Advertisement

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

03:00 AM Aug 10, 2020 | Hari Prasad |

ಪುತ್ತೂರು: ಈ ಬಾರಿ ರಾಜ್ಯದಲ್ಲಿ ರೈತರೇ ಪರಿವರ್ತಿತ ಮೊಬೈಲ್‌ ಆ್ಯಪ್‌ ಉಪಯೋಗಿಸಿ ಸ್ವತಂತ್ರವಾಗಿ ಮುಂಗಾರು, ಹಿಂಗಾರು, ಬೇಸಗೆ ಹಂಗಾಮು ಬೆಳೆ ಸಮೀಕ್ಷೆ ನಡೆಸಲು ಸರಕಾರ ಅವಕಾಶ ಕಲ್ಪಿಸಿದೆ.

Advertisement

ಕೋವಿಡ್ 19 ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಈ ಕ್ರಮ ಜಾರಿ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ.

ರೈತರು ತಮ್ಮ ಬೆಳೆ ಸಮೀಕ್ಷೆ ಮಾಡಿ, ಸ್ವತಂತ್ರವಾಗಿ ಅಪ್‌ಲೋಡ್‌ ಮಾಡಲು ಆ. 10ರಿಂದ 24ರವರೆಗೆ ಸಮಯಾವಕಾಶ ನೀಡಲಾಗಿದೆ.

ಸ್ವತಂತ್ರವಾಗಿ ಅಪ್‌ಲೋಡ್‌ ಸಾಧ್ಯವಾಗದಿದ್ದಲ್ಲಿ ಖಾಸಗಿಯವರ ಸಹ ಭಾಗಿತ್ವ ಪಡೆಯಬಹುದು. ಅದೂ ಅಸಾಧ್ಯವಾದರೆ ಸರಕಾರಿ ಸಿಬಂದಿಯ ಸಹಾಯ ಕೇಳಬಹುದು.

ರೈತರು ಅಪ್‌ಲೋಡ್‌ ಮಾಡದೆ ಇದ್ದಲ್ಲಿ ಮಾತ್ರ ಕೃಷಿ ಇಲಾಖೆಯೇ ಖಾಸಗಿ ಅಥವಾ ಸರಕಾರಿ ಸಿಬಂದಿಯ ಮೂಲಕ ಸಮೀಕ್ಷೆಗೆ ಸೂಚಿಸಲಿದೆ.

Advertisement

ಆ್ಯಪ್‌ ಬಳಕೆ ಹೇಗೆ?
ಪಹಣಿಪತ್ರ ಹೊಂದಿರುವ ಜಮೀನಿನ ರೈತರು ಅಥವಾ ಮಾಲಕರು ಮೊಬೈಲ್‌ನಲ್ಲಿ ಪ್ಲೇ ಸ್ಟೋರ್‌ ಮೂಲಕ ಬೆಳೆ ಸಮೀಕ್ಷೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಸಮೀಕ್ಷೆಗೆ ಪೂರಕವಾಗಿ ಪಿ.ಆರ್‌. ಮೊಬೈಲ್‌ ಆ್ಯಪನ್ನು ಆಡಳಿತ ಸುಧಾರಣ ಇಲಾಖೆ ಸಿದ್ಧಪಡಿಸಿದೆ. ರೈತರೇ ನೇರವಾಗಿ ಅಪ್‌ಲೋಡ್‌ ಮಾಡಲು ಅಥವಾ ಖಾಸಗಿಯವರು, ಸರಕಾರಿ ಸಿಬಂದಿಯ ಸಹಾಯದಿಂದ ಆಯಾ ಜಮೀನಿನ ಬೆಳೆ ಮಾಹಿತಿ ಕ್ರೋಡೀಕರಿಸಿ ಅಪ್‌ಲೋಡ್‌ ಮಾಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಏನು ಪ್ರಯೋಜನ?
ಕನಿಷ್ಠ ಬೆಂಬಲ ಬೆಲೆ ನಿಗದಿ, ಬೆಳೆ ಪರಿಹಾರ, ಬೆಳೆ ವಿಮಾ ಯೋಜನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಅಡಿಯಲ್ಲಿ ಸಹಾಯಧನ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ, ಹಾನಿಗೊಳಗಾದ ಬೆಳೆ ವಿಸ್ತೀರ್ಣದ ವಿವರ, ಅರ್ಹ ಫಲಾನುಭವಿಗಳನ್ನು ಗುರುತಿಸುವುದು, ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಾತಿ ಇತ್ಯಾದಿಗಳನ್ನು ಈ ಸಮೀಕ್ಷಾ ವರದಿ ಆಧರಿಸಿ ನಡೆಸಲಾಗುತ್ತದೆ.

ಮಾಹಿತಿ ನೀಡಲು ಸೂಚನೆ
ಬೆಳೆ ಸಮೀಕ್ಷೆಗೆ ಪೂರ್ವಭಾವಿ ಯಾಗಿ ಸ್ಥಳೀಯ ಜನಪ್ರತಿನಿಧಿ, ರೈತ ಮುಖಂಡರಿಗೆ ಕೃಷಿ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಮಾಹಿತಿ ನೀಡಬೇಕು. ನೋಡಲ್‌ ಅಧಿಕಾರಿ ನೇಮಕ ಇತ್ಯಾದಿ ನಿಬಂಧನೆಗಳ ಅನುಷ್ಠಾನಕ್ಕೆ ಸೂಚಿಸಲಾಗಿದೆ.

ಏನಿದು ಬೆಳೆ ಸಮೀಕ್ಷೆ ?
ಸರ್ವೇ ನಂಬರ್‌, ಹಿಸ್ಸಾ ನಂಬರ್‌ವಾರು ಬೆಳೆ ಮಾಹಿತಿ ಸಂಗ್ರಹ ಮತ್ತು ನಿಖರ ದತ್ತಾಂಶದ ಕೊರತೆ ನಿವಾರಿಸಲು 2018ರಲ್ಲಿ ಬೆಳೆ ಸಮೀಕ್ಷೆಯನ್ನು ಮೊಬೈಲ್‌ ಆ್ಯಪ್‌ ಮೂಲಕ ಆಯಾ ಗ್ರಾಮದಲ್ಲಿ ಪಿ.ಆರ್‌. ಮತ್ತು ಸರಕಾರಿ ಸಿಬಂದಿ ಬಳಸಿ ನಡೆಸಲಾಗಿತ್ತು. 2019-20ರಲ್ಲಿ ಕೃಷಿ ಇಲಾಖೆಯ ಮೂಲಕ ಖಾಸಗಿ ಮತ್ತು ಇಲಾಖೆ ಸಿಬಂದಿ ಬಳಸಿ ನಡೆಸಲಾಗಿತ್ತು. ಆದರೆ ಈ ಬಾರಿ ರೈತರೇ ಬೆಳೆ ಮಾಹಿತಿಯನ್ನು ಛಾಯಾ ಚಿತ್ರ ಸಹಿತ ದಾಖಲಿಸಿ, ಅಪ್‌ಲೋಡ್‌ ಮಾಡಲು ಸರಕಾರ ಅನುಮತಿ ನೀಡಿದೆ. ಪುತ್ತೂರಿನಲ್ಲಿ ಆ. 10ರಿಂದ ಸಮೀಕ್ಷೆ ಆರಂಭಗೊಳ್ಳಲಿದೆ ಎಂದು ತಾಲೂಕು ಸಹಾಯಕ ಕೃಷಿ ಅಧಿಕಾರಿ ನಂದನ್‌ ಶೆಣೈ ತಿಳಿಸಿದ್ದಾರೆ.

ಈ ಬಾರಿ ರೈತರೇ ಬೆಳೆ ಸಮೀಕ್ಷೆ ನಡೆಸಿ ಅಪ್‌ಲೋಡ್‌ ಮಾಡಲು ಅವಕಾಶ ನೀಡಲಾಗಿದೆ. ಆ. 9ರಂದು ಆ್ಯಪ್‌ ಅನ್ನು ಪ್ಲೇ ಸ್ಟೋರ್‌ನಲ್ಲಿ ಬಿಡುಗಡೆಗೊಳಿಸಲಾಗಿದೆ.
– ಸೀತಾ, ಜಂಟಿ ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ

ರೈತರಿಂದಲೇ ಸಮೀಕ್ಷೆ ನಡೆಸಲು ಸೂಚನೆ ಬಂದಿದೆ. ಈ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸಮೀಕ್ಷೆ ಆರಂಭಿಸುವ ಬಗ್ಗೆ ಕೆಲವು ದಿನಗಳಲ್ಲಿ ಮಾಹಿತಿ ನೀಡಲಾಗುವುದು.
– ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next