ಧಾರವಾಡ: ಹೆಸರು ಹಾಗೂ ಉದ್ದು ಬೆಳೆ ಮಾರಾಟ ಮಾಡಲು ಹೆಸರು ನೋಂದಾಯಿಸಲು ಮೂರು ಸಲ ಕಾಲಾವಧಿ ವಿಸ್ತರಣೆ ಜತೆಗೆ ಪ್ರತಿ ರೈತರಿಂದ ಗರಿಷ್ಠ 4ಕ್ವಿಂಟಲ್ ಬದಲು 6 ಕ್ವಿಂಟಲ್ ಖರೀದಿಯ ಮಿತಿ ಏರಿಕೆ ಮಾಡಿದರೂ ಈವರೆಗೂ ಒಂದೇ ಒಂದು ಕಾಳು ಸಹ ಜಿಲ್ಲೆಯಲ್ಲಿ ಬೆಂಬೆಲೆಯಡಿ ಖರೀದಿ ಆಗಿಲ್ಲ!
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ತೀವ್ರ ಹಾನಿಗೆ ಒಳಗಾಗಿದ್ದ ಹೆಸರು ಮತ್ತು ಉದ್ದು ತನ್ನ ಗುಣಮಟ್ಟಕಳೆದುಕೊಂಡಿದ್ದು, ಉತ್ತಮ ಗುಣಮಟ್ಟದ ಬೆಳೆಕೊಳ್ಳಲು ಸರ್ಕಾರ ಮಾರ್ಗಸೂಚಿ ರಚಿಸಿದೆ. ಆದರೆಅಷ್ಟು ಗುಣಮಟ್ಟದ ಕಾಳು ರೈತರ ಬಳಿ ಈ ವರ್ಷಇಲ್ಲವೇ ಇಲ್ಲ. ಹೀಗಾಗಿ ಸರ್ಕಾರ ಖರೀದಿಗೆ ಮುಂದಾದರೂ ಉತ್ತಮ ಗುಣಮಟ್ಟದ ಧಾನ್ಯ ಲಭ್ಯವಿಲ್ಲ. ಜಿಲ್ಲೆಯಲ್ಲಿ 2019ರಲ್ಲಿ ತೆರೆದಿದ್ದ 8 ಖರೀದಿ ಕೇಂದ್ರಗಳಲ್ಲಿ ಕೇವಲ 3169 ರೈತರು ನೋಂದಣಿ ಮಾಡಿಸಿದ್ದರು. ಈಗ ಜಿಲ್ಲೆಯಲ್ಲಿ ತೆರೆದಿರುವ 9 ಖರೀದಿ ಕೇಂದ್ರಗಳಲ್ಲಿ ಅಂತಿಮವಾಗಿ ನೋಂದಣಿ ಆಗಿದ್ದು ಕೇವಲ 572 ಜನ ರೈತರು ಮಾತ್ರ. ಕೇಂದ್ರ ಸರ್ಕಾರದ ಬೆಂಬೆಲೆ ಅಡಿ ಹೆಸರು ಹಾಗೂ ಉದ್ದು ಖರೀದಿಗೆ ತೆರೆದಿದ್ದ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿದ ರೈತರು ಖರೀದಿ ಪ್ರಕ್ರಿಯೆ ಮುಕ್ತಾಯಕ್ಕೆ ಬರೀ 2 ದಿನ ಬಾಕಿ ಉಳಿದಿದ್ದರೂ ತಮ್ಮ ಕಾಳು ಮಾರಾಟವನ್ನೇ ಮಾಡಿಲ್ಲ. ಖರೀದಿ ಕೇಂದ್ರಗಳ ಸಹವಾಸವೇ ಬೇಡವೆಂದುತಮ್ಮ ಕಾಳು ಮಾರಾಟಕ್ಕೆ ಮುಂದಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೇಂದ್ರಗಳು ಬಾಗಿಲು ಮುಚ್ಚುವಂತಾಗಿವೆ.
ಏರದ ನೋಂದಣಿ: ಸೆ. 21ರಿಂದ ರೈತರ ನೋಂದಣಿಗೆ ಚಾಲನೆ ನೀಡಿದರೂ ಹೊಸದಾಗಿ ರೂಪಿಸಿದ್ದ ತಂತ್ರಾಂಶದಲ್ಲಿ ಉಂಟಾಗಿದ್ದ ಕೆಲತಾಂತ್ರಿಕ ಕಾರಣದಿಂದ ರೈತರ ನೋಂದಣಿಯೇ ಆರಂಭವಾಗಿರಲಿಲ್ಲ. ಬಳಿಕ ತಂತ್ರಾಂಶ ಬಂದು ಅಕ್ಟೋಬರ್‌ನಿಂದ ನೋಂದಣಿ ಆರಂಭಗೊಂಡ ಮೇಲೆ ನೋಂದಣಿಗೆ ಕೊನೆಯ ದಿನವಾಗಿದ್ದ ಅ.15ರ ಬದಲಿಗೆ ಅ.29ರವರೆಗೆ ವಿಸ್ತರಿಸಲಾಗಿತ್ತು. ಈ ಅವಧಿಯ ಮುಕ್ತಾಯಕ್ಕೆ ಹೆಸರು ಮಾರಾಟಕ್ಕಾಗಿ 546 ಹಾಗೂ ಉದ್ದು ಮಾರಾಟಕ್ಕಾಗಿ 10 ಜನ ರೈತರಷ್ಟೇ ನೋಂದಣಿ ಮಾಡಿಕೊಂಡಿದ್ದರು. ಮತ್ತೆ ನೋಂದಣಿ ಅವಧಿ ವಿಸ್ತರಿಸಲಾಗಿತ್ತು. ನವೆಂಬರ್ ಇಡೀ ತಿಂಗಳು ನೋಂದಣಿ ವಿಸ್ತರಣೆ ಮಾಡಿದರೂ ಅಂತಿಮವಾಗಿ ನೋಂದಣಿ ಆಗಿದ್ದು 572.
ಜಿಲ್ಲೆಯ 46,543 ಹೆಕ್ಟೇರ್‌ನಲ್ಲಿನ ಹೆಸರು ಬೆಳೆಯಲ್ಲಿ 44,245 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. 5684 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಉದ್ದು ಬೆಳೆಯ ಪೈಕಿ 5083 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಅಧಿಕ ಮಳೆಯಿಂದ ಬಹುತೇಕ ಹೆಸರು ಹಾಗೂ ಉದ್ದು ಬೆಳೆ ಹಾನಿಯಾಗಿದ್ದು, ಅಳಿದುಳಿದ ಕಾಳುಗಳು ಗುಣಮಟ್ಟದ ಕೊರತೆ ಎದುರಿಸುವಂತಾಗಿದೆ. ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳಲ್ಲಿ ಎಫ್‌ಎಕ್ಯೂ ಗುಣಮಟ್ಟದ ಕಾಳುಗಳನ್ನಷ್ಟೇ ಖರೀದಿಸುವುದರಿಂದ ರೈತರು ಇತ್ತ ಸುಳಿಯುತ್ತಿಲ್ಲ. ಕೇಂದ್ರಗಳಲ್ಲಿ ಮಾರಾಟ ಮಾಡಿದರೆ ಬೆಳೆ ಹಾನಿ ಪರಿಹಾರ ಸಿಗದು ಎಂಬ ಲೆಕ್ಕಾಚಾರದಿಂದಲೂ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೈ ತೊಳೆದುಕೊಂಡಿದ್ದಾರೆ.
ಆರಂಭಗೊಳ್ಳದ ಖರೀದಿ : ಸರ್ಕಾರ ಪ್ರತಿ ರೈತರಿಂದ 6 ಕ್ವಿಂಟಲ್‌ಗೆ ಖರೀದಿ ಮಿತಿ ಏರಿಕೆ ಮಾಡಿದರೂ ಹೆಸರುನೋಂದಣಿಯಲ್ಲಿ ಹೆಚ್ಚಳ ಆಗಿಲ್ಲ. ಹೆಸರು ಖರೀದಿಗೆ ತೆರೆದಿದ್ದ 9 ಕೇಂದ್ರಗಳ ಪೈಕಿ ಹೆಬಸೂರಿನ ಪಿಕೆಪಿಎಸ್ ಕೇಂದ್ರ ಆರಂಭವೇ ಆಗಿಲ್ಲ. ಧಾರವಾಡದ ಎಪಿಎಂಸಿ ಮುಖ್ಯ ಪ್ರಾಂಗಣ, ಹುಬ್ಬಳ್ಳಿ ಅಮರಗೋಳದ ಎಪಿಎಂಸಿ ಮುಖ್ಯ ಪ್ರಾಂಗಣ, ಉಪ್ಪಿನಬೆಟಗೇರಿ ಪಿಕೆಪಿಎಸ್ ಕೇಂದ್ರಗಳಲ್ಲಿ ನೋಂದಣಿ ನೂರರ ಗಟಿ ದಾಟಿದರೆ, ಉಳಿದೆಡೆ ಬೆರಳೆಣಿಕೆಯಷ್ಟೇ ಆಗಿತ್ತು. ಉದ್ದು ಖರೀದಿಗಾಗಿ ತೆರೆದಿದ್ದ 2 ಕೇಂದ್ರಗಳಲ್ಲಿ 10 ಜನ ರೈತರಷ್ಟೇ ನೋಂದಣಿ ಮಾಡಿಕೊಂಡಿದ್ದರು. ಖರೀದಿ ಪ್ರಕ್ರಿಯೆ ಡಿ. 12ಕ್ಕೆ ಮುಕ್ತಾಯ ಆಗಲಿದ್ದು, ಒಂದು ದಿನವಷ್ಟೇ ಬಾಕಿ ಉಳಿದಿದ್ದರೂ ನೋಂದಣಿ ಮಾಡಿದ್ದ ಯಾವ ರೈತರೂ ಕೇಂದ್ರಗಳತ್ತ ಸುಳಿದಿಲ್ಲ.
ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳಲ್ಲಿ ಹೆಸರು ಮಾರಾಟಕ್ಕಾಗಿ 573 ಹಾಗೂ ಉದ್ದು ಬೆಳೆ ಮಾರಾಟಮಾಡಲು ಕೇವಲ 10 ಜನ ರೈತರಷ್ಟೇ ನೋಂದಣಿಮಾಡಿಕೊಂಡಿದ್ದರು. ಖರೀದಿ ಪ್ರಕ್ರಿಯೆ ಮುಕ್ತಾಯ ಆಗುತ್ತಾ ಬಂದಿದ್ದರೂ ಯಾವ ರೈತರೂ ತಮ್ಮ ಕಾಳು ಮಾರಾಟ ಮಾಡಲು ಕೇಂದ್ರಕ್ಕೆ ಬಂದೇ ಇಲ್ಲ.
-ಗಾಯತ್ರಿ ಪವಾರ, ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಹುಬ್ಬಳ್ಳಿ
ಮಳೆಯಿಂದ ಹಾಳಾಗಿ ಅಳಿದುಳಿದ ಹೆಸರು ಗುಣಮಟ್ಟದ ಕೊರತೆ ಎದುರಿಸುವಂತಾಗಿದೆ. ನೋಂದಣಿ ಮಾಡಿಸಿದರೂ ಖರೀದಿ ಆಗುವ ವಿಶ್ವಾಸವೇ ಇಲ್ಲ. ಒಂದು ವೇಳೆ ಮಾರಾಟವಾದರೂ ಆ ಹಣಕ್ಕಾಗಿ 2-3 ತಿಂಗಳು ಕಾಯಬೇಕು. ಹೀಗಾಗಿ ಖರೀದಿ ಕೇಂದ್ರಗಳ ಬದಲು ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಿದ್ದೇನೆ.
– ಬಿ.ಎಸ್. ರಾಮಪ್ಪ, ಹೆಸರು ಬೆಳೆದ ರೈತ
-ಶಶಿಧರ್ ಬುದ್ನಿ