Advertisement
ಮಧುಮೇಹ ತಪಾಸಣೆಗೆ ಬಳಸುವ ಗ್ಲುಕೊಮೀಟರ್ ಮಾದರಿಯಲ್ಲಿರುವ “ಬಯೋ ಸೆನ್ಸರ್’ ಉಪಕರಣದ ಸಹಾಯದಿಂದ ಪ್ರಾಥಮಿಕ ಹಂತದಲ್ಲೇ ಬೆಳೆಗಳಲ್ಲಿನ ರೋಗಪತ್ತೆ ಮಾಡುವ ತಂತ್ರಜ್ಞಾನ ಇದಾಗಿದೆ. ಸಮರ್ಪಕವಾಗಿ ಬಳಸಿಕೊಂಡರೆ, ರೋಗಬಾಧೆಯಿಂದ ಪ್ರತಿ ವರ್ಷ ಸಾಕಷ್ಟು ನಷ್ಟ ಅನುಭವಿಸುತ್ತಿರುವ ರೈತರಿಗೆ ಇದು ಭವಿಷ್ಯದಲ್ಲಿ ವರದಾನ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ.
Related Articles
Advertisement
“ಜೈವಿಕ ತಂತ್ರಜ್ಞಾನದ ಮೂಲಕ ರೋಗಪತ್ತೆ ಮಾಡುವ ಇಂತಹದ್ದೊಂದು ಪ್ರಯೋಗ ನಡೆದಿರುವುದು ಇದೇ ಮೊದಲು. ಪ್ರಸ್ತುತ ಸಂಶೋಧನಾ ಹಂತದಲ್ಲಿದ್ದು, ಮೂಡಿಗೆರೆಯಲ್ಲಿನ ಪಪ್ಪಾಯಿ ಬೆಳೆಯ ಮಾದರಿಯನ್ನು ತೆಗೆದುಕೊಂಡು ಯಶಸ್ವಿಯಾಗಿ ರೋಗಪತ್ತೆ ಮಾಡಲಾಗಿದೆ. ಇದರ ಮೂಲಮಾದರಿ (ಪ್ರೋಟೊಟೈಪ್) ಒಂದೆರಡು ತಿಂಗಳಲ್ಲಿ ಹೊರಬರಲಿದೆ. ನಂತರದ ಕೆಲವು ತಿಂಗಳಲ್ಲಿ ರೈತರ ಜಮೀನುಗಳಿಗೆ ಪ್ರವೇಶಿಸಲಿದೆ’ ಎಂದು ಅವರು ಹೇಳಿದರು.
ರೈತರಿಗೆ ಸಿಗಲಿವೆ ರೋಗಮುಕ್ತ ಸಸಿಗಳು: “ಸಾಮಾನ್ಯವಾಗಿ ಅಂಗಾಂಶ ಕೃಷಿ ಅಥವಾ ನರ್ಸರಿ ಹಂತದಲ್ಲೇ ಸಸಿಗಳನ್ನು ರೈತರು ಪಡೆಯುತ್ತಾರೆ. ಹೀಗೆ ಪಡೆಯುವಾಗಲೇ ರೋಗಪೀಡಿತ ಸಸಿಗಳು ಬಂದು ಬಿಡುತ್ತವೆ. ಗಿಡಗಳು ಬೆಳೆದಂತೆ ವೈರಾಣು ಇಡೀ ತೋಟಕ್ಕೆ ಹರಡುತ್ತದೆ. ಆಗ, ಎಲ್ಲ ಗಿಡಗಳನ್ನು ಅನಿವಾರ್ಯವಾಗಿ ನಾಶ ಮಾಡಬೇಕಾಗುತ್ತದೆ.
ಇದಲ್ಲದೆ, ಕೆಲವೊಮ್ಮೆ ನಂತರದಲ್ಲಿ ವೈರಾಣು ಕಾಣಿಸಿಕೊಂಡು ಗಿಡಗಳನ್ನು ಹಾಳು ಮಾಡುತ್ತದೆ. ಈ ಬಯೋ ಸೆನ್ಸರ್‌ನಿಂದ ಪ್ರಾಥಮಿಕ ಹಂತದಲ್ಲೇ ರೋಗಮುಕ್ತ ಗಿಡಗಳನ್ನು ರೈತರಿಗೆ ನೀಡಬಹುದು. ಅಲ್ಲದೆ, ನಂತರದ ದಿನಗಳಲ್ಲೂ ನಿರ್ದಿಷ್ಟ ಗಿಡಗಳನ್ನು ಪರೀಕ್ಷೆಗೊಳಪಡಿಸಿ, ರೋಗ ಪತ್ತೆ ಹಚ್ಚಬಹುದು’ ಎಂದು ಡಾ.ಅನಿತಾ ಹೇಳಿದರು.
ಪಪ್ಪಾಯಿ ಬೆಳೆಯೇ ಯಾಕೆ?: “ಪಪ್ಪಾಯಿ ಬೆಳೆಯಲ್ಲಿ ಅದರಲ್ಲೂ ಉಂಗುರ ಮಚ್ಚೆ ವೈರಾಣು ಬಾಧೆಯಿಂದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ. ಈ ರೋಗ ಒಮ್ಮೆ ಕಾಣಿಸಿಕೊಂಡರೆ ಶೇ.75ರಷ್ಟು ಉತ್ಪಾದನೆ ಖೋತಾ ಆಗುತ್ತದೆ. ರೋಗ ತೀವ್ರವಾಗಿದ್ದರೆ, ನೂರಕ್ಕೆ ನೂರರಷ್ಟು ನಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಪಪ್ಪಾಯಿ ಮೇಲೆ ಈ ಪ್ರಯೋಗ ಮಾಡಲಾಯಿತು. ರಾಜ್ಯದಲ್ಲಿ ಚಿಕ್ಕಮಗಳೂರು, ಮೂಡಿಗೆರೆಯಲ್ಲಿ ಹೆಚ್ಚಾಗಿ ಪಪ್ಪಾಯಿ ಕಂಡು ಬರುತ್ತದೆ’ ಎಂದು ಸ್ಪಷ್ಟಪಡಿಸಿದರು.
ಬೆಳೆಗಳು ಮಾತ್ರವಲ್ಲ; ಇದು ಬಯುಪಯೋಗಿ ತಂತ್ರಜ್ಞಾನವಾಗಿದ್ದು, ಕೃಷಿಗೆ ಪೂರಕವಾದ ಪಶುಸಂಗೋಪನೆಯಲ್ಲೂ ಇದನ್ನು ಬಳಸಬಹುದು. ದನಕರುಗಳು ರೋಗಕ್ಕೆ ತುತ್ತಾದಾಗ, ಅದನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚಲು ಇದರಿಂದ ಸಾಧ್ಯವಿದೆ. ಹಾಗಾಗಿ, ಇದೊಂದು “ಪ್ಲಾಟ್‌ಫಾರಂ ಟೆಕ್ನಾಲಜಿ’ ಎಂಬುದು ವಿಜ್ಞಾನಿಗಳ ವಿಶ್ಲೇಷಣೆ.
* ವಿಜಯಕುಮಾರ ಚಂದರಗಿ