ಹುಣಸೂರು: ನೆರೆ ಹಾವಳಿಯಿಂದ ತಾಲೂಕಿನಲ್ಲಿ ಮನೆ ಹಾನಿಗೀಡಾಗಿರುವ 631 ಸಂತ್ರಸ್ತ್ರ ಕುಟುಂಬಗಳಿಗೆ ಈವರೆಗೆ 2.35 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಬೆಳೆ ಪರಿಹಾರ ಶೀಘ್ರ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ಮಳೆ, ನೆರೆಯಿಂದ ಮನೆ ಕಳೆದುಕೊಂಡ ತಾಲೂಕಿನ ಕಾಮಗೌಡನಹಳ್ಳಿ, ನಿಲುವಾಗಿಲು ಹಾಗೂ ಹುಣಸೂರಿನ ದಾವಣಿ ಬೀದಿಯ ಫಲಾನುಭವಿಗಳಿಗೆ ಆಯಾ ಗ್ರಾಮಕ್ಕೆ ತೆರಳಿ ಮನೆ ನಿರ್ಮಿಸಿಕೊಳ್ಳಲು ಆದೇಶ ಪತ್ರ ವಿತರಿಸಿ, ನಗರಸಭೆಯಲ್ಲಿ ಮಳೆ ಪರಿಹಾರ ಸಂಬಂಧ ನಡೆದ ಸಭೆಯಲ್ಲಿ ಮಾಹಿತಿ ನೀಡಿದರು.
ಸಂಪೂರ್ಣ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ 5 ಲಕ್ಷ ರೂ. ಹಾಗೂ ಬಾಡಿಗೆ ರೂಪದ 50 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಒಂದು ಲಕ್ಷ ರೂ. ನೀಡಲಾಗಿದೆ. ಸಂಪೂರ್ಣ ಮನೆ ಕಳೆದುಕೊಂಡಿರುವ 40 ಕುಟುಂಬಕ್ಕೆ ತಲಾ ಒಂದು ಲಕ್ಷ ರೂ., ಭಾಗಶಃ ಹಾನಿಯಾಗಿರುವ 272 ಮನೆಗಳಿಗೆ ತಲಾ 25 ಸಾವಿರ ರೂ.ನಂತೆ 69 ಲಕ್ಷ ರೂ. ವಿತರಣೆಯಾಗಿದೆ. ಶೀಘ್ರದಲ್ಲೇ ತಲಾ 75 ಸಾವಿರ ರೂ. ಅವರ ಖಾತೆಗಳಿಗೆ ಜಮೆಯಾಗಲಿದೆ. ಇನ್ನುಳಿದಂತೆ 335 ಕುಟುಂಬಗಳಿಗೆ ತಲಾ 25 ಸಾವಿರದಂತೆ 53.75 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಳೆಹಾನಿಗೆ 2,50 ಕೋಟಿ ಪರಿಹಾರ: ತಾಲೂಕಿನಲ್ಲಿ 1433 ರೈತರ 626 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಕೃಷಿ ಬೆಳೆ ನಷ್ಟವಾಗಿದೆ. 1,05 ಕೋಟಿರೂ ಹಾಗೂ 599,64 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ತೋಟಗಾರಿಕೆ ಬೆಳೆಗಳು ಹಾಳಾಗಿವೆ. 1,45 ಕೋಟಿರೂ ಬೆಳೆ ಪರಿಹಾರ ರೈತರಿಗೆ ವಿತರಿಸಬೇಕಿದೆ. ಈಗಾಗಲೇ ಸಮಗ್ರ ವಿವರ ಪರಿಹಾರ ತತ್ರಾಂಶದಲ್ಲಿ ಅಳವಡಿಸಲಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ದರಕ್ಕೆ ಪ್ರತಿ ಹೆಕ್ಟೇರ್‌ಗೆ ರಾಜ್ಯ ಸರ್ಕಾರ 10 ಸಾವಿರ ರೂ. ಹೆಚ್ಚುವರಿಯಾಗಿ ಪರಿಹಾರ ನೀಡಲಾಗುತ್ತಿದೆ. ಶೀಘ್ರವೇ ರೈತರ ಖಾತೆಗೆ ಜಮೆಯಾಗಲಿದೆ ಎಂದರು.
ಸ್ವಾಗತ ಕಿಟ್‌ಗೆ 5 ಲಕ್ಷ ರೂ. ವಿತರಣೆ: ತಾಲೂಕಿನಾದ್ಯಂತ ನೆರೆ ಹಾವಳಿ ಸಂತ್ರಸ್ತ್ರ ಕುಟುಂಬಗಳಿಗೆ ಅವಶ್ಯವಿರುವ ದಿನಬಳಕೆ ವಸ್ತುಗಳು ಸೇರಿದಂತೆ 200 ಆದಿವಾಸಿ ಕುಟುಂಬಗಳಿಗೆ 200 ಟಾರ್ಪಾಲ್ ಸೇರಿದಂತೆ ಸ್ವಾಗತ ಕಿಟ್ ವಿತರಣೆಗೆ 5,02,535 ರೂ. ಖರ್ಚು ಮಾಡಲಾಗಿದೆ. ತಾಲೂಕಿನಲ್ಲಿ ಈವರೆಗೆ ಮಳೆಯಿಂದ ಮೂವರು ಮಾನವ ಪ್ರಾಣಹಾನಿಯಾಗಿದೆ. ತಲಾ 5 ಲಕ್ಷ ರೂ. ನಂತೆ 15 ಲಕ್ಷ ಹಾಗೂ ಇಬ್ಬರು ಗಾಯಾಳುಗಳಿಗೆ 71,800 ರೂ. ಪರಿಹಾರ ವಿತರಿಸಲಾಗಿದೆ ಎಂದು ತಹಶೀಲ್ದಾರ್ ಬಸವರಾಜ್ ಮಾಹಿತಿ ನೀಡಿದರು.
ಸಂಸದ ಪ್ರತಾಪ್‌ಸಿಂಹ, ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಸದಸ್ಯ ಕಟ್ಟನಾಯಕ, ಉಪ ವಿಭಾಗಾಧಿಕಾರಿ ಬಿ.ಎನ್.ವೀಣಾ, ತಾಪಂ ಅಧ್ಯಕ್ಷೆ ಪದ್ಮಮ್ಮ, ಡಿವೈಎಸ್‌ಪಿ ಸುಂದರರಾಜ್, ತಹಶೀಲ್ದಾರ್ ಬಸವರಾಜ್, ಇ.ಒ. ಗಿರೀಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ತಹಸೀಲ್ದಾರ್‌ರನ್ನು ಪ್ರಶಂಸಿಸಿದ ಸಚಿವ: ನೆರೆ ಹಾವಳಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ, ಸಕಾಲದಲ್ಲಿ ಪರಿಹಾರ ವಿತರಣೆಗೆ ಕ್ರಮ ಕೈಗೊಂಡಿದ್ದೀಯಾ. ಸಾರ್ವಜನಿಕರಿಂದ ಒಳ್ಳೆ ಮಾತುಗಳು ಕೇಳಿ ಬಂದಿವೆ. ಮುಂದೆಯೂ ಉತ್ತಮವಾಗಿ ಕೆಲಸ ಮಾಡಬೇಕು ಎಂದು ತಹಶೀಲ್ದಾರ್ ಬಸವರಾಜ್‌ರನ್ನು ಸಚಿವ ಸೋಮಣ್ಣ ಸಭೆಯಲ್ಲಿ ಪ್ರಶಂಸಿಸಿದರು.