ಹುಣಸೂರು: ಕೃಷಿ ಕೆಲಸಗಳ ಕುರಿತು ಸರ್ಕಾರ ಅಭಿವೃದ್ಧಿ ಪಡಿಸಿರುವ ಬೆಳೆ ಸಮೀಕ್ಷೆಯ ಮಾಹಿತಿ ಕಂದಾಯ ಇಲಾಖೆಗೆ ರವಾನಿಸಲು ನಿರುದ್ಯೋಗಿ ಯುವಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಎಸ್.ಪಿ.ಮೋಹನ್ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಬೆಳೆ ಸಮೀಕ್ಷೆಗಾಗಿ ನಿರುದ್ಯೋಗಿ ಯುವಕರಿಗೆ ಆ್ಯಪ್ ಮೂಲಕ ಸರ್ವೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಸಂಪನ್ಮೂಲ ವ್ಯಕ್ತಿ ತನ್ನ ವ್ಯಾಪ್ತಿಯಲ್ಲಿ ದಿನವೊಂದಕ್ಕೆ ಕನಿಷ್ಠ 50 ಪಹಣಿಗಳನ್ನೊಳಗೊಂಡ ಬೇಸಾಯದ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯಗೊಳಿಸಲಾಗಿದೆ.
ರೈತರು ತಮ್ಮ ಬೆಳೆಯನ್ನು ವಿಮಾಯೋಜನೆಗೆ ಒಳಪಡಿಸಿದ್ದರೆ ಅಂತಹ ರೈತರು ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಹೊಂದಿದಲ್ಲಿ ಅದರ ಮಾಹಿತಿಯನ್ನು ಅಪ್‌ಲೋಡ್ ಮಾಡುವ ಮೂಲಕ ರೈತರ ನೆರವಿಗೆ ಬರಲಿದ್ದಾರೆಂದರು.
ರಾಜ್ಯ ವಿಧಾನಸೌಧದಿಂದ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳಾದ ಎಸಿಎಸ್ ರಾಜೀವ್ ಚಾವ್ಲ, ರಾಜೇಶ್ ಶುಕ್ಲ ಇತರರು ಸ್ಯಾಟಲೈಟ್ ಮೂಲಕ ನೇರಪ್ರಸಾರದಲ್ಲಿ ಯೋಜನೆ ಕುರಿತು ಮಾಹಿತಿ ನೀಡಿ ರೈತರ ಅನುಕೂಲಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದೆ.
ಪಿಯುಸಿ ಪಾಸಾಗಿರುವ ಸುಮಾರು 20 ಸಾವಿರ ಮಂದಿಗೆ ಈ ಯೋಜನೆ ಅನುಕೂಲವಾಗಲಿದೆ. ಕನಿಷ್ಠ 15 ಸಾವಿರ ರೂ. ದೊರೆಯಲಿದ್ದು, ಇದಕ್ಕಾಗಿ ಸರಕಾರ 22 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಬೆಳೆ ಸಮೀಕ್ಷೆ ವೇಳೆ ಕಡ್ಡಾಯವಾಗಿ ಜಮೀನಿಗೆ ತೆರಳಿ ದಾಖಲು ಮಾಡಬೇಕು, ಬೆಳೆಯ ಫೋಟೋ ತೆಗೆದುಕೊಂಡು ವಿಸ್ತೀರ್ಣವನ್ನು ನಿಗದಿತ ಡಾಟಾ ಎಂಟ್ರಿ ಮಾಡಬೇಕು. ಆಯಾ ಗ್ರಾಮ ಲೆಕ್ಕಾಧಿಕಾರಿಗಳು ಉಸ್ತುವಾರಿ ವಹಿಸಲಿದ್ದಾರೆಂದರು.
ಕಾರ್ಯಾಗಾರದಲ್ಲಿ ಶಿರಸ್ತೆದಾರ್ ಗುರುರಾಜ್, ಕೃಷಿ ಅಧಿಕಾರಿ ನವೀನ್ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.