ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳಲ್ಲಿನ ಬೆಳೆ ನಷ್ಟದ ಕುರಿತು ಸಮೀಕ್ಷೆ ಮಾಡಿರುವ ಜಿಲ್ಲಾಡಳಿತ ವರದಿ ತಯಾರಿಸಿದೆ. ಸುಮಾರು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 8 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ರೈತರು 120 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಶೀಘ್ರವಾಗಿ ರೈತರಿಗೆ ಪರಿಹಾರ ಧನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ಹೇಳಿದರು. 1500 ಮನೆಗಳು ಹಾನಿಯಾಗಿವೆ. ಮನೆಗಳ ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುತ್ತದೆ. ಈಗಾಗಲೇ 5 ಕೋಟಿ ರೂ.ಬೆಳೆ ನಷ್ಟಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದರು.
ಗ್ರಾಪಂನ್ನು ಪಪಂ ಮಾಡಲು ಬೇಡಿಕೆ: ರಾಜ್ಯದಲ್ಲಿನ ಹಲವಾರು ಗ್ರಾಪಂಗಳನ್ನು ಪಪಂ ಮೇಲ್ದರ್ಜೆಗೆ ಏರಿಸಲು ಬೇಡಿಕೆ ಬಂದಿದೆ. ಸಂಖ್ಯೆ ಆಧಾರಿತವಾಗಿ 28 ಪಂಚಾಯಿತಿಗಳನ್ನು ಪಪಂ ಮಾಡಲಾಗಿದೆ. ಉಳಿದ 15 ಪಂಚಾಯಿತಿಗಳನ್ನು ಮಾಡಬೇಕಾದರೆ ಇತ್ತೀಚೆಗೆ ನಡೆದಿರುವ ಜನಸಂಖ್ಯೆ ಗಣತಿ ಆಧಾರಿಸಿ ಮುಂದಿನ ದಿನಗಳಲ್ಲಿಪಪಂ ಮಾಡಿ ಅಭಿವೃದ್ಧಿಗೆ ಸಹಕಾರ ನೀಡುವುದು ನಮ್ಮ ಉದ್ದೇಶ ಎಂದರು.
ಕಾನೂನು ಕ್ರಮ ವಿಶ್ವಾಸ: ಬೆಳಗಾವಿಯಲ್ಲಿ ಕನ್ನಡ ಬಾವುಟ ಸುಟ್ಟು ಹಾಕಿರುವ ಕಿಡಿಗೇಡಿಗಳನ್ನು ಕ್ಷಮಿಸುವುದಕ್ಕೆ ಸಾಧ್ಯವಿಲ್ಲ. ನಮ್ಮ ರಾಜ್ಯದ ಗೃಹಸಚಿವ ಬೆಳಗಾವಿಯಲ್ಲಿಯೇ ಇದ್ದು, ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಕಿಡಿಗೇಡಿಗಳ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಹಣದ ಹೊಳೆ ಹರಿಸಿದ್ದಾರೆ: ಪರಿಷತ್ ಚುನಾವಣೆಯಲ್ಲಿಮತದಾರರು ಸ್ಥಳೀಯ ಸಂಸ್ಥೆಗಳಿಂದ ಆರಿಸಿ ಬಂದಿದ್ದು, ಅಲ್ಲಿ ಅವರು ಯಾವುದೇ ಪಕ್ಷದ ಚಿಹ್ನೆಯ ಮೇಲೆ ಆಯ್ಕೆಯಾಗಿಲ್ಲ. ಹಾಗಾಗಿ ಈ ಚುನಾವಣೆಯಲ್ಲಿ ಯಾರು ಯಾರಿಗೆ ಮತ ನೀಡುತ್ತಾರೆಂಬುದನ್ನು ಹೇಳಲು ಸಾಧ್ಯವಿಲ್ಲ. 8 ತಾಲೂಕುಗಳ ಪೈಕಿ 5 ತಾಲೂಕುಗಳಲ್ಲಿ ಜೆಡಿಎಸ್ ಶಾಸಕರು, 3 ತಾಲೂಕುಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ನಮ್ಮ ಪಕ್ಷದ ಶಾಸಕರಿಲ್ಲ. ನಮ್ಮ ಪಕ್ಷ ಬೆಂಬಲಿತ ಸದಸ್ಯರು 400 ಕ್ಕೂ ಹೆಚ್ಚು ಮಂದಿ ಇದ್ದರೂ ಮತ ನೀಡಿಲ್ಲ. ಇದಕ್ಕೆ ಮೂಲ ಕಾರಣ ಚುನಾವಣೆಯಲ್ಲಿ ವಿಪಕ್ಷದವರು ಹಣದ ಹೊಳೆ ಹರಿಸಿದ್ದಾರೆ. ಸದಸ್ಯರು ಆಸೆ ಆಮಿಷಗಳಿಗೆ ಬಲಿಯಾಗಿದ್ದಾರೆ ಎಂದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರೇವಣಪ್ಪ.ಕೆ, ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ಮಂಜುನಾಥ್ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ವಸಂತ್ ಕುಮಾರ್, ಜಿಲ್ಲಾ ಕೃಷಿ ಉಪನಿರ್ದೇಶಕಿ ವಿನುತಾ, ತಾಲೂಕು ಸಹಾಯಕ ನಿರ್ದೇಶಕಿ ವೀಣಾ, ತೋಟಗಾರಿಕೆ ತಾಲೂಕು ಸಹಾಯಕ ನಿರ್ದೇಶಕಿ ಮಂಜುಳಾ, ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎಚ್.ಎಂ.ರವಿಕುಮಾರ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಇದ್ದರು.