Advertisement

ಬೆಳೆ-ಮನೆ ಹಾನಿ ಪರಿಹಾರ: ತ್ವರಿತ ಕ್ರಮ ವಹಿಸಿ

04:50 PM Oct 15, 2022 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷಿ, ತೋಟಗಾರಿಕೆ ಬೆಳೆ ಸೇರಿ ಮನೆಗಳಿಗೆ ಹಾನಿಯಾಗಿದೆ. ಈ ಕುರಿತು ಅಧಿಕಾರಿಗಳು ತ್ವರಿತಗತಿಯಲ್ಲಿ ಕ್ರಮ ವಹಿಸಿ ರೈತರಿಗೆ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ದಿಶಾ ಸಮಿತಿ ಅಧ್ಯಕ್ಷ ಹಾಗೂ ಸಂಸದ ಸಂಗಣ್ಣ ಕರಡಿ ಹೇಳಿದರು.

Advertisement

ಜಿಪಂ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ 2022-23ನೇ ಸಾಲಿನ 1ನೇ ಮತ್ತು 2ನೇ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನಿರಂತರ ಸುರಿದ ಮಳೆಯಿಂದ ಹಾನಿಗೊಳಗಾದ ಕೃಷಿ-ತೋಟಗಾರಿಕೆ ಬೆಳೆಗಳಿಗೆ ಸರ್ಕಾರದಿಂದ ಪರಿಹಾರ ಕ್ರಮ ಒದಗಿಸಿ. ಬೆಳೆ ಹಾನಿ ಮಹಿತಿ ತಂತ್ರಾಂಶದಲ್ಲಿ ನಮೂದಿಸಿ, ರೈತರಿಗೆ ತ್ವರಿತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಜೆಜೆಎಂ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಸಾರ್ವಜನಿಕರಿಂದ ದೂರುಗಳು ಬರದಂತೆ ನೋಡಿಕೊಂಡು ಸಾರ್ವಜನಿಕರಿಗೆ ಯೋಜನೆ ಲಾಭ ತಲುಪಿಸಬೇಕು ಎಂದರು.

ಜಿಲ್ಲೆಯಲ್ಲಿ ಭಾರೀ ವಾಹನ ಸಂಚಾರದ ಮೇಲೆ ಸಾರಿ ಇಲಾಖೆ ಅಧಿಕಾರಿಗಳು ನಿಗಾವಹಿಸಬೇಕು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯ ರಸ್ತೆಗಳು ಹೆಚ್ಚಾಗಿ ಸಣ್ಣ ಗಾತ್ರದಲ್ಲಿದ್ದು, ಭಾರೀ ವಾಹನಗಳ ಹೆಚ್ಚಿನ ಓಡಾಟದಿಂದ ರಸ್ತೆಗಳು ಹಾಳಾಗುತ್ತವೆ. ನಿಗದಿತ ರಸ್ತೆಗಳಲ್ಲಿ ಮಾತ್ರ ಭಾರೀ ವಾಹನ ಸಂಚರಿಸುವ ವ್ಯವಸ್ಥೆಯಾಗಬೇಕು. ಆರ್‌ಟಿಒ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗ್ರಾಮೀಣ ರಸ್ತೆಗಳ ಕಾಳಜಿ ವಹಿಸಿ ತ್ವರಿತ ಕ್ರಮ ವಹಿಸಬೇಕು ಎಂದರು.

ಜಿಲ್ಲೆಗೊಂದು ಸರ್ಕಾರಿ ಗೋಶಾಲೆ ಯೋಜನೆಯಡಿ ರಾಜ್ಯ ಸರ್ಕಾರದಿಂದ ಕೊಪ್ಪಳ ಜಿಲ್ಲೆಗೂ ಒಂದು ಗೋಶಾಲೆ ಮಂಜೂರಾಗಿದೆ. ಗೋಶಾಲೆ ತ್ವರಿತವಾಗಿ ಉದ್ಘಾಟಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೇ ಕೊಪ್ಪಳ ನಗರ ಸೇರಿದಂತೆ ವಿವಿಧ ನಗರ ಪ್ರದೇಶಗಳಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಿ, ಜನರ ಓಡಾಟ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ಪಶು ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆ ಸೇರಿ ಬಿಡಾಡಿ ದನಗಳನ್ನು ಗೋಶಾಲೆಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

Advertisement

ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ| ಎಚ್‌. ನಾಗರಾಜ ಮಾತನಾಡಿ, ಚರ್ಮಗಂಟು ರೋಗ ಸಾಂಕ್ರಾಮಿಕವಾಗಿದ್ದು, “ಕ್ಯಾಪ್ರಿ ಫಾಕ್ಸ್‌’ ಎಂಬ ವೈರಾಣುವಿನಿಂದ ದನ-ಎಮ್ಮೆಗಳಲ್ಲಿ ಕಂಡುಬರುತ್ತದೆ. ಈ ರೋಗ ಕಚ್ಚುವ ಕೀಟಗಳಾದ ಸೊಳ್ಳೆ, ಉಣ್ಣೆ, ನೊಣ ಇತ್ಯಾದಿಗಳಿಂದ ತೀವ್ರವಾಗಿ ಹರಡುತ್ತದೆ. ರಾಜ್ಯಾದ್ಯಂತ ಹರಡಿದ ಚರ್ಮಗಂಟು ರೋಗಕ್ಕೆ ನಿರ್ದಿಷ್ಟ ಔಷಧ ಇಲ್ಲದಿದ್ದರೂ ಕುರಿ, ಮೇಕೆಗೆ ನೀಡುವ ಮೇಕೆ ಸಿಡುಬು ಲಸಿಕೆಯನ್ನೇ ಹಸು, ಎಮ್ಮೆ, ಕರು, ಕೋಣ, ಎತ್ತುಗಳಿಗೆ ನೀಡಲಾಗುತ್ತಿದೆ.

ಜಿಲ್ಲೆಯ ಒಟ್ಟು 2976 ಜಾನುವಾರುಗಳಲ್ಲಿ ರೋಗ ಕಾಣಿಸಿದ್ದು, ಈ ವರೆಗೂ ಒಟ್ಟು 55 ಜಾನುವಾರುಗಳು ಮೃತಪಟ್ಟಿವೆ. ರೋಗಗ್ರಸ್ಥ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಚರ್ಮಗಂಟು ರೋಗ ಹತೋಟಿಗೆ ಬರುವ ಹಂತದಲ್ಲಿದೆ. ಸರ್ಕಾರಿ ಗೋಶಾಲೆ ಕಾಮಗಾರಿ ಪೂರ್ಣಗೊಂಡಿದ್ದು, ಸಂಪರ್ಕ ರಸ್ತೆ ಮಾತ್ರ ಅಭಿವೃದ್ಧಿಯಾಗಬೇಕಿದೆ. ಶೀಘ್ರ ಗೋಶಾಲೆ ಉದ್ಘಾಟನೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಡಿಸಿ ಎಂ. ಸುಂದರೇಶ ಬಾಬು, ಜಿಪಂ ಸಿಇಒ ಫೌಜಿಯಾ ತರನ್ನುಮ್‌, ಎಡಿಸಿ ಸಾವಿತ್ರಿ ಬಿ.ಕಡಿ, ಜಿ.ಪಂ ಉಪ ಕಾರ್ಯದರ್ಶಿ ಸಮೀರ್‌ ಮುಲ್ಲಾ, ಯೋಜನಾ ನಿರ್ದೇಶಕ ಟಿ. ಕೃಷ್ಣಮೂರ್ತಿ ಸೇರಿದಂತೆ ದಿಶಾ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಕುರಿ, ಮೇಕೆ ಹಾಗೂ ದನಕರುಗಳು ರೈತರ ಆಸ್ತಿಯಾಗಿದ್ದು, ಅವುಗಳನ್ನು ರಕ್ಷಿಸಬೇಕಿದೆ. ದನಕರುಗಳಲ್ಲಿ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿದ್ದು, ರೋಗ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ಕ್ರಮ ಕೈಗೊಳ್ಳುವ ಜೊತೆಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು.  –ಸಂಗಣ್ಣ ಕರಡಿ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next