ಅರಸೀಕೆರೆ: ಪ್ರಸಕ್ತ ಸಾಲಿನಲ್ಲಿ ರೈತರು ಮತ್ತು ಖಾಸಗಿಯವರಿಂದ ಕಂದಾಯ, ಕೃಷಿ ಇಲಾಖೆಯು ಬೆಳೆ ಸಮೀಕ್ಷೆ ಮಾಡುತ್ತಿದ್ದು, ಆಕ್ಷೇಪಣೆಗಳನ್ನು “ಬೆಳೆ ದರ್ಶಕ್-2020 ಆ್ಯಪ್’ ಮೂಲಕ ಸಲ್ಲಿಸಬಹುದು ಎಂದು ತಹಶೀಲ್ದಾರ್ ಸಂತೋಷ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ ಎಂ.ಅಶೋಕ್ ತಿಳಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ರೈತರು ತಮ್ಮ ಮೊಬೈಲ್‌ನ ಪ್ಲೆಸ್ಟೋರ್‌ನಿಂದ ಬೆಳೆ ದರ್ಶಕ್-2020 ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ತಾವು ಬೆಳೆದ ಬೆಳೆ ಪರಿಶೀಲಿಸಿ, ಆಕ್ಷೇಪಣೆಗಳಿದ್ದರೆ ಅ.15 ರೊಳಗೆ ಆ್ಯಪ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಪ್ರಸಕ್ತ ಸಾಲಿನ ಬೆಳೆ ಸಮೀಕ್ಷೆಯನ್ನು ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಬಳಸಿ ನಡೆಸಲಾಗುತ್ತಿದೆ. ತಾಲೂಕಿನ 2,34,588 ತಾಕುಗಳ (ತುಂಡು ಭೂಮಿ) ಪೈಕಿ 1,96,557ರಲ್ಲಿ ಸಮೀಕ್ಷೆ ಮಾಡಲಾಗಿದೆ. ತಾಲೂಕು ಶೇ.84 ಪ್ರಗತಿಯೊಂದಿಗೆ ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಬಾಣಾವರ ಹೋಬಳಿಯಲ್ಲಿ 31,839 ತಾಕುಗಳ ಸಮೀಕ್ಷೆ ಮಾಡಿದ್ದು, ಶೇ.91 ಪೂರ್ಣಗೊಂಡಿದೆ, ಇನ್ನೂ ಗಂಡಸಿ ಹೋಬಳಿಯಲ್ಲಿ ಶೇ.82, ಜಾವಗಲ್ ಹೋಬಳಿಯಲ್ಲಿ ಶೇ.88, ಕಣಕಟ್ಟೆ ಹೋಬಳಿಯಲ್ಲಿಶೇ.87,ಕಸಬಾಹೋಬಳಿಯಲ್ಲಿ ಶೇ.74 ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.
ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಮೇಲ್ವಿಚಾರಕರ ಮೂಲಕ ಅನುಮೋದನೆ ಪಡೆದು, ನಂತರ ಈ ಮಾಹಿತಿಯನ್ನು ಬೆಂಬಲ ಬೆಲೆ, ಕೃಷಿ ಉತ್ಪನಗಳ ಖರೀದಿ, ಬೆಳೆ ವಿಮೆ ಯೋಜನೆ, ಬೆಳೆ ನಷ್ಟ ಪರಿಹಾರ ನೀಡುವ ಸಮಯದಲ್ಲಿ ಉಪಯೋಗಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಮಾಹಿತಿ ಪಹಣಿಯ ಬೆಳೆ ಕಾಲಂನಲ್ಲಿ ನಮೂದಿಸಲಾಗುತ್ತದೆ ಎಂದು ವಿವರಿಸಿದರು.
ಬೆಳೆ ದರ್ಶಕ್ ಆ್ಯಪ್ ವಿಶೇಷತೆ: ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ದಾಖಲಾಗಿರುವ ಬೆಳೆ ವಿವರ, ವಿಸ್ತೀರ್ಣದ ಮಾಹಿತಿ ಮತ್ತು ಬೆಳೆ ಸಮೀಕ್ಷೆ ಸಮಯದಲ್ಲಿ ನಿಮ್ಮ ಜಮೀನಿನಲ್ಲಿ ತೆಗೆದ ಜಿಪಿಎಸ್ ಆಧಾರಿತ ಛಾಯಾಚಿತ್ರಗಳನ್ನು ವೀಕ್ಷಿಸಬಹುದು. ಬೆಳೆ ಸಮೀಕ್ಷೆ ಮಾಡಿದವರಹೆಸರು, ಮೊಬೈಲ್ ಸಂಖ್ಯೆ ಪಡೆಯಬಹುದು. ಅಲ್ಲದೆ, ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ಅಂಗೀಕರಿಸಿದ್ದಾರೋ, ಇಲ್ಲವೋ ಎಂದು ಷರಾ ಕಾಲಂನಲ್ಲಿ ತಿಳಿದು ಬೆಳೆ ಸಮೀಕ್ಷೆ ವಿವರ ತಪ್ಪಾಗಿ ದಾಖಲಾಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು. ಮೇಲ್ವಿಚಾರಣೆ ಮಾಡುವ ಸರ್ಕಾರಿ ಅಧಿಕಾರಿಗಳು ಆಕ್ಷೇಪಣೆಕುರಿತು ಏನು ಕ್ರಮಕೈಗೊಂಡಿದ್ದಾರೆ ಎಂದು ತಿಳಿಯಬಹುದು.
ಈ ರೀತಿಯಾಗಿ ಮೇಲ್ವಿಚಾರಕರು ಆಕ್ಷೇಪಣೆ ಪರಿಶೀಲಿಸಿ ಅವುಗಳನ್ನು ತುರ್ತಾಗಿ ಇತ್ಯರ್ಥ ಪಡಿಸುವರು, ಸ್ವೀಕೃತಿಯಾಗಿರುವಪ್ರತಿಯೊಂದು ಆಕ್ಷೇಪಣೆಗಳನ್ನೂ ಕೂಲಂಕಶವಾಗಿ ಪರಿಶೀಲಿಸಿ ಈಗಾಗಲೇ ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿಯೊಂದಿಗೆ ಹೋಲಿಸಿ ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸುವರು. ಬೆಳೆ ಮಾಹಿತಿ ಆಧಾರದ ಮೇರೆಗೆ ಇತ್ಯರ್ಥ ಪಡಿಸಲು ಸಾಧ್ಯವಿಲ್ಲದಿದ್ದಲ್ಲಿ ಮೇಲ್ವಿಚಾರಕರೇ ಖುದ್ದಾಗಿಮಹಜರು ನಡೆಸುವ ಮೂಲಕ ಆಕ್ಷೇಪಣೆ ಇತ್ಯರ್ಥ ಪಡಿಸುವರೆಂದು ಹೇಳಿದರು.