ಬೆಂಗಳೂರು: ಫಸಲ್ ಭಿಮಾ ಯೋಜನೆಗೆ ನೋಂದಾಯಿಸುವ ಪ್ರತಿಯೊಬ್ಬ ರೈತನ ಬೆಳೆ ಮಾದರಿಯನ್ನು ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸಚಿವ ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಪಹಣಿಯಲ್ಲಿ ತೋರಿಸುವ ಬೆಳೆಗೂ, ವಾಸ್ತವವಾಗಿ ಬೆಳೆದಿರುವ ಬೆಳೆಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಪಹಣಿಯಲ್ಲಿ ಇಪ್ಪತ್ತು, ಮೂವತ್ತು ವರ್ಷಗಳ ಹಳೆಯ ಮಾಹಿತಿ ಇರುತ್ತದೆ. ಈಗ ರೈತರು ಬೆಳೆಯುವ ಬೆಳೆ ಬದಲಾಗಿರುತ್ತದೆ. ಇದರಿಂದ ಬರಗಾಲ ಅಥವಾ ಪ್ರವಾಹ ಪರಿಸ್ಥಿತಿ ನಿರ್ಮಾಣವಾದಾಗ ರೈತರಿಗೆ ಪರಿಹಾರ ನೀಡುವಲ್ಲಿಯೂ ತೊಂದರೆಯಾಗುತ್ತಿತ್ತು.
ಹೀಗಾಗಿ, ಬೆಳೆ ಸಮೀಕ್ಷೆಗೆ 2017ರಿಂದ ಪರಿಹಾರ ಸಾಪ್ಟವೇರ್ ಜಾರಿಗೆ ತಂದಿದ್ದೇವೆ. ರೈತರ 2.20 ಕೋಟಿ ತಾಕುಗಳಿವೆ. ಎಲ್ಲವನ್ನೂ ಮೊಬೈಲ… ಆ್ಯಪ್‌ನಿಂದ ಜಿಪಿಎಸ್ ಮೂಲಕ ಸಮೀಕ್ಷೆ ಮಾಡಿ, ಸಾಧ್ಯವಾದಷ್ಟು ರೈತರ ಜೊತೆ ಫೊಟೊ ಅಪ್‌ಡೇಟ… ಮಾಡಲು ಸೂಚನೆ ನೀಡಿದ್ದೇವೆ ಎಂದರು.
ಮುಂಗಾರು ಹಾಗೂ ಹಿಂಗಾರು ಎರಡೂ ಹಂಗಾಮಿನ ಸಮೀಕ್ಷೆಯನ್ನು ಖಾಸಗಿ ಸರ್ವೇಯರ್‌ಗಳ ಮೂಲಕ ನಡೆಸಲು ತೀರ್ಮಾನಿಸಲಾಗಿದೆ. ಒಬ್ಬ ರೈತನ ಜಮೀನನ್ನು ಸಮೀಕ್ಷೆ ಮಾಡಿದರೆ 10ರೂ.ನೀಡಲು ನಿರ್ಧರಿಸಲಾಗಿದೆ. ಒಬ್ಬ ಸರ್ವೇಯರ್ ಒಂದು ದಿನಕ್ಕೆ ಕನಿಷ್ಠ 50 ರೈತರ ಸಮೀಕ್ಷೆ ಮಾಡಬಹುದು. ಜಿಲ್ಲಾವಾರು ಬಿತ್ತನೆ ಸಮಯ ಬೇರೆ ಇರುವುದರಿಂದ ಆಯಾ ಸಮಯಕ್ಕೆ ಸಮೀಕ್ಷೆ ಮಾಡಲಾಗುವುದು. ಈ ಯೋಜನೆಗೆ 90 ಕೋಟಿ ರೂ.ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ರೈತರು ವಿಮೆಯ ತಮ್ಮ ಪಾಲಿನ ಹಣವನ್ನು ಆಹಾರ ಧಾನ್ಯಗಳಿಗೆ ಶೇ 1.5ರಷ್ಟು, ವಾಣಿಜ್ಯ ಬೆಳೆಗಳಿಗೆ ಶೇ.2ರಷ್ಟು ತುಂಬಬೇಕು. ಸರ್ಕಾರ ಅದರ ಐದು ಪಟ್ಟು ವಿಮೆ ಹಣವನ್ನು ಭರಿಸುತ್ತದೆ. ರಾಜ್ಯದ ಪಾಲು 546 ಕೋಟಿ ರೂ.ಭರಿಸಲು ಸಂಪುಟ ಒಪ್ಪಿಗೆ ನೀಡಿದೆ. ಬೆಳೆ ಸಮೀಕ್ಷೆ ಮಾಡಲು 10 ಕ್ಲಸ್ಟರ್‌ಗಳನ್ನು ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಯಾವ ರಾಜ್ಯದಲ್ಲಿಯೂ ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ಮಾಡುವ ಪದ್ದತಿ ಇಲ್ಲ. ನೀತಿ ಆಯೋಗದವರು ನಮ್ಮ ಅಧಿಕಾರಿಗಳಿಂದ ಮಾಹಿತಿ ಪಡೆದು ಬೇರೆ ರಾಜ್ಯಗಳಲ್ಲಿ ಅಳವಡಿಸಲು ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಪಾವಗಡದಲ್ಲಿ 60 ಹಾಸಿಗೆಯ ಹೆರಿಗೆ ಆಸ್ಪತ್ರೆ, ರಾಯಚೂರು ಹೆರಿಗೆ ಆಸ್ಪತ್ರೆಯಲ್ಲಿ ಹೆಚ್ಚುವರಿ ಸೌಲಭ್ಯ, ದಾವಣಗೆರೆ, ಬಳ್ಳಾರಿಯಲ್ಲಿ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆ, ಇತರ ಸೌಲಭ್ಯಗಳು ಸೇರಿ 71 ಕೋಟಿ ರೂ.ಗಳ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.