ಕೊಪ್ಪಳ: ಕೇಂದ್ರ ಸರ್ಕಾರವು ರೈತರ ಬೆಳೆ ಭದ್ರತೆಗೆ ಜಾರಿ ತಂದಿರುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ರೈತರಿಗೆ ಒಂದು ರೀತಿಯ ವರದಾನವಾಗುತ್ತದೆ ಎನ್ನುವ ಮಾತು ಕೇಳಿ ಬಂದರೂ ರೈತರಿಂತ ವಿಮಾ ಕಂಪನಿಗೇ ಹೆಚ್ಚು ಲಾಭವಾಗಿರುವುದು ಜಿಲ್ಲೆಗೆ ಬಂದ ಬೆಳೆ ವಿಮೆ ಪರಿಹಾರ ಮೊತ್ತದ ಅಂಕಿ ಅಂಶಗಳಿಂದ ಗೋಚರವಾಗುತ್ತಿದೆ.
ಹೌದು. ಕೇಂದ್ರದಲ್ಲಿ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಕ್ಷಣ ರೈತರ ಬೆಳೆಗೆ ಭದ್ರತೆ ಒದಗಿಸಬೇಕೆಂಬ ಸದುದ್ದೇಶದಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೊಳಿಸಿ ವಿಮಾ ಕಂಪನಿಗಳ ಮೂಲಕ ವಿಮೆ ಕೊಡಿಸಲು ವಿಮಾ ಯೋಜನೆ ಜಾರಿಗೊಳಿಸಿತು. ಈ ಯೋಜನೆ ಆರಂಭದಲ್ಲಿ ರೈತರಿಗೆ ಹೆಚ್ಚು ವರದಾನವಾಗುತ್ತದೆ ಎಂದರೂ ಕಂಪನಿಗಳಿಗೆ ಕೋಟಿ ಕೋಟಿ ಲಾಭವಾಗಿರುವುದು ಎಲ್ಲರ ಗಮನ ಸೆಳೆದಿದೆ.
ಕೊಪ್ಪಳ ಜಿಲ್ಲೆಯಲ್ಲಿನ ಅಂಕಿ ಅಂಶಗಳೇ ಇದನ್ನು ಸಾರಿ ಸಾರಿ ಹೇಳುತ್ತಿವೆ. ಜಿಲ್ಲಾಡಳಿತ ಆರಂಭದಲ್ಲಿ ಮುಂಗಾರು ಹಂಗಾಮು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆಗಾಗಿ ರೈತರ ಬೆಳೆವಿಮೆ ಪಾವತಿಸಲು ತುಂಬಾ ಆಸಕ್ತಿ ವಹಿಸಿ ವಿಮಾ ನೋಂದಣಿ ಮಾಡಿಸುವ ಕೆಲಸವನ್ನು ಮಾಡಿಸುತ್ತ ಬಂದಿದೆ. ಈ ವಿಮೆ ಯೋಜನೆಯಲ್ಲಿ ರೈತರ ಪಾಲು, ರಾಜ್ಯ ಸರ್ಕಾರದ ಪಾಲು, ಕೇಂದ್ರ ಸರ್ಕಾರದ ವಿಮಾ ಮೊತ್ತದ ಪಾಲನ್ನು ವಿಮಾ ಕಂಪನಿಗೆ ಪಾವತಿ ಮಾಡುತ್ತದೆ.
ಒಂದು ವೇಳೆ ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿದಲ್ಲಿ ರೈತರ ಬೆಳೆ ಹಾನಿಗೆ ಪರಿಹಾರವಾಗಿ ವಿಮಾ ಕಂಪನಿ ರೈತನ ವಿಮೆ ಪಾವತಿ ಮಾಡುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ 2016-17ರಿಂದ 2022-23ನೇ ಸಾಲಿನ ವರೆಗೂ ಕಳೆದ ಏಳು ವರ್ಷದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮು ಸೇರಿದಂತೆ ರೈತರ ವಂತಿಕೆ 68 ಕೋಟಿ ರೂ ಆಗಿದ್ದರೆ, ರೈತರ ಪರ ರಾಜ್ಯ ಸರ್ಕಾರ 339 ಕೋಟಿ ರೂ., ಕೇಂದ್ರ ಸರ್ಕಾರ 337 ಕೋಟಿ ರೂ. ವಿಮಾ ಮೊತ್ತವನ್ನು ಕಳೆದ 7 ವರ್ಷದಲ್ಲಿ ವಿಮಾ ಕಂಪನಿಗೆ ಪಾವತಿ ಮಾಡಿದೆ.
ರೈತರ ವಂತಿಗೆ, ರಾಜ್ಯ ಹಾಗೂ ಕೇಂದ್ರದ ವಂತಿಕೆ ಸೇರಿ ಒಟ್ಟು 745 ಕೋಟಿ ರೂ. ಹಣ ವಿಮಾ ಕಂಪನಿಗೆ ಇಲ್ಲಿಯವರೆಗೂ ಪಾವತಿಯಾಗಿದ್ದರೆ, ವಿಮಾ ಕಂಪನಿ ರೈತರ ಬೆಳೆ ಹಾನಿ ಪರಿಹಾರವಾಗಿ ಇಲ್ಲಿಯವರೆಗೂ 527 ಕೋಟಿ ರೂ. ಪರಿಹಾರ ಮೊತ್ತ ನೀಡಿದೆ. ಅಂದರೆ 07 ವರ್ಷದಲ್ಲಿ ರೈತರಿಗಿಂತ ವಿಮಾ ಕಂಪನಿಗೆ 218 ಕೋಟಿ ರೂ. ಉಳಿಕೆಯಾಗಿದೆ.
ಕೋಟಿ ಕೋಟಿ ರೂ. ಕಂಪನಿ ಪಾಲು :
ಸರ್ಕಾರವೇನೋ ವಿಮಾ ಕಂಪನಿಗಳಿಗೆ ರೈತರ ಬೆಳೆಗೆ ಭದ್ರತೆಯಾಗಿ ಕೋಟಿ ಕೋಟಿ ಅನುದಾನವನ್ನು ಪಾವತಿಸುತ್ತಿದೆಯೇನೋ ಸರಿ. ಆದರೆ ಇಲ್ಲಿ ರೈತರಿಗಿಂತ ವಿಮೆ ಕಂಪನಿಗೆ ಹೆಚ್ಚೆಚ್ಚು ಲಾಭ ಪಡೆಯುತ್ತಿರುವುದು ಹಲವು ರೀತಿಯಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.ಇದು ಕೇವಲ ಕೊಪ್ಪಳ ಜಿಲ್ಲೆಯದಷ್ಟೇ ವಿಮೆಯ ಲೆಕ್ಕಾಚಾರ. ರಾಜ್ಯಾದ್ಯಂತ ಜಿಲ್ಲೆಗಳ ಅಂಕಿ ಅಂಶಗಳ
ಲೆಕ್ಕಾಚಾರವೇ ಬೇರೆ ಇದೆ.
ದತ್ತು ಕಮ್ಮಾರ