ಮಲ್ಪೆ: ಜಿಲ್ಲೆಯಲ್ಲಿ ಕೃಷಿ ಉತ್ಪಾದಕ ಸಂಘಗಳನ್ನು ಆರಂಭಿಸಬೇಕು. ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ, ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆಗಳ ಪ್ರಯೋಜನ ಪಡೆಯುವಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಕಡೆಕಾರಿನಲ್ಲಿ ಕೃಷಿ ಇಲಾಖೆಯ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೃಷಿ ಲಾಭದಾಯಕವಲ್ಲ ಎಂಬ ಕಾರಣದಿಂದ ಹಲವು ರೈತರು ತಮ್ಮ ಭೂಮಿಯನ್ನು ಹಡಿಲು ಬಿಡುತ್ತಿದ್ದು, ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಲು ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಈ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು.
ಇದನ್ನೂ ಓದಿ:ಬಳಿಚಕ್ರ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ| ಗ್ರಾಮಸ್ಥರಲ್ಲಿ ಆತಂಕ
ಸಣ್ಣ ಮತ್ತು ಮಧ್ಯಮ ರೈತರು ಕೃಷಿ ಚಟುವಟಿಕೆಗಳಿಂದ ವಿಮುಖರಾಗದಂತೆ ತಡೆಯಲು ಪ್ರಧಾನಮಂತ್ರಿಗಳು, ಯಂತ್ರೋ ಪಕರಣ ಬಾಡಿಗೆ ಕೇಂದ್ರಗಳು, ಕೃಷಿ ಸಿಂಚಾಯಿ ಯೋಜನೆ ಮೂಲಕ ಹನಿ ನೀರಾವರಿ ಉತ್ತೇಜನ, ರಸಗೊಬ್ಬರದ ಗುಣಮಟ್ಟದ ಏರಿಕೆ, ಪರಂಪರಾಗತ ಕೃಷಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿ, ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಆದ್ಯತೆ ನೀಡಲಾಗುತ್ತಿದೆ. ವಿದೇಶದಲ್ಲಿ ನೈಸರ್ಗಿಕವಾಗಿ ಬೆಳೆದ ಸಾವಯವ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ನಮ್ಮಲ್ಲಿ ಬೆಳೆದಂತಹ ಆಹಾರ-ಧಾನ್ಯಗಳನ್ನು ವಿದೇಶಕ್ಕೆ ರಫ್ತು ಮಾಡುವುದರಿಂದ ರೈತರೂ ಹೆಚ್ಚಿನ ಲಾಭ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ರಘುಪತಿ ಭಟ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಸಹಾಯಕ ನಿರ್ದೇಶಕ ಮೋಹನ್ ರಾಜ್, ಕೃಷಿ ಇಲಾಖೆ ಹಾಗೂ ಬ್ರಹ್ಮಾವರ ಕೃಷಿ ಕೇಂದ್ರದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಖಾತೆಗೆ 6,000 ರೂ.
ಸಣ್ಣ ಕೃಷಿಕರು, ಭೂಮಿಯ ಒಡೆತನ ಹೊಂದಿರುವಂತಹ ಕೃಷಿಕರಿಗೆಲ್ಲರಿಗೂ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಪ್ರಧಾನಿ ಅವರು ವರ್ಷಕ್ಕೆ 6,000 ರೂ.ಗಳನ್ನು ನೇರವಾಗಿ ಕೃಷಿಕರ ಖಾತೆಗೆ ಹಾಕುತ್ತಿದ್ದಾರೆ. ಇದನ್ನು ಕೃಷಿಯ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ಸಚಿವೆ ಶೋಭಾ ತಿಳಿಸಿದರು.