ಸುರಪುರ: ಸರಕಾರ ನೀಡಿರುವ ಗಡುವಿನಲ್ಲಿ ಬೆಳೆ ಸಮೀಕ್ಷೆ ಗುರಿ ಶೇ.100ರಷ್ಟು ಸಾಧಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ಆರ್. ದೇವಿಕಾ ಬೆಳೆ ಸಮೀಕ್ಷೆಗೆ ನೇಮಿಸಿದ ಖಾಸಗಿ ವ್ಯಕ್ತಿ (ಪಿಆರ್) ಗಳಿಗೆ ಸೂಚಿಸಿದರು.
ನಗರದ ತಹಶೀಲ್ದಾರ್ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 70 ಸಾವಿರ ಎಕರೆ ಭೂಮಿಯಲ್ಲಿ 6 ಸಾವಿರ ಎಕರೆ ಬೆಳೆ ನೋಂದಣಿಯಾಗಿದೆ. ಇದು ತೀರಾ ಕಡಿಮೆ ಸಾಧನೆ ಎಂದು ವಿಷಾದಿಸಿದ ಅವರು, ರೈತರು 2020-21ನೇ ಸಾಲಿನ ಬೆಳೆ ನೋಂದಣಿ ಮೊಬೈಲ್ ಆ್ಯಪ್ ಡೌನ್‌ಲೌಡ್ ಮಾಡಿಕೊಂಡು ಬೆಳೆ ಸಮೀಕ್ಷೆ ಖುದ್ದಾಗಿ ದಾಖಲಿಸಬೇಕು. ಈ ಕುರಿತು ಎಲ್ಲ ಪಿಆರ್ ಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು. ಹೀಗೆ ಮಾಡುವುದರಿಂದ ಸರಕಾರದ ಸೌಲಭ್ಯಗಳು ಸಕಾಲದಲ್ಲಿ ದೊರೆಯುತ್ತವೆ ಎಂದು ತಿಳಿಸಿದರು.
ಕಕ್ಕೇರಾ ಭಾಗದಲ್ಲಿ 19,834 ಎಕರೆ ಬೆಳೆಯಲ್ಲಿ 1,448 ಎಕರೆ ಮಾತ್ರ ಬೆಳೆ ಸಮೀಕ್ಷೆಗೆ ಒಳಪಡಿಸಲಾಗಿದೆ. ಕೆಂಭಾವಿ ಹೋಬಳಿಯಲ್ಲಿ 24,339 ಎಕರೆಯಲ್ಲಿ 1,832 ಎಕರೆ ಬೆಳೆ ನೋಂದಾಯಿಸಲಾಗಿದೆ. ತಾಲೂಕಿನಲ್ಲಿರುವ ಕೃಷಿ ಮತ್ತು ಕಂದಾಯ ಇಲಾಖೆಯ ಪಿಆರ್ ಗಳು ಕೆಲಸವೇ ಇಲ್ಲವೆಂದು ನಿಶ್ಚಯಿಸಿಬಿಟ್ಟಿದ್ದಾರೆ. ಇದು ಸರಿಯಲ್ಲ. ಉಳಿದಿರುವ 20 ದಿನದಲ್ಲಿ ಶೇ. 95ರಷ್ಟು ಗುರಿ ತಲುಪಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದು ತಾಕೀತು ಮಾಡಿದರು. ಉಪ ಕೃಷಿ ನಿರ್ದೇಶಕ ಡಾ| ಬಾಲರಾಜ ರಂಗರಾವ್ ಮಾತನಾಡಿ ಮೊಬೈಲ್ ಇಲ್ಲದವರ ಫೈಲ್‌ನಿಂದ ಹೆಸರು, ಮೊಬೈಲ್, ಸರ್ವೇ ನಂಬರ್ ದಾಖಲಿಸಿ ಸಹಿ ಮೂಲಕ ದೃಢೀಕರಣ ಪಡೆಯಬೇಕು. ತೊಂದರೆಯಾದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಇಡೀ ಜಿಲ್ಲೆಯಲ್ಲಿ ಶೇ.19 ಗುರಿ ಸಾಧಿಸಲಾಗಿದೆ. ಉಳಿದ ಶೇ. 81 ಗುರಿ ತಲುಪಲು ಪ್ರತಿಯೊಬ್ಬರೂ ಶ್ರಮಿಸಬೇಕು. ಮಾಹಿತಿ ಇಲ್ಲದ ರೈತರಿಗೆ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ವರದಿ ದಾಖಲಿಸಿಕೊಳ್ಳುವುದನ್ನು ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.
ಗ್ರೇಡ್-2 ತಹಶೀಲ್ದಾರ್ ಸೋಪಿಯಾ ಸುಲ್ತಾನ್, ಕಂದಾಯ ನಿರೀಕ್ಷಕ ಗುರುಬಸಪ್ಪ, ರಾಜಾ ಸಾಬ್, ವಿಠuಲ್ ಬಂದಾಳ, ಎಡಿ ಗುರುನಾತ, ಎಒ ಭೀಮರಾಯ, ಪ್ರಕಾಶ, ಗ್ರಾಮಲೆಕ್ಕಿಗರಾದ ಪ್ರದೀಪಕುಮಾರ, ಶಿವಕುಮಾರ, ಮಹೇಂದ್ರ,ಮಲ್ಲಮ್ಮ ಶ್ರೀದೇವಿ, ಸಹಾಯಕ ಕೃಷಿ ಅಧಿಕಾರಿಗಳು ಇದ್ದರು.