ರಾಮನಗರ: ಮೊಬೈಲ್ ಆ್ಯಪ್ ಮೂಲಕ 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವು ಜಿಲ್ಲೆಯಾದ್ಯಂತ ಸೆ.1ರಿಂದ ಆರಂಭವಾಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಜಿಲ್ಲೆಯ ಒಟ್ಟು 817 ಗ್ರಾಮಗಳಲ್ಲಿ ಸ್ಥಳೀಯ ವಿದ್ಯಾವಂತ ಯುವಕರನ್ನು ತೊಡಗಿಸಿಕೊಂಡು ಮೊಬೈಲ್ ಆ್ಯಪ್ ಮೂಲಕ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಮಾಹಿತಿಯನ್ನು ಸಂಗ್ರಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 691 ಸಮೀಕ್ಷೆಗಾರರು ಬೆಳೆ ಸಮೀಕ್ಷೆಯನ್ನು ನಡೆಸಲಿದ್ದಾರೆ. ಮೊಬೈಲ್ ತಂತ್ರಾಂಶದ ಮುಖಾಂತರ ಸಮೀಕ್ಷೆ ನಡೆಸಲು ಕಂದಾಯ ಇಲಾಖೆ ಹಾಗೂ ಗ್ರಾಮದಲ್ಲಿ ಆಯ್ಕೆಯಾದ ಖಾಸಗಿ ನಿವಾಸಿಗಳು ರೈತರ ಜಮೀಗಳಿಗೆ ಬಂದಾಗ ರೈತರು ತಮ್ಮ ಜಮೀನಿನಲ್ಲಿ ಇದ್ದು, ಬೆಳೆವಾರು ಕ್ಷೇತ್ರದ ವಿವರವನ್ನು ಒದಗಿಸಿ ಸಹಕರಿಸಲು ಅಧಿಕಾರಿಗಳು ಕೋರಿದ್ದಾರೆ.
ರೈತರು ಮಾಹಿತಿ ನೀಡಿ: ಮೊಬೈಲ್ ತಂತ್ರಾಂಶದ ಮೂಲಕ ನಡೆಸುವ ಬೆಳೆ ಸಮೀಕ್ಷೆ ಆಧಾರದ ಮೇಲೆಯೇ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ, ಬೆಳೆ ಪರಿಹಾರ ಹಾಗೂ ಬೆಳೆವಿಮೆ ಇತ್ಯಾದಿಗಳು ನಿರ್ಧಾರವಾಗುವುದರಿಂದ ರೈತರು ಖುದ್ದು ಹಾಜರಿದ್ದು, ತಾವು ಬೆಳೆದ ಬೆಳೆಗಳ ನಿಖರವಾದ ಮಾಹಿತಿಯನ್ನು ಸಮೀಕ್ಷೆಗಾರರಿಗೆ ನೀಡಲು ಕೋರಿದೆ. ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಂಡ ನಂತರ ಪ್ರತಿ ಗ್ರಾಮದ ಎಲ್ಲಾ ರೈತರ ವಿವರಗಳನ್ನು ತಮ್ಮ ತಮ್ಮ ಗ್ರಾಮ ಪಂಚಾಯ್ತಿಗಳಲ್ಲಿ ಲಭ್ಯ ಗೊಳಿಸಲಾಗವುದು.
ಮೊಬೈಲ್ ಆ್ಯಪ್‌ನಲ್ಲಿ ಮಾಹಿತಿ ದಾಖಲೆ: ಸರ್ಕಾರವು ದಾಖಲಿಸಿರುವ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿ ಯನ್ನು ರೈತರು ಪರಿಶೀಲಿಸಿಕೊಳ್ಳುವುದು ಅತಿ ಮಹತ್ವದ್ದಾಗಿರುತ್ತದೆ. ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿ ದಾಖಲಾಗಿರುವುದನ್ನು ಛಾಯಾಚಿತ್ರದ ಸಮೇತ ಬೆಳೆ ದರ್ಶಕ್ ಆ್ಯಪ್‌ನಲ್ಲಿ ವೀಕ್ಷಿಸಿ, ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಮೊಬೈಲ್ ಆ್ಯಪ್‌ನಲ್ಲಿ ದಾಖಲಿಸುವ ಮೂಲಕ ಅಥವಾ ಧ್ವನಿ ಮುದ್ರಣ ಮಾಡುವುದರ ಮೂಲಕ ದಾಖಲಿಸಬಹುದು. ಅಥವಾ ತಾಲೂಕು ಕಚೇರಿಯಲ್ಲಿ ಲಿಖೀತವಾಗಿ ಸಹ ದೂರು ದಾಖಲಿಸಬಹುದಾಗಿದೆ. ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಯನ್ನು ಸಂಪರ್ಕಿಸುವಂತೆ ರಾಮನಗರ ಜಿಲ್ಲೆಯ ಜಂಟಿ ಕೃ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.