Advertisement

ಆ್ಯಪ್‌ನಲ್ಲಿ ಶೀಘ್ರ ಬೆಳೆ ವಿವರ ದಾಖಲಿಸಿ: ಭಾಗವಾನ್‌

04:40 PM Sep 05, 2020 | Suhan S |

ಹಿರೇಕೆರೂರ: ನನ್ನ ಬೆಳೆ ನನ್ನ ಹಕ್ಕು ಘೋಷಣೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರೇ ಸ್ವತಃ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ರೈತ ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ದಾಖಲಿಸುವ ಪ್ರಕ್ರಿಯೆ ತಾಲೂಕಿನಲ್ಲಿ ಪ್ರಗತಿ ಹಂತದಲ್ಲಿದೆ. ಉಳಿದ ಎಲ್ಲ ರೈತರು ಸಹ ಸೆ.10ರ ಒಳಗಾಗಿ ಕೂಡಲೇ ತಮ್ಮ ಬೆಳೆ ವಿವರ ದಾಖಲಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ಆರ್‌.ಎಚ್‌.ಭಾಗವಾನ್‌ ಮನವಿ ಮಾಡಿದರು.

Advertisement

ತಾಲೂಕಿನ ಆಲದಗೇರಿ ಗ್ರಾಮದ ಸರ್ವೇ ನಂ. 232ರ ಜಮೀನಿನಲ್ಲಿ ರೈತರಿಗೆ ಬೆಳೆ ಸಮೀಕ್ಷೆ ಕುರಿತು ಮಾಹಿತಿ ನೀಡಿ, ರೈತ ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ಸ್ವತಃ ಬೆಳೆ ವಿವರ ದಾಖಲಿಸಿ ಮಾತನಾಡಿದರು.ರೈತರಿಂದಲೇ ಬೆಳೆ ಸಮೀಕ್ಷೆ ಮಾಡುವ ಈ ಕಾರ್ಯ ಅತ್ಯಂತ ಉಪಯುಕ್ತವಾಗಿದೆ. ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳ ದಾಖಲೆ ಪಹಣಿಯಲ್ಲಿ ತಪ್ಪಾಗಿದ್ದರೆ ರೈತರು ಬೆಳೆವಿಮೆ, ಬೆಳೆಹಾನಿ ಪರಿಹಾರ, ಬೆಳೆಸಾಲ, ಸಹಾಯಧನ ಸೇರಿ ಸರ್ಕಾರದಿಂದ ಸಿಗುವ ಸೌಲಭ್ಯದಿಂದ ವಂಚಿತರಾಗುತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಸ್ವತಃ ರೈತರೇ ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ತಮ್ಮ ಬೆಳೆಗಳ ವಿವರ ದಾಖಲಿಸುವ ವ್ಯವಸ್ಥೆ ಮಾಡಿದೆ ಎಂದರು.

ರೈತರು ತಮ್ಮ ಮೊಬೈಲ್‌ ಮೂಲಕ ಬೆಳೆಗಳ ವಿವರಣೆ ದಾಖಲಿಸುವುದರಿಂದ ಯಾರಿಗೂ ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ. ತಪ್ಪು ಮಾಹಿತಿ ದಾಖಲಾಗುವುದಿಲ್ಲ ಮತ್ತು ರೈತರು ಸೌಲಭ್ಯದಿಂದ ವಂಚಿತರಾಗುವುದು ತಪ್ಪುತ್ತದೆ. ಸರ್ಕಾರದ ಸೌಲಭ್ಯದಿಂದ ವಂಚಿತರಾಗುವುದಿಲ್ಲ ಎಂದು ತಿಳಿಸಿದರು. ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿ ಪ್ಲೇಸ್ಟೊರ್‌ ಮೂಲಕ ರೈತರ ಬೆಳೆ ಸಮೀಕ್ಷೆ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಂಡು ರೈತರ ಹೆಸರು, ಮೊಬೈಲ್‌ ಸಂಖ್ಯೆ, ಸರ್ವೇ ನಂಬರ್‌, ಕ್ಷೇತ್ರ, ಬೆಳೆ ವಿವರ ದಾಖಲಿಸಿ ಬೆಳೆಯ ಛಾಯಾಚಿತ್ರ ಅಪ್‌ಲೋಡ್‌ ಮಾಡಬೇಕು. ಬೆಳೆ ದೃಢೀಕರಣ ಮಾಡಿಕೊಳ್ಳಬೇಕು. ಮುಖ್ಯವಾಗಿ ಈಗಾಗಲೇ ಕಟಾವು ಮಾಡುತ್ತಿರುವ ಹೆಸರು, ಉದ್ದು, ಅಲಸಂದಿ ಮತ್ತು ಕಟಾವು ಹಂತದಲ್ಲಿರುವ ಶೇಂಗಾ ಇತರೇ ಬೆಳೆಗಳನ್ನು ಕಟಾವು ಪೂರ್ವದಲ್ಲಿಯೇ ದಾಖಲಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಈ ವೇಳೆ ಕೃಷಿ, ಕಂದಾಯ, ಗ್ರಾಪಂ ನೌಕರರು ಸೇರಿದಂತೆ ಮಾಹಿತಿ ಇರುವ ಯಾರದಾದರೂ ಸಹಾಯ ಪಡೆಬಹುದುಕೊಂಡು ರೈತ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಬೆಳೆ ವಿವಿರ ದಾಖಲಿಸಬಹುದು ಎಂದು ಹೇಳಿದರು.

ಈ ವೇಳೆ ಕಂದಾಯ ಇಲಾಖೆಯ ನಾಗರಾಜ ಕಟ್ಟಿಮನಿ, ಶಿವಕುಮಾರ ಬಣಕಾರ, ರೈತರಾದ ದಾನಪ್ಪ ಗೌಳಿ, ಪಿ.ಆರ್‌. ರಮೇಶ ಮೇದೂರು ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next