾರಾಂತ್ಯದಲ್ಲಿ ಜನದಟ್ಟಣೆ ಹೆಚ್ಚಿರುವುದು ಕಂಡುಬಂದಿದೆ. ಉತ್ಸವದಲ್ಲಿ 203 ಮಳಿಗೆಗಳಲ್ಲಿ 105 ಮಳಿಗೆಗಳು ಖಾದಿ ಬಟ್ಟೆಗಳಿಗೆ ಸಂಬಂಧಿಸಿದ್ದಾಗಿವೆ ಎಂದ ಅವರು, ರಾಜ್ಯದ 62 ಖಾದಿ ಮಳಿಗೆಗಳು, ಹೊರ ರಾಜ್ಯದ 43 ಕೈಗಾರಿಕಾ ಮಳಿಗೆಗಳು ಇವೆ.
ಉತ್ಸವದಲ್ಲಿ ಮಳಿಗೆಗಳನ್ನು ಹಾಕಿರುವ ಉತ್ಪಾದಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು. ಪ್ರಧಾನಿ ಹಾಗೂ ಮುಖ್ಯಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಗಳಡಿ ರಾಷ್ಟ್ರೀಕೃತ ಬ್ಯಾಂಕ್‌ಗಳು, ಸಹಕಾರ ಮತ್ತು ಗ್ರಾಮೀಣ ಬ್ಯಾಂಕ್‌ಗಳಡಿ ಖಾದಿ ಉದ್ಯೋಗಸ್ಥರು ಸಾಲ ಪಡೆಯಬಹುದು ಎಂದ ಅವರು, ಗ್ರಾಮಗಳಲ್ಲಿ 8,600 ಖಾದಿ ಕೈಗಾರಿಕಾ ಘಟಕಗಳು ಕಾರ್ಯನಿರ್ವಸುತ್ತಿದ್ದು,
70 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ದೊರಕಿದೆ ಎಂದು ಹೇಳಿದರು. ಪ್ರತಿ ವರ್ಷ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಖಾದಿ ವಸ್ತುಪ್ರದರ್ಶನ ಏರ್ಪಡಿಸಲಾಗಿದ್ದು, ಈ ಬಾರಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸರ್ಕಾರದ ಸಹಯೋಗದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು. ಮಂಡಳಿ ನಿರ್ದೇಶಕ ಸೋಮಶೇಖರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭವಸ್ವಾಮಿ ಉಪಸ್ಥಿತರಿದ್ದರು.