Advertisement

Crop survey ನಾಳೆಯೇ ಕೊನೆಯ ದಿನ; ಬೆಳೆ ಸಮೀಕ್ಷೆಯ ಸರ್ವರ್‌ ಡೌನ್‌: ಕೃಷಿಕರಿಗೆ ಆತಂಕ

01:29 AM Sep 14, 2023 | Team Udayavani |

ಪುತ್ತೂರು: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಸೆ. 15 ಕೊನೆಯ ದಿನ. ಆದರೆ ಬುಧವಾರ ಪಿಆರ್‌ ((private Residents – ತಾತ್ಕಾಲಿಕ ನೆಲೆಯಲ್ಲಿ ನೇಮಿಸಲ್ಪಟ್ಟ ಸಮೀಕ್ಷಕರು) ಮತ್ತು ಫಾರ್ಮರ್‌ ಆ್ಯಪ್‌ಗಳೆರಡಲ್ಲೂ ಸರ್ವರ್‌ ಸಮಸ್ಯೆ ಉಂಟಾದ ಕಾರಣ ಸಮೀಕ್ಷೆ ಸಾಧ್ಯವಾಗಿಲ್ಲ. ಹೀಗಾಗಿ ಗಡುವಿನೊಳಗೆ ಬೆಳೆ ಸಮೀಕ್ಷೆ ಮಾಡಲಾಗದೆ ಬೆಳೆ ವಿಮಾ ಸೌಲಭ್ಯಗಳಿಂದ ರೈತರು ವಂಚಿತರಾಗುವ ಆತಂಕ ಎದುರಾಗಿದೆ.

Advertisement

ಬೆಳೆ ಸಮೀಕ್ಷೆಗೆಂದು ಆಯಾ ಗ್ರಾಮಕರಣಿಕರ ಮೂಲಕ ಪಿಆರ್‌ ಅನ್ನು ನಿಯೋಜಿಸಲಾಗಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ ಪಿಆರ್‌ಗಳನ್ನು ರೈತರು ಸಂಪರ್ಕಿಸಿದರೂ ಅವರು ಸಿಗುತ್ತಿಲ್ಲ. ಕಾರಣ ಗ್ರಾಮಕ್ಕೆ ಒಂದೇ ಪಿಆರ್‌ ನೇಮಕ ಮಾಡಿರುವುದರಿಂದ ಅವರಿಗೆ ವ್ಯಾಪ್ತಿಯ ದೊಡ್ಡದಿದ್ದು ಸಂಪರ್ಕವು ಕಷ್ಟವಾಗಿದೆ. ಅದರ ಜತೆಗೆ ಪಿಆರ್‌ ಆ್ಯಪ್‌ಗಳ ಲ್ಲಿಯು ಕೂಡ ಸರ್ವರ್‌ ಸಮಸ್ಯೆ ಉಂಟಾಗಿದೆ. ಒಂದೊಂದು ಕೃಷಿಕ ಮನೆಯಲ್ಲಿ ತಾಸುಗಟ್ಟಲೇ ಸಮಯ ಕಳೆದರೂ ಸಮೀಕ್ಷೆ ಸಾಧ್ಯವಾಗದ ಸ್ಥಿತಿ ಇದೆ.

ರೈತರ ಆ್ಯಪ್‌ ಕಠಿನ
ಫ್ರೂಟ್ಸ್‌ ತಂತ್ರಾಂಶದ ಎಫ್‌ಐಡಿ ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್‌ ಪ್ಲೇ ಸ್ಟೋರ್‌ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ 2023′ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಸ್ವತಃ ತಮ್ಮ ಜಮೀನಿನಲ್ಲಿ ಬೆಳೆ ಸಮೀಕ್ಷೆಗೆ ಅವಕಾಶ ನೀಡಲಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆ್ಯಪ್‌ನಲ್ಲಿ ನಿಯಮ ಕಠಿನವಾಗಿರುವುದರಿಂದ ಬೆಳೆಗಾರರಿಗೆ ಕಷ್ಟವಾಗಿದೆ. ಸರ್ವೇ ನಂಬರ್‌, ಹಿಸ್ಸಾ, ಮಾಲಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಿ, ಸರ್ವೇ ನಂಬರ್‌ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್‌ಲೋಡ್‌ ಮಾಡಬೇಕಿದ್ದು ಆದರೆ ಜಮೀನಿನ ಗಡಿಯೊಳಗೆ ನೆಟವರ್ಕ್, ಜಿಪಿಎಸ್‌ ಸಿಗದೆ ಸಮಸ್ಯೆಯಾಗುತ್ತಿದೆ.

ಮಾಸಾಂತ್ಯದ ತನಕ ಅವಕಾಶಕ್ಕೆ ಆಗ್ರಹ
ಬೆಳೆ ಸಮೀಕ್ಷೆಯ ಮೂಲಕ ಬೆಳೆ ಯಾವುದೆಂದು ನಮೂದಾಗದಿದ್ದರೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯಗಳು ದೊರೆಯುವುದಿಲ್ಲ. ಬೆಳೆ ಅದಲು ಬದಲಾಗಿದ್ದರೆ ಅದನ್ನು ಸರಿಪಡಿಸಲು ಸಮೀಕ್ಷೆಯಲ್ಲಿ ಅವಕಾಶ ನೀಡಲಾಗಿದೆ.

ಬುಧವಾರ ಇಡೀ ದಿನ ಪಿಆರ್‌, ರೈತರ ಆ್ಯಪ್‌ಗಳಲ್ಲಿ ಸರ್ವರ್‌ ಸಮಸ್ಯೆಯಿಂದ ಬೆಳೆ ಸಮೀಕ್ಷೆ ಸಾಧ್ಯವಾಗಿಲ್ಲ. ಈ ಬಗ್ಗೆ ಸಹಾಯವಾಣಿಗೆ ಕರೆ ಮಾಡಿದಾಗ ಸೆ. 14ರಂದು ಮಧ್ಯಾಹ್ನದ ವೇಳೆ ಸಮಸ್ಯೆ ಪರಿಹಾರ ಕಾಣಬಹುದು ಅನ್ನುವ ಉತ್ತರ ಸಿಕ್ಕಿದೆ. ಶೇ. 50ಕ್ಕೂ ಅಧಿಕ ರೈತರ ಬೆಳೆ ಸಮೀಕ್ಷೆ ಕಾರ್ಯ ಬಾಕಿ ಇರುವುದರಿಂದ ಕೊನೆಯ ಒಂದು ದಿನದಲ್ಲಿ ಆ ಕಾರ್ಯ ಸಾಧ್ಯವಿಲ್ಲ. ಹೀಗಾಗಿ ಸೆಪ್ಟಂಬರ್‌ ಕೊನೆಯ ತನಕ ಬೆಳೆ ಸಮೀಕ್ಷೆಗೆ ಅವಕಾಶ ಕಲ್ಪಿಸಬೇಕು ಅನ್ನುವ ಆಗ್ರಹ ಕೃಷಿಕರಿಂದ ಕೇಳಿ ಬಂದಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next