Advertisement

ಹೆಸರು ಬೆಳೆಗೆ ಹಳದಿ ನಂಜಾನು ರೋಗ

04:07 PM Jun 29, 2022 | Team Udayavani |

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಹೆಸರು ಬೆಳೆಗೆ ಹಳದಿ ನಂಜಾನು ರೋಗ ಕಾಣಿಸಿಕೊಂಡಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

Advertisement

ಮುಂಗಾರು ಹಂಗಾಮಿನ ಮಳೆಗಳು ಉತ್ತಮವಾಗಿ ಸುರಿಯುತ್ತಿರುವ ಪರಿಣಾಮ ಈ ಬಾರಿ ಉತ್ತಮ ಫಸಲು ಬರುತ್ತದೆಂಬ ಹಿಗ್ಗಿನಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಆದರೆ, ಬೆಳೆದು ನಿಂತಿರುವ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿರುವುದು ರೈತರನ್ನು ಚಿಂತೆಗೀಡು ಮಾಡಿದಂತಾಗಿದೆ.

ನಿರಂತರ ಬರಗಾಲಕ್ಕೆ ತುತ್ತಾಗಿರುವ ತಾಲೂಕಿನಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಮುಂಗಾರು ಅಷ್ಟಕಷ್ಟೇ ಸುರಿದಿದೆ. ಆದರೆ ಈ ಬಾರಿ ಮೇ ತಿಂಗಳಲ್ಲಿಯೇ ಬಿತ್ತನೆ ಮಾಡಿ ಹುಲುಸಾಗಿ ಬೆಳೆದ ಹೆಸರು ಬೆಳೆಗೆ ತೇವಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ಬೆಳೆಗೆ ಹಳದಿ ರೋಗ ಶುರುವಾಗಿದೆ. ಆದರೂ, ರೈತರು ಭೂ ತಾಯಿಯನ್ನು ನಂಬಿ ಕೃಷಿ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬೆಳೆಯ ಕುರಿತು ಸೂಕ್ತ ಮಾರ್ಗದರ್ಶನ ಮಾಡಬೇಕಾದ ಅವಶ್ಯಕತೆ ಇದೆ.

ಹಳದಿ ರೋಗಕ್ಕೆ ತುತ್ತಾದ ಹೆಸರು: ಪ್ರತಿ ವರ್ಷ ತೊಂದರೆಗೆ ಸಿಲುಕಿ ಸಾಲದ ಕೂಪಕ್ಕೆ ಒಳಗಾಗುತ್ತಿದ್ದ ರೈತ ಸಮೂಹಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿ ಫಸಲು ಬರುವ ಆಶಾಭಾವನೆಯನ್ನು ಹೊಂದಿದ್ದಾರೆ. ಆದರೆ ಫಸಲು ಬರುವ ಮುನ್ನವೇ ಬೆಳೆಗೆ ಹಳದಿ ರೋಗ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಳೆ ಹಸಿ ಇರುವಾಗಲೇ ಹಳದಿ ರೋಗ ಹರಡಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸಬೇಕಿದ್ದ ಬೆಳೆ ಹಳದಿ ಬಣ್ಣಕ್ಕೆ ತಿರುಗಿರುವುದು ಸಂಪೂರ್ಣ ಬೆಳೆ ನಾಶಕ್ಕೆ ಕಾರಣವಾಗುತ್ತಿದೆ.

ಈ ಬಾರಿ ಮುಂಗಾರು ಹುಮ್ಮಸ್ಸಿನಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಹೆಸರು ಬಿತ್ತನೆ ಮಾಡಿದ್ದ ರೈತರಿಗೆ ಹಳದಿ ರೋಗ ಕಾಡುತ್ತಿದೆ. ಹೀಗಾಗಿ, ಮತ್ತೆ ಸಂಕಷ್ಟಕ್ಕೆ ಸಿಲುಕುವ ಆತಂಕ ಅನ್ನದಾತರದ್ದಾಗಿದೆ.

Advertisement

ತಾಲೂಕಿನಲ್ಲಿ ಹೆಸರು ಬೆಳೆ ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿದೆ. ಆದರೆ ಈಗ ಬಿಳಿ ನೊಣದಿಂದಾಗಿ ಹಳದಿ ರೋಗಬಾಧೆ ಗಿಡದಿಂದ ಗಿಡಕ್ಕೆ ಹರಡುತ್ತಿದೆ. ಇದನ್ನು ನಿಯಂತ್ರಣ ಮಾಡಲು ಹೊಲದಲ್ಲಿ ಪ್ರಾರಂಭ ಹಂತದಲ್ಲಿ ಕಂಡುಬರುವ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ರೋಗದ ತೀವ್ರತೆ ಅಧಿ ಕವಿದ್ದಲ್ಲಿ ಕೀಟನಾಶಕಗಳ ಸಿಂಪಡಣೆಯಿಂದ ಬಿಳಿ ನೊಣ ಹತೋಟಿ ಮಾಡಬಹುದು. –ರವೀಂದ್ರ ಪಾಟೀಲ, ತಾಲೂಕು ಸಹಾಯಕ ಕೃಷಿ ಅಧಿಕಾರಿ

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next