ದಾವಣಗೆರೆ: ಕೋವಿಡ್ ನಿಯಂತ್ರಣಕ್ಕಾಗಿ ವಿಧಿಸಿದ ಲಾಕ್‌ಡೌನ್‌ನಿಂದ ಬೆಳೆದ ಬೆಳೆಯನ್ನು ಯೋಗ್ಯ ದರಕ್ಕೆ ಮಾರಾಟ ಮಾಡಲಾಗದೆ ರೈತರು ನಷ್ಟ ಅನುಭವಿಸಿದ್ದರು. ಪ್ರಸಕ್ತ ಮುಂಗಾರಿನಲ್ಲಿ ಸುರಿದ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಕಂಗೆಟ್ಟಿದ್ದ ರೈತರಿಗೆ ಈಗ ಬೆಳೆವಿಮೆ ಪರಿಹಾರ ದೊರಕಿದ್ದು ರೈತರು ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ವರ್ಷದ ಅಂದರೆ 2019-20ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬರಬೇಕಿದ್ದ ಬೆಳೆ ವಿಮೆಈವರೆಗೂ ಬಂದಿರಲಿಲ್ಲ. ಬೆಳೆ ವಿಮೆ ಪರಿಹಾರಕ್ಕಾಗಿ ಆಗ್ರಹಿಸಿ ರೈತರು ನಿರಂತರ ಮನವಿ, ಹೋರಾಟ ನಡೆಸುತ್ತಲೇ ಬಂದಿದ್ದರು. ವಿಮಾ ಕಂಪನಿ ಈಗ ಕಳೆದ ವರ್ಷದ ಮುಂಗಾರು ಹಂಗಾಮಿನ ಬೆಳೆ ಹಾನಿಗೆ ಸಂಬಂಧಿಸಿ ಪರಿಹಾರ ಹಣವನ್ನು ರೈತರ ಖಾತೆಗೆಜಮಾ ಮಾಡುತ್ತಿದೆ. ಆರ್ಥಿಕ ಸಂಕಷ್ಟ ಕಾಲದಲ್ಲಿ ಬಂದಿರುವ ವಿಮಾ ಪರಿಹಾರ ರೈತರ ಪಾಲಿಗೆ ಆಸರೆಯಾಗಿದೆ.
2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 37951 ರೈತರು ವಿಮೆ ಮಾಡಿಸಿದ್ದು 385.98ಲಕ್ಷ ರೂ. ವಿಮಾ ಕಂತು ಕಟ್ಟಿದ್ದರು. ನ. 24ವರೆಗೆ ಜಿಲ್ಲೆಯ 9774ರೈತರ ಖಾತೆಗೆ 18.96ಕೋಟಿ ರೂ.ಗಳ ವಿಮಾ ಪರಿಹಾರ ಜಮೆ ಆಗಿದೆ. ಜಿಲ್ಲೆಯ ಜಗಳೂರು ತಾಲೂಕಿನ ಅತಿ ಹೆಚ್ಚು ರೈತರಿಗೆ ಪರಿಹಾರ ದೊರಕಿದ್ದರೆ ದಾವಣಗೆರೆ ತಾಲೂಕಿನ ಕಡಿಮೆ ಅಂದರೆ ಕೇವಲ 157 ರೈತರ ಖಾತೆಗೆ ಪರಿಹಾರ ಜಮಾ ಅಗಿದೆ. ಪರಿಹಾರದ ವಿವರ: ಜಗಳೂರು ತಾಲೂಕಿನ 5609 ರೈತರ ಖಾತೆಗೆ 14.70ಕೋಟಿ ರೂ. ಜಮೆ ಆಗಿದೆ. ಹರಿಹರ ತಾಲೂಕಿನ 2384 ರೈತರಿಗೆ 2.65 ಕೋಟಿ ರೂ. ಪರಿಹಾರ ಜಮಾ ಆಗಿದೆ. ಹೊನ್ನಾಳಿ ತಾಲೂಕಿನ 1145 ರೈತರಿಗೆ 55.17 ಲಕ್ಷ ರೂ. ಪರಿಹಾರ ನೀಡಲಾಗಿದೆ. ಚನ್ನಗಿರಿ ತಾಲೂಕಿನ 479 ರೈತರಿಗೆ 53.70 ಕೋಟಿ ರೂ. ಪರಿಹಾರ ಸಿಕ್ಕಿದೆ. ದಾವಣಗೆರೆ ತಾಲೂಕಿನ 157 ರೈತರ ಖಾತೆಗೆ 51.85 ಕೋಟಿ ರೂ. ಜಮಾ ಆಗಿದೆ.
ಇದೇ ರೀತಿ ತೋಟಗಾರಿಕೆ ಬೆಳೆಗಳಲ್ಲಿ 6563 ರೈತರು ಬೆಳೆ ವಿಮೆ ಮಾಡಿಸಿದ್ದು ಒಟ್ಟು 346.93 ಲಕ್ಷ ರೂ. ಪ್ರೀಮಿಯಂ ಮೊತ್ತ ಪಾವತಿಸಿದ್ದರು. 1257.42 ಲಕ್ಷ ರೂ. ಬೆಳೆ ವಿಮೆ ರೈತರ ಖಾತೆಗೆ ಜಮಾ ಆಗಿದೆ.ಒಟ್ಟಾರೆ ಬೆಳೆ ವಿಮೆ ಪರಿಹಾರ ಹಣವಿಳಂಬವಾಗಿಯಾದರೂ ಬಂದಿದೆ. ಸಂಕಷ್ಟ ಕಾಲದಲ್ಲಿ ರೈತರ ಸಹಾಯಕ್ಕೆ ಬಂದಿರುವುದು ಸಮಾಧಾನಕರ ಸಂಗತಿ.
2019-20ನೇ ಸಾಲಿನ ಕರ್ನಾಟಕ ರೈತಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈವರೆಗೆ ಜಿಲ್ಲೆಯ 9774 ರೈತರಿಗೆ 18.96 ಕೋಟಿ ರೂ. ವಿಮಾ ಪರಿಹಾರಹಣ ರೈತರ ಖಾತೆಗೆ ಜಮಾ ಆಗಿದೆ. ಬಹುತೇಕರೈತರಿಗೆ ಪರಿಹಾರ ಹಣ ದೊರೆತಂತಾಗಿದೆ.
–ಶ್ರೀನಿವಾಸ್ ಚಿಂತಾಲ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ
ಅಧಿಕಾರಿಗಳು ಬೆಳೆವಿಮೆ ಮಾಡಿಸಲು ತೋರಿಸುವ ಆಸಕ್ತಿಯನ್ನು ಸಕಾಲಕ್ಕೆ ರೈತರಿಗೆ ಕೊಡಿಸಲು ತೋರುವುದಿಲ್ಲ. ಹೀಗಾಗಿ ಬೆಳೆ ವಿಮೆ ಪರಿಹಾರ ಸಿಗುವುದು ವಿಳಂಬವಾಗುತ್ತಿದೆ. ಕಳೆದ ವರ್ಷದ ಮುಂಗಾರು ಹಂಗಾಮಿನ ವಿಮೆ ಪರಿಹಾರ ತಡವಾಗಿಯಾದರೂ ರೈತರಿಗೆ ಸಿಕ್ಕಿದೆ ಎಂಬುದೇ ಸಮಾಧಾನಕರ ಸಂಗತಿ.
–ಹುಲ್ಮನಿ ಠಾಕೂರ, ರೈತ ಮುಖಂಡ
–ಎಚ್.ಕೆ. ನಟರಾಜ