ಬೈಲಹೊಂಗಲ: ಕೋವಿಡ್ 19 ಸೋಂಕು ತಡೆಗೆ ಸರಕಾರ ಲಾಕ್‌ಡೌನ್ ಜಾರಿ ಮಾಡಿರುವುದರಿಂದ ರೈತರು ಬೆಳೆದ ತರಕಾರಿ ಮತ್ತು ಇನ್ನಿತರ ಬೆಳೆ ಮಾರಾಟ ಮಾಡಲು ಸಾಧ್ಯವಾಗದೆ ಸಂಕಷ್ಟ ಪಡುತ್ತಿದ್ದಾರೆ. ಮುಂದೇನು ಎಂದು ದಿಕ್ಕು ತೋಚದೆ ಸರಕಾರದ ಸಹಾಯ ಹಸ್ತಕ್ಕಾಗಿ ಕಾಯುತ್ತಿದ್ದಾರೆ.
ತಾಲೂಕಿನ ಮಲ್ಲಮ್ಮನ ಬೆಳವಡಿ, ಬೂದಿಹಾಳ, ದೊಡವಾಡ,ಉಡಿಕೇರಿ,ಸುತಗಟ್ಟಿ, ಕರಿಕಟ್ಟಿ, ಹಾಗೂ ಇನ್ನು ಅನೇಕ ಗ್ರಾಮಗಳ ರೈತರು ತಮ್ಮ ಜಮೀನುಗಳಲ್ಲಿ ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಫಸಲು ಆದಾಯ ತರದೆ ಹಾಳಾಗುತ್ತಿರುವುದರಿಂದ ಕಂಗಾಲಾಗಿದ್ದಾರೆ.
ರೂಟರ್ ಹೊಡೆಸಿ ನಾಶ: ಮಲ್ಲಮ್ಮನ ಬೆಳವಡಿ ಗ್ರಾಮದ ರೈತರಾದ ಈರಪ್ಪ ಶಿವಬಸಪ್ಪ ಹಳ್ಳದಕೇರಿಯವರು ತಮ್ಮ 2.5 ಎಕರೆ ಹೊಲದಲ್ಲಿ ಹೂಕೋಸು (ಪ್ಲವರ್ ಬೆಳೆದಿದ್ದರು) 4 ಸಾವಿರ ತೆರವು ಸಸಿ ನಾಟಿ ಮಾಡಿ ರಸಗೊಬ್ಬರ ಮತ್ತು ಇತರೆ ಖರ್ಚು ಸೇರಿ ಸುಮಾರು 1 ಲಕ್ಷ 10 ಸಾವಿರ ರೂಪಾಯಿ ಖರ್ಚಾಗಿದೆ. ಲಾಕ್‌ಡೌನ್ ಜಾರಿಯಾಗಿರುವುದರಿಂದ ಮಾರುಕಟ್ಟೆಗಳು ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಟಾವಿಗೆ ಬಂದ ಹೂಕೋಸನ್ನು ಯಾರೊಬ್ಬರೂ ತೆಗೆದುಕೊಳ್ಳಲು ಬಾರದಿರುವುದರಿಂದ ಬೆಳೆದ ಹೊಲದಲ್ಲೇ ರೂಟರ್ ಹೊಡೆಸಿ ನಾಶ ಮಾಡಲು ತೀರ್ಮಾನಿಸಿದ್ದೇನೆ. ಹೋಕೋಸು ಮಾರಾಟವಾಗಿದ್ದರೆ ಸುಮಾರು 2.5 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು ಎಂದು ರೈತ ಈರಪ್ಪ ನೋವಿನಿಂದ ಹೇಳಿಕೊಳ್ಳುತ್ತಾರೆ.
ಹೊಲದಲ್ಲೇ ಉಳಿದ ಬೆಳೆ: ಲಾಕ್‌ಡೌನ್ ಮತ್ತು ಬೆಲೆ ಕುಸಿತದ ಕಾರಣ 2 ಎಕರೆ ಹೊಲದಲ್ಲಿ ಬೆಳೆದ ಟೊಮೆಟೋ ಮತ್ತು ಮೆಣಸಿನಕಾಯಿಯನ್ನು ಬೂದಿಹಾಳ ಗ್ರಾಮದ ರೈತ ವೀರೇಶ ಕುಲಕರ್ಣಿ ಹೊಲದಲ್ಲೇ ಬಿಟ್ಟಿದ್ದಾರೆ. ಇದನ್ನು ಬೆಳೆಯಲು ಹಾಕಿದ 3 ತಿಂಗಳ ಶ್ರಮ ಸಂಪೂರ್ಣ ವ್ಯರ್ಥವಾಗಿದೆ. ಬಾಡಿಗೆ ವಾಹನ ಮುಖಾಂತರ ಸಮೀಪದ ಹಳ್ಳಿಗಳಲ್ಲಿ ಮಾರಲು ಹೋದರೆ ಅದರ ಬಾಡಿಗೆ ನೀಡುವಷ್ಟು ಲಾಭವಾಗುತ್ತಿಲ್ಲ. 25 ಕೆಜಿ ತೂಕದ ಟ್ರೇಯನ್ನು ಕೇವಲ 50-60 ರೂಪಾಯಿಗೂ ಕೇಳುತ್ತಿಲ್ಲ. ಸಗಟು ವ್ಯಾಪಾರವಂತೂ ನಿಂತೇ ಹೋಗಿದೆ. ಹೀಗಾಗಿ ದುಡಿದ ಆಳುಗಳ ಪಗಾರ ಕೊಡಲು ಆಗುತ್ತಿಲ್ಲ. ಸರಕಾರ ಕೇವಲ ಭರವಸೆ ನೀಡುತ್ತಿದೆ ಹೊರತು ತುರ್ತು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅವರು ನೋವು ವ್ಯಕ್ತ ಪಡಿಸುತ್ತಾರೆ.
ಲಾಕ್‌ಡೌನ್ ಹೀಗೆ ಮುಂದುವರಿಯುತ್ತದೆಯೋ ಅಥವಾ ಕೊನೆಗೊಳ್ಳುತ್ತದೆಯೋ ಎಂಬುದು ಈಗಿನ ಸನ್ನಿವೇಶದಲ್ಲಿ ಹೇಳಲಾಗುತ್ತಿಲ್ಲ. ಆದ್ದರಿಂದ ತೀವ್ರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
-ಸಿ.ವೈ. ಮೆಣಸಿನಕಾಯಿ