Advertisement

ರೈತನೇ ಸರ್ಟಿಫಿಕೇಟ್‌ ಕೊಡುವ ಕಾಲ ಬಂದಿದೆ

07:37 PM Aug 15, 2020 | Suhan S |

ಚಿತ್ರದುರ್ಗ: ತನ್ನ ಹೊಲಕ್ಕೆ ತಾನೇ ಸರ್ಟಿಫಿಕೇಟ್‌ ಕೊಡುವ ಸಂಪೂರ್ಣ ಸ್ವಾತಂತ್ರ್ಯ ರೈತನಿಗೆ ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ಸಿಕ್ಕಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

Advertisement

ಹಿರಿಯೂರು ತಾಲೂಕು ಕಸ್ತೂರಿ ರಂಗಪ್ಪನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರೈತರ ಬೆಳೆ ಸಮೀಕ್ಷೆ ಉತ್ಸವದ ಮೊಬೈಲ್‌ ಆ್ಯಪ್‌ ಬಳಕೆಯ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದ ಅವರು, ರೈತರು ತೆಗೆದ ಫೋಟೋಗೆ ಗೌರವವಿದೆ. ರೈತರು ತಮ್ಮ ಭೂಮಿಗೆ ಒಡೆಯರಾಗಿದ್ದು, ನನ್ನ ಬೆಳೆ ನನ್ನ ಹಕ್ಕು ಎಂಬುದನ್ನು ರೈತರು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.

ರೈತರ ಬೆಳೆ ಸಮೀಕ್ಷೆಯನ್ನು ಈ ಮೊದಲು ಖಾಸಗಿ ನಿವಾಸಿಗಳಿಂದ ಬೆಳೆ ಸಮೀಕ್ಷೆ ಮಾಡಲಾಗುತ್ತಿತ್ತು. ಇದರಿಂದ ನಿಖರವಾಗಿ ಬೆಳೆ ವಿವರವನ್ನು ದಾಖಲಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯ ಲಾಭ, ಪ್ರವಾಹ ಮತ್ತು ಬರಗಾಲದ ಸಂದರ್ಭಲ್ಲಿ ನೀಡುವ ನಷ್ಟ ಪರಿಹಾರ ವಿತರಿಸಲು ಕಷ್ಟವಾಗುತ್ತಿತ್ತು. ಆದ್ದರಿಂದ ಈ ವರ್ಷ ಬೆಳೆ ಸಮೀಕ್ಷೆ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿಯೊಬ್ಬ ರೈತ ತನ್ನ ಹೊಲದಲ್ಲಿ ಆ್ಯಪ್‌ ಮೂಲಕ ತಾನು ಬೆಳೆದ ಬೆಳೆಯ ವಿವರವನ್ನು ಸ್ವತಃ ತಾವೇ ಫೋಟೋ ತೆಗೆದು ಅಪ್‌ಲೋಡ್‌ ಮಾಡಬೇಕು. ಇದು ರೈತರಿಗೆ ನೀಡಿದ ದೊಡ್ಡ ಸ್ವಾತಂತ್ರ್ಯವಾಗಿದೆ. ಪ್ರತಿಯೊಬ್ಬ ರೈತ ತನ್ನ ಹಿಸ್ಸೆಯಲ್ಲಿ ಅವರು ಬೆಳೆ ವಿವರವನ್ನು ದಾಖಲಿಸಬೇಕು. ಆ.24ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಯೂರಿಯಾ ಪೂರೈಕೆಗೆ ಕ್ರಮ:ಜಿಲ್ಲೆಯಲ್ಲಿ ಜುಲೈವರೆಗೆ 39,190 ಮೆಟ್ರಿಕ್‌ ಟನ್‌ ಯೂರಿಯಾ ಬೇಡಿಕೆ ಇತ್ತು. ಜುಲೈವರೆಗೆ 40,303 ಯೂರಿಯಾವನ್ನು ಸರಬರಾಜು ಮಾಡಲಾಗಿದ್ದು, ಇನ್ನೂ ನಾಲ್ಕೈದು ದಿನಗಳಲ್ಲಿ 1000 ಮೆಟ್ರಿಕ್‌ ಟನ್‌ ಯೂರಿಯಾ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದ್ದು, ಯೂರಿಯಾ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.

Advertisement

ಕೃಷಿ ಯಂತ್ರಧಾರೆಗಳ ನೆರವು: ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಬೇಕಾಗಿರುವ ಸಣ್ಣ ಮತ್ತು ದೊಡ್ಡ ಟ್ರ್ಯಾಕ್ಟರ್‌ಗಳನ್ನು ಖರೀದಿಸಲು ಈ ವರ್ಷದಿಂದ ರೈತ ಸಹಕಾರಿ ಸಂಘಗಳಿಗೆ 8 ಲಕ್ಷಗಳವರೆಗೆ ಸಹಾಯಧನ ನೀಡಲಾಗುತ್ತಿದೆ. ಕನಿಷ್ಟ 10 ರೈತರು ಸಂಘ ರಚಿಸಿ ಸಹಕಾರ ಸಂಘಗಳ ನಿಯಮದಡಿ ನೋಂದಣಿಯಾಗಿ ಶೇ.20ರಷ್ಟು ಭರಿಸಿದಲ್ಲಿ ಶೇ 80 ರಷ್ಟು ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯು ಈ ವರ್ಷದಿಂದಲೇ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದರು.

ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಶಶಿಕಲಾ ಸುರೇಶ್‌ ಬಾಬು, ಸದಾಶಿವ ಹಾಗೂ ಕೃಷಿ ಇಲಾಖೆ ಸಿಬ್ಬಂದಿ, ರೈತ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next