ವಾಡಿ: ಪಟ್ಟಣದ ಪುರಸಭೆಗೆ ಸೇರಿದ ಕುಡಿಯುವ ನೀರಿನ ಮುಖ್ಯ ಪೈಪ್ ಒಡೆದು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿ ಬೆಳೆ ನಾಶವಾದರೂ ಕೇಳ್ಳೋರಿಲ್ಲ. ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ.
ಪುರಸಭೆ ಆಡಳಿತಕ್ಕೆ ಕುಡಿಯುವ ನೀರಿನ ಮಹತ್ವವೂ ಗೊತ್ತಿಲ್ಲ. ರೈತರ ಬೆಳೆಗಳ ಮೌಲ್ಯವೂ ತಿಳಿದಿಲ್ಲ ಎಂದು ರೈತ ಸಂತೋಷ ಕೋಮಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂದನೂರು ಭೀಮಾ ನದಿಯಿಂದ 6 ಕಿ.ಮೀ ಅಂತರದ ಪಟ್ಟಣಕ್ಕೆ ಪುರಸಭೆ ಆಡಳಿತದಿಂದ ಕುಡಿಯುವ ನೀರಿನ ಪೈಪ್ ಜೋಡಣೆ ಮಾಡಲಾಗಿದೆ. ಕುಂದನೂರು-ವಾಡಿ ನಡುವಿನ ರೈಲ್ವೆ ನೀರು ಶುದ್ಧೀಕರಣ ಘಟಕದ ಹತ್ತಿರದ ರಸ್ತೆ ಬದಿಯಲ್ಲಿ ಪೈಪ್ ಒಡೆದು ತಿಂಗಳು ಕಳೆದಿದೆ. ಅಂದಿನಿಂದ ನಿರಂತರವಾಗಿ ಕುಡಿಯುವ ನೀರು ಜಮೀನುಗಳಿಗೆ ನುಗ್ಗುತ್ತಿದೆ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ದುರಸ್ತಿಗೆ ಮುಂದಾಗಿಲ್ಲ. ಪರಿಣಾಮ ನೀರು ಹೊಲಕ್ಕೆ ಹರಿದು ಕೃಷಿ ಚಟುವಟಿಕೆಗೆ ಅಡಚಣೆಯುಂಟು ಮಾಡುತ್ತಿದೆ. ಇದರಿಂದ ಕೆಲ ಹೊಲಗಳ ಬೆಳೆ ಹಾನಿಯಾಗಿದೆ . ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಕೂಡಲೇ ಒಡೆದ ಪೈಪ್ ದುರಸ್ತಿ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.