Advertisement

ಬೆಳೆ ಸಮೀಕ್ಷೆ; 15 ದಿನದಲ್ಲಿ ಶೇ.30.13 ಪ್ರಗತಿ

05:25 PM Sep 01, 2020 | Suhan S |

ಹಾವೇರಿ: ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ರೈತರೇ ಬೆಳೆ ಸಮೀಕ್ಷೆ ಕೈಗೊಳ್ಳುವ ಬೆಳೆ ಸಮೀಕ್ಷೆ ಆ್ಯಪ್‌ ಯೋಜನೆಗೆ ಜಿಲ್ಲೆಯಲ್ಲಿ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯೋಜನೆ ಆರಂಭಗೊಂಡ ಕೇವಲ 15 ದಿನಗಳಲ್ಲಿ ಜಿಲ್ಲೆಯ ಶೇ.30.13 ರೈತರು ಮೊಬೈಲ್‌ ಆ್ಯಪ್‌ನಲ್ಲಿ ಮಾಹಿತಿ ನಮೂದಿಸುವ ಮೂಲಕ “ನನ್ನ ಬೆಳೆ ನನ್ನ ಹಕ್ಕು’ ಪ್ರದರ್ಶಿಸಿದ್ದಾರೆ.

Advertisement

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ರೈತರೇ ಕೈಗೊಳ್ಳಲು ಕೃಷಿ ಇಲಾಖೆ ಆ್ಯಪ್‌ ಬಿಡುಗಡೆ ಮಾಡಿ ಬೆಳೆ ಸಮೀಕ್ಷೆ ಹೊಣೆ ರೈತರಿಗೆ ನೀಡಿದ್ದು, ಆ್ಯಂಡ್ರಾಯ್ಡ ಮೊಬೈಲ್‌ ಬಳಸುತ್ತಿರುವ ರೈತರು ಸುಲಭವಾಗಿ ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ತಮ್ಮ ಬೆಳೆ ಮಾಹಿತಿ ನಮೂದಿಸುತ್ತಿದ್ದಾರೆ. ಇನ್ನು ಕೆಲವು ರೈತರು ತಮ್ಮ ಮನೆಯಲ್ಲಿರುವ ಹಾಗೂ ಗ್ರಾಮದಲ್ಲಿರುವ ಯುವಕರ ಸಹಾಯದಿಂದ ಮೊಬೈಲ್‌ ಮೂಲಕ ಬೆಳೆ ಸಮೀಕ್ಷೆ ಮಾಹಿತಿ ನಮೂದಿಸುತ್ತಿದ್ದಾರೆ.

ಸರ್ಕಾರ ಹಾಗೂ ಕೃಷಿ ಸಚಿವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಪ್ರಾಯೋಗಿಕ ಹಂತದಲ್ಲಿರುವ ಈ ಯೋಜನೆಗೆ ಜಿಲ್ಲೆಯಲ್ಲಿ ರೈತರಿಂದ ಉತ್ತಮ ಸ್ಪಂದನೆ ದೊರಕುತ್ತಿರುವುದು ತಂತ್ರಜ್ಞಾನ ಬಳಕೆಯಲ್ಲಿಯೂ ಅನ್ನದಾತರು ಹಿಂದೆ ಬಿದ್ದಿಲ್ಲ ಎಂಬದು ಸಾಬೀತಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 4,80,572 ಕೃಷಿ ಭೂಮಿ (ಸರ್ವೇ ಕ್ರಮಾಂಕ) ಇದ್ದು ಈವರೆಗೆ 1,44,819 ಕೃಷಿ ಭೂಮಿಯ ಬೆಳೆ ಮಾಹಿತಿ ಅಂದರೆ ಶೇ.30.13 ಬೆಳೆಸಮೀಕ್ಷೆ ಮಾಹಿತಿ ನಮೂದಾಗಿದೆ. ಬೆಳೆ ಸಮೀಕ್ಷೆ ಆ್ಯಪ್‌  ಬಳಸಿ ಮಾಹಿತಿ ನಮೂದಿಸುವಲ್ಲಿ ಜಿಲ್ಲೆಯಲ್ಲಿ ಬ್ಯಾಡಗಿ ತಾಲೂಕಿನ ರೈತರು ಮುಂದಿದ್ದು ಶೇ.39.67 ಬೆಳೆ ಸಮೀಕ್ಷೆ ಮಾಹಿತಿ ಅಪ್ಲೋಡ್‌ ಆಗಿದೆ. ಇನ್ನುಳಿದಂತೆ ಶಿಗ್ಗಾವಿ ತಾಲೂಕು- ಶೇ.35.87, ಹಾನಗಲ್ಲ-ಶೇ.32.89, ಹಾವೇರಿ-ಶೇ.30.34, ಸವಣೂರು- ಶೇ.29.32, ರಟ್ಟಿಹಳ್ಳಿ-ಶೇ.26.22, ರಾಣಿಬೆನ್ನೂರು ಶೇ.25.24,  ಹಿರೇಕೆರೂರು -ಶೇ.24.91 ಕೃಷಿ ಪ್ರದೇಶದ ಬೆಳೆ ಸಮೀಕ್ಷೆ ಮಾಹಿತಿ ರೈತರು ಮೊಬೈಲ್‌ ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ.

1.44 ಲಕ್ಷ ಮಾಹಿತಿ ನಮೂದು: ಬ್ಯಾಡಗಿ ತಾಲೂಕಿನ 44,916 ಕೃಷಿ ಭೂಮಿಯಲ್ಲಿ 17,819 ಕೃಷಿ ಭೂಮಿ ಬೆಳೆ ಸಮೀಕ್ಷೆ ಮಾಹಿತಿ ನಮೂದಿಸಲಾಗಿದೆ. ಅದರಂತೆ ಶಿಗ್ಗಾವಿ ತಾಲೂಕಿನ 47,610 ಕೃಷಿ ಭೂಮಿಯಲ್ಲಿ 17,078, ಹಾನಗಲ್ಲ ತಾಲೂಕಿನ 76,779 ಕೃಷಿ ಭೂಮಿಯಲ್ಲಿ 25252, ಹಾವೇರಿ ತಾಲೂಕಿನ 78,864 ಕೃಷಿ ಭೂಮಿಯಲ್ಲಿ 23,928, ಸವಣೂರು ತಾಲೂಕಿನ 43,661 ಕೃಷಿ ಭೂಮಿಯಲ್ಲಿ 12,801, ರಟ್ಟಿಹಳ್ಳಿ ತಾಲೂಕಿನ 48,359 ಕೃಷಿ ಭೂಮಿಯಲ್ಲಿ 12,679, ರಾಣಿಬೆನ್ನೂರು ತಾಲೂಕಿನ 89,311 ಕೃಷಿಭೂಮಿಯಲ್ಲಿ 22,542, ಹಿರೇಕೆರೂರು ತಾಲೂಕಿನ 51,072 ಕೃಷಿಭೂಮಿಯಲ್ಲಿ 12,720 ಕೃಷಿ ಪ್ರದೇಶದ ಬೆಳೆ ಸಮೀಕ್ಷೆ ಮಾಹಿತಿ ರೈತರು ಮೊಬೈಲ್‌ ಮೂಲಕ ನಮೂದಿಸಿದ್ದಾರೆ. ಕೆಲವು ಕಾರಣಾಂತರಗಳಿಂದ ಬೆಳೆ ಮಾಹಿತಿ ನಮೂದಿಸದ ರೈತರ ಕೃಷಿ ಪ್ರದೇಶಗಳಿಗೆ ಪಿಆರ್‌ಗಳನ್ನು ಕಳುಹಿಸಿ ಬೆಳೆ ಮಾಹಿತಿ ಅಪ್ಲೋಡ್‌ ಮಾಡುವ ಯೋಜನೆ ಕೃಷಿ ಇಲಾಖೆ ಹಾಕಿಕೊಂಡಿದೆ.

ಈ ಮೂಲಕ ಜಿಲ್ಲೆಯಲ್ಲಿ ಯಾವ ರೈತರು ಬಿಟ್ಟು ಹೋಗದಂತೆ ಕೃಷಿ ಇಲಾಖೆ ನಿಗಾ ವಹಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮೊಬೈಲ್‌ ಮೂಲಕ ರೈತರು ತಮ್ಮ ಬೆಳೆ ಮಾಹಿತಿ ಸ್ವತಃ ತಾವೇ ಅಪ್ಲೋಡ್‌ ಮಾಡುವ ನೂತನ ಮಹತ್ವಾಕಾಂಕ್ಷಿ ಯೋಜನೆಗೆ ರೈತರು ಉತ್ಸಾಹ ತೋರುತ್ತಿದ್ದು, ಸೆ.24 ರ ವರೆಗೆ ಬೆಳೆ ಮಾಹಿತಿ ನಮೂದಿಗೆ ಅವಕಾಶ ನೀಡಿರುವುದು ಜಿಲ್ಲೆಯ ರೈತರಿಗೆ ಇನ್ನೊಂದಿಷ್ಟು ರೈತರಿಗೆ ಪ್ರೇರಣೆಯಾಗಲಿದೆ.

Advertisement

ಅಧಿಕಾರಿಗಳಿಂದ ಪರಿಶೀಲನೆ : ರೈತರು ಬೆಳೆ ಸಮೀಕ್ಷೆ ಮಾಹಿತಿ ಮೊಬೈಲ್‌ನಲ್ಲಿ ಅಪ್ಲೋಡ್‌ ಮಾಡುವ ಸಂದರ್ಭದಲ್ಲಿ ತಪ್ಪಾಗಿ ಮಾಹಿತಿ ನಮೂದಿಸಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ರೈತರು ಸಲ್ಲಿಸಿದ ಎಲ್ಲ ಮಾಹಿತಿ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಮಾಹಿತಿ ತಪ್ಪಾಗಿದ್ದರೆ, ಅಪೂರ್ಣವಾಗಿದ್ದರೆ, ಏನಾದರೂ ಸಂಶಯಗಳಿದ್ದರೆ ರೈತರನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳುತ್ತಾರೆ. ಜತೆಗೆ ನಮೂದಿಸಿರುವ ಮಾಹಿತಿ ಎಲ್ಲವೂ ಸರಿಯಾಗಿರುವ ಬಗ್ಗೆ ಇನ್ನೊಮ್ಮೆ ರೈತರಿಂದ ಖಚಿತ ಪಡಿಸಿಕೊಂಡ ನಂತರವೇ ಅದನ್ನು ಅಂತಿಮ ಅಂಕಿ-ಅಂಶಗಳ ಪಟ್ಟಿಗೆ ಸೇರಿಸಿಕೊಳ್ಳುತ್ತಾರೆ. ಆದ್ದರಿಂದ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿ ಕಾರಿಗಳನ್ನು ಸಂಪರ್ಕಿಸಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಸರ್ಕಾರದ ನೂತನ ಬೆಳೆ ಸಮೀಕ್ಷೆ ಯೋಜನೆಗೆ ಜಿಲ್ಲೆಯ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೇವಲ 15 ದಿನಗಳಲ್ಲಿ ಶೇ.30.13 ಪ್ರದೇಶದ ಬೆಳೆ ಸಮೀಕ್ಷೆ ಮಾಹಿತಿ ರೈತರು ನಮೂದಿಸಿದ್ದಾರೆ. ಸೆ.24ರ ವರೆಗೂ ಅವಧಿ ವಿಸ್ತರಿಸಲಾಗಿದ್ದು, ರೈತರು ಯಾವುದೇ ಆತಂಕವಿಲ್ಲದೇ ಮಾಹಿತಿ ಅಪ್ಲೋಡ್‌ ಮಾಡಬಹುದು.- ಮಂಜುನಾಥ.ಬಿ. ಕೃಷಿ ಜಂಟಿ ನಿರ್ದೇಶಕರು, ಹಾವೇರಿ

 

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next