Advertisement

ಮಳೆ ಅಬ್ಬರಕ್ಕೆ ಜಮೀನಲ್ಲೇ ಕೊಳೆಯುತ್ತಿರುವ ಬೆಳೆಗಳು!

11:25 PM Oct 20, 2024 | Team Udayavani |

ಬೆಂಗಳೂರು/ಹುಬ್ಬಳ್ಳಿ/ಮಣಿಪಾಲ: ಉತ್ತರಕರ್ನಾಟಕ ಹಾಗೂ ಮಧ್ಯಕರ್ನಾಟಕ, ಮಲೆನಾಡು, ಹಳೇ ಮೈಸೂರು ಹಾಗೂ ಕರಾವಳಿ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಚಿತ್ರಾ ನಕ್ಷತ್ರದ ಮಳೆ ಕೃಷಿಕರಿಗೆ ಭಾರೀ ಆಘಾತ ನೀಡಿದೆ. ಕೃಷಿ ಭೂಮಿಯಲ್ಲೇ ಬೆಳೆ ಕೊಳೆಯುತ್ತಿದ್ದು, ಇಳುವರಿ ಕುಸಿತದ ಜತೆಗೆ ಭಾರೀ ನಷ್ಟದ ಭೀತಿ ಎದುರಾಗಿದೆ.

Advertisement

ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು, ಹಿಂಗಾರು ಬಿತ್ತನೆಗೆ ಅಡ್ಡಿಯಾಗಿರುವುದಲ್ಲದೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೂ ಹಾನಿ ಉಂಟುಮಾಡಿದೆ. ಭತ್ತ, ಮೆಕ್ಕೆಜೋಳ, ತೊಗರಿ, ಈರುಳ್ಳಿ, ಹತ್ತಿ, ಕಬ್ಬು, ಅಡಿಕೆ, ಶೇಂಗಾ, ಸೋಯಾಬೀನ್‌, ಮೆಣಸಿನಕಾಯಿ, ಸೂರ್ಯಕಾಂತಿ, ಅರಿಶಿನ, ಕಾಫಿ, ಕಾಳುಮೆಣಸು, ರಾಗಿ ಬೆಳೆಗಳ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಳೆ ಕೊಳೆಯುವ ಆತಂಕ ಉಂಟಾವಾಗಿದೆ. ಮಳೆ ಹೀಗೆ ಮುಂದುವರಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ.
ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗಗಳಲ್ಲಿ ಕಟಾವಿಗೆ ಬಂದಿದ್ದ ಬೆಳೆ ನೀರು ಪಾಲಾಗಿದ್ದು, ರೈತರು ಆತಂಕದಲ್ಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 407 ಹೆಕ್ಟೇರ್‌ ಪ್ರದೇಶದ ಮೆಕ್ಕೆಜೋಳ, ಜೋಳ, ಭತ್ತದ ಬೆಳೆಗಳು ಹಾನಿಗೀಡಾಗಾಗಿವೆ. ಧಾರವಾಡ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು, ಹಿಂಗಾರು ಬಿತ್ತನೆಗೆ ಅಡ್ಡಿಯಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗೆ ತೀವ್ರ ಹಾನಿಯಾಗಿದೆ. ಹಾವೇರಿ ಜಿಲ್ಲೆಯಲ್ಲಿ 1,338 ಹೆಕ್ಟೇರ್‌ ಕೃಷಿ ಬೆಳೆ ಹಾಗೂ 30.25 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಹಾಗೂ ನದಿ ನೀರಿನ ಹರಿವಿನಿಂದ 440 ಹೆಕ್ಟೇರ್‌ ಪ್ರದೇಶದಷ್ಟು ಬೆಳೆ ಹಾನಿಯಾಗಿದೆ.

ಗದಗ ಜಿಲ್ಲೆಯಲ್ಲಿ 3 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಬಳ್ಳಾರಿ ಜಿಲ್ಲೆಯಲ್ಲಿ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳು ಹಾನಿಯಾಗಿವೆ. ದಾವಣಗೆರೆ ಜಿಲ್ಲೆಯಲ್ಲಿ ಕಟಾವು ಹಂತದಲ್ಲಿರುವ ಮೆಕ್ಕೆಜೋಳ ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಈ ಬಾರಿ ಶೇ. 20-30ರಷ್ಟು ಇಳುವರಿ ಕುಸಿತವಾಗುವ ಸಾಧ್ಯತೆಯಿದೆ.

ಶಿವಮೊಗ್ಗ ಜಿಲ್ಲೆಯ ಭತ್ತಕ್ಕೆ ಕೀಟಬಾಧೆ, ಅಡಕೆಗೆ ಕೊಳೆ ಬಾಧೆ, ಮೆಕ್ಕೆಜೋಳ ಕಟಾವಿಗೆ ತೊಂದರೆಯಾಗಿದೆ. ಮಳೆ ಆಶ್ರಿತ ಭತ್ತಕ್ಕೆ ಅತಿಯಾದ ಮಳೆ, ಅತಿಯಾದ ಬಿಸಿಲಿನಿಂದ ಕೀಟಬಾಧೆ ಹೆಚ್ಚಾಗಿದ್ದು, ರೈತರು ಎಷ್ಟೇ ಔಷಧ ಹೊಡೆದರೂ ಕಡಿಮೆಯಾಗುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ, ಕಾಫಿ, ಕಾಳುಮೆಣಸು, ಭತ್ತದ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ 90,385 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಇಳುವರಿ ಕುಸಿತವಾಗಿ ರೈತರಿಗೆ ನಷ್ಟದ ಸಾಧ್ಯತೆ ಹೆಚ್ಚಾಗಿದೆ. ಮೆಕ್ಕೆಜೋಳ, ಹತ್ತಿ, ಶೇಂಗಾ, ಸೂರ್ಯಕಾಂತಿ, ಈರುಳ್ಳಿ, ರಾಗಿ ಪ್ರಮುಖ ಬೆಳೆಗಳಾಗಿದ್ದು, ಕಟಾವಿಗೆ ಬಂದಿರುವ ಮೆಕ್ಕೆಜೋಳ ಪದೇಪದೆ ಒದ್ದೆಯಾಗಿ, ತೆನೆಯಲ್ಲೇ ಮೊಳಕೆಯಾಗುವ ಆತಂಕ ಕಾಡುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆ ತೊಗರಿಗೆ ಕಂಟಕ ತಂದೊಡ್ಡಿದೆ.

Advertisement

ರಾಯಚೂರು ಜಿಲ್ಲೆಯಲ್ಲಿ ಬೆಳೆದ ಈರುಳ್ಳಿ ಕೊಳೆತು ಹೋಗಿದೆ. ಹಾಸನ ಜಿಲ್ಲೆಯಲ್ಲಿ ಕಾಫಿ ಬೆಳೆ ಹಾಗೂ ಮೆಕ್ಕೆಜೋಳದ ಬೆಳೆಗೆ ಹಾನಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 61.948 ಹೆಕ್ಟೆರ್‌ ಭತ್ತ ಕೃಷಿಗೆ ಮತ್ತು 24.612 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳಿಗೆ ಹಾನಿ ಉಂಟಾಗಿದೆ.

ತುಮಕೂರು ಜಿಲ್ಲೆಯಲ್ಲಿ ರಾಗಿ ಹಾಗೂ ಹತ್ತಿ ಬೆಳೆಗೆ ಹಾನಿಯಾಗಿದೆ ಜತೆಗೆ ಶೇಂಗಾ ಬೆಳೆಗೆ ತೀವ್ರ ಮಳೆಯಿಂದ ತೊಂದರೆ ಉಂಟಾಗುತ್ತಿದೆ. ಕೋಲಾರ ಜಿಲ್ಲೆಯ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚುವಂಥ ವಾತಾವರಣ ನಿರ್ಮಾಣವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಅರಿಶಿನ, ತರಕಾರಿಗಳು, ಹೂವಿನ ಬೆಳೆಗಳಿಗೆ ತೊಂದರೆಯಾಗಿದೆ.

ಯಾವೆಲ್ಲ ಬೆಳೆ ಹಾನಿ?
ಭತ್ತ, ಮೆಕ್ಕೆಜೋಳ, ತೊಗರಿ, ಈರುಳ್ಳಿ, ಹತ್ತಿ, ಕಬ್ಬು, ಅಡಿಕೆ, ಶೇಂಗಾ, ಸೋಯಾಬೀನ್‌, ಮೆಣಸಿನಕಾಯಿ, ಸೂರ್ಯಕಾಂತಿ, ಅರಿಶಿಣ, ಕಾಫಿ, ಕಾಳುಮೆಣಸು, ರಾಗಿ

ಉತ್ತರ ಕರ್ನಾಟಕದಲ್ಲಿ
ಭಾರೀ ನಷ್ಟ ಸಾಧ್ಯತೆ
ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗಗಳಲ್ಲಿ ಕಟಾವಿಗೆ ಬಂದಿದ್ದ ಬೆಳೆಗಳು ನೀರು ಪಾಲಾಗಿದ್ದು, ರೈತರು ಆತಂಕದಲ್ಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 407 ಹೆಕ್ಟೇರ್‌ ಪ್ರದೇಶದ ಮೆಕ್ಕೆಜೋಳ, ಜೋಳ, ಭತ್ತದ ಬೆಳೆಗಳು ಹಾನಿಗೀಡಾಗಿವೆ. ಧಾರವಾಡ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು, ಹಿಂಗಾರು ಬಿತ್ತನೆಗೆ ಅಡ್ಡಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next