Advertisement

ನೆಲಕಚ್ಚೋ ಹಂತದಲ್ಲೇ ಬೆಳೆ ನೀರುಪಾಲು!

11:24 AM Sep 16, 2017 | Team Udayavani |

ಬಳ್ಳಾರಿ: ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಸಾವಿರಾರು ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, 79ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ.

Advertisement

ಒಂದೆಡೆ ತುಂಗಭದ್ರಾ ಜಲಾಶಯದ ಎಸ್ಕೇಪ್‌ ಗೇಟ್‌ ಒಡೆದ ಪರಿಣಾಮ ಸಾವಿರಾರು ಎಕರೆ ಬೆಳೆ ಹಾನಿಯಾದರೆ,
ಮತ್ತೂಂದೆಡೆ ಬಳ್ಳಾರಿ ಮತ್ತು ಸಿರುಗುಪ್ಪ ನಗರಗಳಲ್ಲಿ ತಗ್ಗು ಪ್ರದೇಶ ಮತ್ತು ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಒಂದೇ ರಾತ್ರಿ ವರುಣನ ಆರ್ಭಟಕ್ಕೆ ತತ್ತರಿಸಿದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಬೆಳೆ ಜಲಾವೃತಗೊಂಡಿದೆ.
ನಿರ್ವಹಣೆ ಕೊರತೆಯಿಂದ ಎಚ್‌ಎಲ್‌ಸಿ ಕಾಲುವೆಯ ಎಸ್ಕೇಪ್‌ ಗೇಟ್‌ ಒಡೆದು ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.

ಕಳೆದ ಮೂರು ವರ್ಷದ ಬರಗಾಲದಿಂದ ತತ್ತರಿಸಿ ಹೋದ ರೈತರಿಗೆ ಕಳೆದೊಂದು ವಾರದಿಂದ ಆಗಾಗ ಸುರಿಯುತ್ತಿರುವ
ಮಳೆ ಒಂದಷ್ಟು ನೆಮ್ಮದಿ ತಂದಿದೆ. ಆದರೆ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ಅಪಾರ ಹಾನಿಯಾಗಿದೆ. ಬಳ್ಳಾರಿ ತಾಲೂಕಿನ ಏಳಬಿಂಚಿ ಗ್ರಾಮದ ಬಳಿ ಬರುವ ಎಚ್‌ ಎಲ್‌ ಸಿ ಕಾಲುವೆಯ ಎಸ್ಕೇಪ್‌ ಗೇಟ್‌ ಒಡೆದ ಪರಿಣಾಮ 2 ಸಾವಿರಕ್ಕೂ ಹೆಚ್ಚು ಎಕರೆ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಭಾಗದಲ್ಲಿ ಬಿತ್ತನೆ ಮಾಡಲಾಗಿದ್ದ ಮೆಣಸಿನಕಾಯಿ, ಭತ್ತ, ತೊಗರಿ, ನವಣೆ, ಸಜ್ಜೆ ಬೆಳೆಗಳು ಸಂಪೂರ್ಣ ಹಾಳಾಗಿವೆ. 

ಸಿರುಗುಪ್ಪ ತಾಲೂಕಿನಲ್ಲಿ ಮಳೆ ಆರ್ಭಟ ಜೋರಾಗಿತ್ತು. ಹಳ್ಳಕೊಳ್ಳಗಳು ತುಂಬಿದ ಪರಿಣಾಮ ಬೆಳೆ ಹಾನಿಯ ಜೊತೆ ಕೆಲವೆಡೆ ಮನೆಗಳಿಗೂ ನೀರು ನುಗ್ಗಿ ದೊಡ್ಡ ಆವಾಂತರ ಸೃಷ್ಟಿ ಮಾಡಿದೆ. ಬಳ್ಳಾರಿ ನಗರದಲ್ಲೂ ಸತ್ಯನಾರಾಯಣ ಪೇಟೆ ಅಂಡರ್‌ ಬ್ರಿಜ್‌ ತುಂಬಿದ ಕಾರಣ ಪ್ರಯಾಣಿಕರು ಪರದಾಡಿದರು. ಸಮರ್ಪಕ ನಿರ್ವಹಣೆ ಮಾಡದೆ ಕಾಲುವೆ ಒಡೆದಿದೆ. ಹೀಗಾಗಿ ರೈತರಿಗೆ ಬೆಳೆಹಾನಿಯ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next