Advertisement

ಬೆಳೆಹಾನಿ ವರದಿ ಶೀಘ್ರ ಸಲ್ಲಿಕೆ:ಡಿಸಿ

12:11 PM Oct 18, 2018 | |

ವಿಜಯಪುರ: ಮಳೆ ಇಲ್ಲದೇ ತೀವ್ರ ಬರದಿಂದ ತತ್ತರಿಸುತ್ತಿರುವ ಕಾರಣ ಸರ್ಕಾರ ವಿಜಯಪುರ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಿಸಿದೆ. ಹೀಗಾಗಿ ಈಗಾಗಲೇ ಬೆಳೆ ನಷ್ಟದ ಕುರಿತು ಮೂರು ಹಂತದಲ್ಲಿ ಸಮೀಕ್ಷೆ ನಡೆಸಿದ್ದು, ಶೀಘ್ರವೇ ಸರ್ಕಾರಕ್ಕೆ ನಷ್ಟದ ಪರಿಹಾರಕ್ಕೆ ವರದಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ತಿಳಿಸಿದ್ದಾರೆ.

Advertisement

ಬಸವನಬಾಗೇವಾಡಿ ತಾಲೂಕಿನ ಟಕ್ಕಳಕಿ ಗ್ರಾಮ ವಾಸ್ತವ್ಯದ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಈಗಾಗಲೇ ಜಿಲ್ಲೆಯ 5 ತಾಲೂಕುಗಳು ಬರ ಪೀಡಿತ ಪ್ರದೇಶವೆಂದು ಘೋಷಿಸಿದೆ. ಬರ ಪರಿಸ್ಥಿತಿ ಕುರಿತು ಬೆಳೆ ಸಮೀಕ್ಷೆ, ಬೆಳೆ ಹಾನಿ ಸಮೀಕ್ಷೆ ಹಾಗೂ ವಸ್ತುನಿಷ್ಠ ಬೆಳೆ ಹಾನಿ ಸಮೀಕ್ಷೆ ಹೀಗೆ ಮೂರು ಹಂತದಲ್ಲಿ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷಾವರದಿ ಸಿದ್ಧವಾಗುತ್ತಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದರು.

ಟಕ್ಕಳಕಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿಗಳ ನೇಮಕ, ಕೃಷಿ ಮಾರುಕಟ್ಟೆ, ವಾರದ ಸಂತೆ ಬಜಾರ ಸೇರಿದಂತೆ ಜಿಲ್ಲಾಡಳಿತದ ಬಳಿ ಲಭ್ಯವಿರುವ ಸಂಪನ್ಮೂಲಕ್ಕೆ ತಕ್ಕಂತೆ ನಿಯಮಗಳಂತೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಟಕ್ಕಳಕಿ ಗ್ರಾಮದಲ್ಲಿ ಈಗಾಗಲೇ ಆರ್‌ಸಿಸಿ ರಸ್ತೆ ನಿರ್ಮಿಸಲಾಗಿದೆ. ಗ್ರಾಮದಲ್ಲಿ ಹಳೆ ವಿದ್ಯುತ್‌ ಕಂಬ, ವಿದ್ಯುತ್‌ ಮಾರ್ಗ ಬದಲಾವಣೆಗೆ ಪರಿಶೀಲನೆ ನಡೆಸಿ ಪ್ರಸ್ತಾವನೆ ಸಲ್ಲಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ನೀರಿನ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಹನಿ ನೀರಾವರಿ ಯೋಜನೆ ಸೌಲಭ್ಯ ಪಡೆಯುವ ಮೂಲಕ ಮಿತ ನೀರಿನ ಬಳಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ಸರ್ಕಾರ ಸೂಕ್ತ ರಿಯಾಯ್ತಿ ಸಹಿತ ಪ್ರೋತ್ಸಾಹ ನೀಡುತ್ತಿದೆ. ಹೆಚ್ಚಿನ ಸೌಲಭ್ಯಕ್ಕಾಗಿ ಜಲ ಸಂಪನ್ಮೂಲ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ನೀರಾವರಿ ಯೋಜನೆ ನೈಜ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement

ಗ್ರಾಮದಲ್ಲಿ ಸ್ಮಶಾನ ಭೂಮಿ ಸಮಸ್ಯೆ ನೀಗಲು ಬರುವ ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳುತ್ತೇನೆ. ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಉರ್ದು ಪ್ರಾಥಮಿಕ ಶಾಲೆಗೆ ಅವಶ್ಯಕವಿರುವ ನಿವೇಶನ ಮಂಜೂರು ಮಾಡಲಾಗುತ್ತದೆ. ಗ್ರಾಮದಲ್ಲಿ ಗಾಂವಠಾಣಾ, ಗೈರಾಣಿ ಜಮೀನಿನ ಲಭ್ಯತೆ
ಆಧರಿಸಿ ಸರ್ಕಾರದ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳುವುದಾಗಿ ವಿವರಿಸಿದರು.
 
ಸ್ವತ್ಛ ಭಾರತ ಮಿಷನ್‌ ಯೋಜನೆ ನೈಜ ಅನುಷ್ಠಾನಕ್ಕಾಗಿ ಬಯಲು ಶೌಚಮುಕ್ತ ಗ್ರಾಮಕ್ಕಾಗಿ ಪ್ರತಿ ಕುಟುಂಬ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಗ್ರಾಮದಲ್ಲಿ ನೈರ್ಮಲ್ಯ ಕಾಯ್ದುಕೊಳ್ಳಬೇಕು. ನೀವು ಶೌಚಾಲಯ ನಿರ್ಮಿಸಿಕೊ ಳ್ಳಲು ಸರ್ಕಾರ ನೀಡುವ ಅನುದಾನದ ಸದ್ಬಳಕೆ ಮಾಡಿಕೊಳ್ಳಬೇಕು. ಜಿಪಂ ಸಿಇಒ ವಿಕಾಸ ಸುರಳಕರ ಮಾತನಾಡಿ, ನರೇಗಾ ಯೋಜನೆಯಲ್ಲಿ ಚೆಕ್‌ಡ್ಯಾಂ ನಿರ್ಮಾಣ, ಕೆರೆಗಳ ಹೂಳು ಎತ್ತಲು ಕ್ರಮ ಕೈಗೊಳ್ಳಲಾಗುತ್ತದೆ. ಕೃಷಿ ಹೊಂಡಗಳ ನಿರ್ಮಾಣದಂತ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಅಂತರ್ಜಲ ಹೆಚ್ಚಳ, ನೀರಿನ ಸದ್ಬಳಕೆಗೆ ಮುಂದಾಗಬೇಕು ಎಂಸು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next