Advertisement

ಬೆಳೆ ಸಮೀಕ್ಷೆ ಮತ್ತಷ್ಟು ಸರಳ: ಸರಕಾರಿ ಸವಲತ್ತು ಪಡೆಯಲು ನೋಂದಣಿ ಅತ್ಯಗತ್ಯ

09:28 PM Aug 26, 2020 | mahesh |

ಉಡುಪಿ: ರೈತರ ಸಂಕಷ್ಟ ಕಾಲದಲ್ಲಿ ಸರಕಾರ ಘೋಷಿಸುವ ಯೋಜನೆಗಳನ್ನು ಪಡೆದುಕೊಳ್ಳಲು ಬೆಳೆ ಸಮೀಕ್ಷೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಇದರಿಂದ ಪರಿಹಾರ ಕಾರ್ಯ ಕೂಡ ಸುಲಭದಲ್ಲಿ ನಡೆಯುತ್ತದೆ. ಈ ವರ್ಷದಿಂದ ಸರಕಾರ ಬೆಳೆ ಸಮೀಕ್ಷೆಯನ್ನು ಮತ್ತಷ್ಟು ಸರಳಗೊಳಿಸಿದ್ದು, ರೈತರೇ ಬೆಳೆಯ ಮಾಹಿತಿಗಳನ್ನು ಆ್ಯಪ್‌ ಮೂಲಕ ದಾಖಲಿಸಬಹುದಾಗಿದೆ.
ಬೆಳೆ ಮಾಹಿತಿಯಲ್ಲಿ ನಿಖರತೆಗಾಗಿ ಇ-ಆಡಳಿತ ಇಲಾಖೆಯು ಬೆಳೆ ಸಮೀಕ್ಷೆ ಆ್ಯಪ್‌ ಅಭಿವೃದ್ಧಿಪಡಿಸಿದೆ.

Advertisement

ಯಾಕಾಗಿ ಬೆಳೆ ಸಮೀಕ್ಷೆ
ಪ್ರಕೃತಿ ವಿಕೋಪದ ಸಂದರ್ಭ ಬೆಳೆ ಹಾನಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅನ್ವಯ ಪರಿಹಾರ ನೀಡಲು, ಬೆಳೆ ಯೋಜನೆಯಡಿ ಬೆಳೆ ಪರಿಶೀಲನೆ ನಡೆಸಲು, ಕನಿಷ್ಠ ಬೆಂಬಲ ಬೆಲೆ ನಿಗದಿ ಹಾಗೂ ಅರ್ಹ ಫ‌ಲಾನುಭವಿಗಳನ್ನು ಗುರುತಿಸಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫ‌ಲಾನುಭವಿಗಳ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ ಮತ್ತು ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲೆಗಾಗಿ ಈ ಬೆಳೆ ಸಮೀಕ್ಷೆ ವಿವರಗಳನ್ನು ಬಳಸಿಕೊಳ್ಳಬಹುದು.

ಮೊಬೈಲ್‌ ಇಲ್ಲದವರು ಏನು ಮಾಡಬೇಕು?
ಆ್ಯಂಡ್ರಾಯ್ಡ ಮೊಬೈಲ್‌ ಹೊಂದಿರದ ಅಥವಾ ತಾಂತ್ರಿಕ ಮಾಹಿತಿ ಇರದ ರೈತರ ನೆರವಿಗಾಗಿ ಪ್ರತೀ ಗ್ರಾಮದಲ್ಲಿರುವ ಸಲಹೆಗಾರರು ಅಥವಾ ತಹಶೀಲ್ದಾರ್‌, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯವರನ್ನು ಸಂಪರ್ಕಿಸಬಹುದು.

ಸಂಪೂರ್ಣ ವಿವರ ಸಂಗ್ರಹ
ಮೊದಲಿಗೆ ರೈತರು ತಮ್ಮ ಆ್ಯಂಡ್ರಾಯ್ಡ ಫೋನ್‌ನಲ್ಲಿ ಪ್ಲೇ ಸ್ಟೋರ್‌ನಿಂದ ಬೆಳೆ ಸಮೀಕ್ಷೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅನಂತರ ತಮ್ಮ ಜಮೀನು ಇರುವ ಜಿಲ್ಲೆ, ತಾಲೂಕು, ಗ್ರಾಮ, ಸರ್ವೆ ನಂಬರ್‌ ಇತ್ಯಾದಿ ವಿವರಗಳನ್ನು ಅದರ ಮೂಲಕ ನಮೂದಿಸಬೇಕು. ತಮ್ಮ ಗ್ರಾಮದ ಜಿಐಎಸ್‌ ನಕ್ಷೆಯನ್ನು ಡೌನ್‌ಲೋಡ್‌ ಮಾಡಿ ಜಮೀನಿನಲ್ಲಿ ಬೆಳೆದ ಬೆಳೆ ಹಾಗೂ ಇತರ ವಿವರ, ಛಾಯಾಚಿತ್ರಗಳನ್ನು ಅಪ್‌ಲೋಡ್‌ ಮಾಡಬೇಕು. ರೈತರು ಒದಗಿಸಿದ ಎಲ್ಲ ವಿವರಗಳನ್ನು ಕರ್ನಾಟಕ ಸ್ಟೇಟ್‌ ಡಾಟಾ ಸೆಂಟರ್‌ನಲ್ಲಿ ಸಂಗ್ರಹಿಸಿ ವಿವಿಧ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ.

ಹೀಗೆ ಡೌನ್‌ಲೋಡ್‌ ಮಾಡಿ
ಬೆಳೆ ಸಮೀಕ್ಷೆ 2020-21ಸಾಲಿನಲ್ಲಿ ರೈತ ಬಾಂಧವರು ತಮ್ಮ ಜಮೀನಿನ ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು ತಾವೇ ಸ್ವತಃ ಮೊಬೈಲ್‌ ತಂತ್ರಾಂಶದ ಮೂಲಕ ದಾಖಲಿಸಬಹುದು. ಕೆಳಗಿನ ಲಿಂಕ್‌ ಮೂಲಕ https://play.google.com/store/apps/details?id=com.csk.KariffTPKfarmer.cropsurvey ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಬೆಳೆ ವಿವರ ದಾಖಲಿಸಬಹುದು.

Advertisement

ಅವಧಿ ವಿಸ್ತರಣೆ
ನೋಂದಣಿಗೆ ಆ. 24ಕೊನೆಯ ದಿನಾಂಕವಾಗಿತ್ತು. ಈಗ ಅದನ್ನು ಮತ್ತೆ ವಿಸ್ತರಿಸಲಾಗಿದೆ. ವಿಸ್ತರಣೆಯ ಅಂತಿಮ ದಿನಾಂಕದ ಬಗ್ಗೆ ಅಧಿಕೃತ ಸುತ್ತೋಲೆ ಇನ್ನಷ್ಟೇ ಬರಬೇಕಿದೆ. ಅಲ್ಲಿಯವರೆಗೆ ರೈತರು ನೋಂದಣಿ ಪ್ರಕ್ರಿಯೆ ನಡೆಸಬಹುದು.
-ಡಾ| ಎಚ್‌. ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ

ವಿವರಗಳಿಗೆ
ತೊಟಗಾರಿಕಾ ಇಲಾಖೆ 0820   2531950
ಕೃಷಿ ಇಲಾಖೆ  0820  2574960

ರೈತಸೇತು ಸಹಾಯವಾಣಿ ಕೃಷಿ ಸಮಸ್ಯೆಗಳಿದ್ದರೆ ತಿಳಿಸಿ
ಇದು ರೈತರಿಗಾಗಿ ಇರುವ ಅಂಕಣ. ಕೃಷಿಕರಿಗೆ ಸಿಗುವ ಸೌಲಭ್ಯ, ಅವರಿಗೆ ಅಗತ್ಯವಿರುವ ಮಾಹಿತಿಯನ್ನು ಇಲ್ಲಿ ಪ್ರತಿ ವಾರ ಕೊಡಲಾಗುತ್ತದೆ. ನಿಮ್ಮಲ್ಲಿಯೂ ಯಾವುದಾದರೂ ಸಂಶಯಗಳಿದ್ದರೆ, ಪರಿಣತರ ಅಭಿಪ್ರಾಯ ಅಗತ್ಯವಿದ್ದರೆ ಅದನ್ನು ಬರೆದು ಕಳುಹಿಸಬಹುದು. ತಜ್ಞರ ಬಳಿ ಸಮಾಲೋಚಿಸಿ ಅದಕ್ಕೆ ಪರಿಹಾರ ಸೂಚಿಸಲಾಗುವುದು. ಈ ರೀತಿ ಕಳುಹಿಸುವಾಗ ನಿಮ್ಮ ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸಿ.
ವಾಟ್ಸಪ್‌ ಸಂಖ್ಯೆ; 76187 74529

 

Advertisement

Udayavani is now on Telegram. Click here to join our channel and stay updated with the latest news.

Next