Advertisement
ಅತಿವೃಷ್ಟಿ ಇಲ್ಲವೆ ಬರದಿಂದ ಬೆಳೆ ಹಾನಿ ಸಂಭವಿಸಿದರೆ, ಸಂಕಷ್ಟ ಕಾಲಕ್ಕೆ ರೈತರ ನೆರವಿಗೆ ಇರಲಿ ಎಂಬ ಉದ್ದೇಶದೊಂದಿಗೆ ಜಾರಿಗೆ ಬಂದಿದ್ದ ಬೆಳೆ ವಿಮೆ ಯೋಜನೆ ಇಂದಿನ ಸ್ಥಿತಿ ಗಮನಿಸಿದರೆ, ಇದು ವಿಮಾ ಕಂಪೆನಿಗಳ ಲಾಭಕ್ಕೆ ಇದೆಯೇ ವಿನಃ ನಮ್ಮ ನೆರವಿಗೆ ಅಲ್ಲ ಅನ್ನಿಸುತ್ತದೆ ಎಂಬುದು ಹಲವು ರೈತರ ಅಸಮಾಧಾನ. 2019ರಲ್ಲಿ ಪ್ರವಾಹದಿಂದ ರಾಜ್ಯದ 22 ಜಿಲ್ಲೆಗಳು ಅಕ್ಷರಶಃ ನಲುಗಿದ್ದವಲ್ಲದೆ, ಸುಮಾರು 6.72ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 13,717 ಕೋಟಿ ರೂ. ಬೆಳೆ ನಷ್ಟ ಹಾಗೂ 1.09ಲಕ್ಷ ಹೆಕ್ಟೇರ್ ಪ್ರದೇಶದ ಅಂದಾಜು 926 ಕೋಟಿ ರೂ. ಉತ್ಪನ್ನ ಹಾನಿ ಗೀಡಾಗಿತ್ತು. ಇದರಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳ ಪಾಲು ಅಧಿಕವಾಗಿತ್ತು.
Related Articles
Advertisement
ಹಾವೇರಿ ಜಿಲ್ಲೆಯ 75,704 ರೈತರಿಗೆ 178.88ಕೋಟಿ ರೂ. ಪರಿಹಾರ ಬಂದಿದ್ದು ಅತ್ಯಧಿಕವಾಗಿದೆ. ಕೊಪ್ಪಳ ಜಿಲ್ಲೆಯ 2,127 ರೈತರು 2.53ಕೋಟಿ ರೂ. ಪರಿಹಾರ ಪಡೆದಿದ್ದಾರೆ. ಗದಗ ಜಿಲ್ಲೆಯ 1,836 ರೈತರು, 3.47 ಕೋಟಿ ರೂ. ಪರಿಹಾರ ಪಡೆದಿದ್ದರೆ, ಬಳ್ಳಾರಿ ಜಿಲ್ಲೆಯ 3,130 ರೈತರಿಗೆ 1.73ಕೋಟಿ ರೂ. ಪರಿಹಾರ ದೊರೆತಿದೆ. ಉತ್ತರ ಕನ್ನಡ ಜಿಲ್ಲೆಯ 25 ರೈತರಿಗೆ 21 ಸಾವಿರ ರೂ. ಪರಿಹಾರ ಬಂದಿದೆ.
ಬಾಗಲಕೋಟೆ ಜಿಲ್ಲೆಯ 1,266 ರೈತರು 84.33 ಲಕ್ಷ ರೂ., ಬೆಳಗಾವಿ ಜಿಲ್ಲೆಯ 2,525 ರೈತರು 3.76 ಕೋಟಿ ರೂ., ಕಲಬುರಗಿಯ 392 ರೈತರು 62.84 ಲಕ್ಷ ರೂ., ರಾಯಚೂರು ಜಿಲ್ಲೆಯ 5,610 ರೈತರು 8.42ಕೋಟಿ ರೂ., ಬೀದರ ಜಿಲ್ಲೆಯ 14,605 ರೈತರು 7.34 ಕೋಟಿ ರೂ. ಪರಿಹಾರ ಪಡೆದಿದ್ದಾರೆ. ನಮ್ಮ ಜಿಲ್ಲೆಗಳಲ್ಲಿ ಬೆಳೆ ಹಾನಿಗೀಡಾದರೂ ನಯಾ ಪೈಸೆ ಪರಿಹಾರ ನೀಡಿಲ್ಲ ಯಾಕೆ ಎಂಬುದು ಪರಿಹಾರ ಬಾರದ ಮೂರು ಜಿಲ್ಲೆಗಳ ರೈತರ ಪ್ರಶ್ನೆಯಾಗಿದೆ. 2020ರ ಮುಂಗಾರು ಹಂಗಾಮಿಗೆ ಅತಿ ವೃಷ್ಟಿಯಿಂದ ಬೆಳೆಹಾನಿ ಕುರಿತು ರೈತರು ಸಂಕಷ್ಟ ಪಡುತ್ತಿದ್ದಾರೆ. ಜತೆಗೆ ಕೇಂದ್ರ ತಂಡ ಬಂದು ವೀಕ್ಷಣೆ ಮಾಡಿಯಾಗಿದೆ. ಆದರೆ, 2019-20ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ನಷ್ಟ ಕುರಿತು ಆಯಾ ಜಿಲ್ಲಾಡಳಿತಗಳಿಂದ ವಿವರ ಸಲ್ಲಿಕೆಯಾಗಿ ದೆಯಾದರೂ, ಪರಿಹಾರ ಕುರಿತು ಇನ್ನು ಅಂತಿಮಗೊಳಿಸಲಾಗಿಲ್ಲ ಎಂಬುದನ್ನು ಕೃಷಿ ಇಲಾಖೆ ಮೂಲಗಳು ಸ್ಪಷ್ಟಪಡಿಸುತ್ತಿವೆ.
2019ರ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾಗಿದೆ ಎಂದು ಕೇಂದ್ರ-ರಾಜ್ಯ ಸರ್ಕಾರಗಳೇ ಒಪ್ಪಿಕೊಂಡಿವೆ. ಆದರೆ, ಬೆಳೆವಿಮೆ ಕಂಪೆನಿಗಳು ಮಾತ್ರ ನೂರಾರು ಕೋಟಿ ರೂ. ವಿಮಾ ಕಂತು ಹಣ ಪಡೆದು, ನಯಾ ಪೈಸೆ ಪರಿಹಾರ ನೀಡುವುದಿಲ್ಲ ಎಂದಾದರೆ ವಿಮೆ ಯಾಕೆ ಬೇಕು. ಬೆಳೆವಿಮೆ ಎಂಬುದು ಕಂಪೆನಿಗಳ ಉದ್ಧಾರಕ್ಕೋ, ಕಷ್ಟಕಾಲದಲ್ಲಿ ರೈತರ ನೆರವಿಗೆ ಬರುವುದಕ್ಕೋ ಎಂಬುದು ಸ್ಪಷ್ಟವಾಗಬೇಕು. -ಸುಭಾಸ ಬೂದಿಹಾಳ, ಕೋಳಿವಾಡ ರೈತ
-ಅಮರೇಗೌಡ ಗೋನವಾರ