Advertisement

ಬೆಳೆ ಹಾನಿ: ಕೇಂದ್ರ ವಿಪತ್ತು ಅಧ್ಯಯನ ತಂಡದಿಂದ ಪರಿಶೀಲನೆ

12:57 PM Dec 19, 2021 | Team Udayavani |

ದೇವನಹಳ್ಳಿ: ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ದ್ರಾಕ್ಷಿ, ಸೇರಿದಂತೆ ಹಲವಾರು ಬೆಳೆಗಳು ನಷ್ಟಕ್ಕೆ ಒಳಗಾಗಿದ್ದು ಬೆಳೆ ಹಾನಿ ಪರಿಶೀಲನೆ ನಡೆಸಲು ಕೇಂದ್ರ ವಿಪತ್ತು ಅಧ್ಯಯನ ತಂಡ ಹಾನಿ ಕುರಿತು ಮಾಹಿತಿ ಪಡೆಯಿತು.

Advertisement

ತಾಲೂಕಿನ ಹಿರೆ ಅಮಾನಿಕೆರೆ ಸಮೀಪದ ರೈತರ ತೋಟಗಳಿಗೆ ಭೇಟಿ ನೀಡಿದ್ದ ಅವರು, ರಾಗಿ, ಜೋಳ, ಶೆಂಗಾ, ಶುಂಠಿ, ಗುಲಾಬಿ ಸೇರಿದಂತೆ ಹಲವಾರು ನಷ್ಟವಾಗಿರುವ ಬೆಳೆ ವೀಕ್ಷಿಸಿದರು.  ಕೊರೊನಾದಿಂದಾಗಿ ಮಾರುಕಟ್ಟೆ ಸೌಲಭ್ಯ ಸಿಗದೆ ಬೆಳೆ ನಾಶ ಮಾಡಿಕೊಂಡಿದ್ದೇವೆ. ಬಿತ್ತನೆ ಮಾಡಲು ಮಾಡಿರುವ ಸಾಲ ತೀರಿಸಲು ಸಾಧ್ಯವಾಗಿಲ್ಲ, ಕೃಷಿಗಾಗಿ ಬ್ಯಾಂಕುಗಳಲ್ಲಿ ಮಾಡಿಕೊಂಡಿರುವ ಸಾಲಗಳಿಗೆ ಬ್ಯಾಂಕಿನವರು ನೋಟಿಸ್‌ ನೀಡಿದ್ದಾರೆ. ಇದರೊಂದಿಗೆ ಇತ್ತಿಚೆಗೆ ಸುರಿದ ಮಳೆಯಿಂದಾಗಿ ಕೈಗೆ ಬಂದಿದ್ದ ಬೆಳೆಗಳೆಲ್ಲಾ ನಾಶವಾಗಿದೆ. ರಾಗಿ ಕಟಾವಿಗೂ ಮೊದಲೇ ನೆಲಕ್ಕುರುಳಿ ಮೊಳಕೆ ಬಂದು ಬೆಳೆಗಳು ಹಾಳಾಗಿವೆ. ತೋಟಗಾರಿಕಾ ಬೆಳೆಗಳೂ ಕೈಗೆ ಸಿಗಲಿಲ್ಲ, ನಮ್ಮ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕೇಂದ್ರದಿಂದ ನಮಗೆ ಶೀಘ್ರ ಪರಿಹಾರ ಕೊಡಲಿಕ್ಕೆ ಶಿಫಾರಸ್ಸು ಮಾಡಿ ಎಂದು ತಿಳಿಸಿದರು.

ವಿಡಿಯೋ ಮೂಲಕ ಮಾಹಿತಿ: ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ಮಳೆಯಿಂದಾಗಿ ಹಾನಿಯಾದ ಸಮಗ್ರ ಮಾಹಿತಿ ಸಲ್ಲಿಸಿದರು. ಕೇಂದ್ರ ವಿಪತ್ತು ಅಧ್ಯಯನ ತಂಡದ ಮುಖ್ಯಸ್ಥ ಸುಶಿಲ್ಪಾಲ್ (ಮುಖ್ಯ ನಿಯಂತ್ರಕರು, ಲೆಕ್ಕಪತ್ರ, ಭಾರತ ಸರ್ಕಾರ), ಸದಸ್ಯ ಸುಭಾಷ್‌ ಚಂದ್ರ (ನಿರ್ದೇಶಕರು, ಕೃಷಿ ಇಲಾಖೆ, ಭಾರತ ಸರ್ಕಾರ) ಅವರಿಗೆ ಅಕ್ಟೋಬರ್‌ನಿಂದ ಜಿಲ್ಲೆಯಲ್ಲಿ ಅತಿವೃಷ್ಟಿ(ಮಳೆ ಹಾನಿ)ಯಿಂದ ಸಂಭವಿಸಿರುವ ಹಾನಿ ಕುರಿತು ಪಿಪಿಟಿ ಮೂಲಕ ಅಂಕಿ ಅಂಶ ಹಾಗೂ ವಿಡಿಯೋ ತುಣುಕುಗಳ ಸಮೇತ ಸಮಗ್ರವಾಗಿ ತಂಡಕ್ಕೆ ಮಾಹಿತಿ ನೀಡಿದರು.

ಪ್ರವಾಸಿ ಮಂದಿರದ ಹೊರಗೆ ನಿರ್ಮಿಸಿದ್ದ ಫೋಟೋ ಗ್ಯಾಲರಿ ಹಾಗೂ ಪ್ರಾತ್ಯಕ್ಷಿಕೆ ಮೂಲಕಮಳೆ ಹಾನಿ ಬಗ್ಗೆ ವಿವರಿಸಿದರು. ದೇವನಹಳ್ಳಿ ತಾಲೂಕಿನ ಕಸವಿಲೇವಾರಿ ಘಟಕ ಮತ್ತು ರೈತರ ಜಮೀನುಗಳಿಗೆ ಕೇಂದ್ರ ವಿಪತ್ತು ತಂಡ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆಯಿತು.

ಮೇವು ಬೀಜ ವಿತರಿಸಿ: ಕೇಂದ್ರ ವಿಪತ್ತು ಅಧ್ಯಯನ ತಂಡದ ಮುಖ್ಯಸ್ಥ ಸುಶಿಲ್ಪಾಲ್‌ ಮಾತನಾಡಿ, ಈಗಾಗಲೇ ಹಂತ ಹಂತವಾಗಿ ರಾಜ್ಯದ ವಿವಿಧ ಕಡೆ ವಿಪತ್ತು ಅಧ್ಯಯನ ನಡೆಸಲಾಗುತ್ತಿದೆ. ರಾಜ್ಯಕ್ಕೆ ಇನ್ನಷ್ಟು ಅನುದಾನ ಬಿಡುಗಡೆಯಾಗಬೇಕಿದೆ. ಈಗಾಗಲೇ 857ಕೋಟಿ 12.5 ಲಕ್ಷ ರೂ.ಗಳವರೆಗೆ ರೈತರಿಗೆ ಜಮೆ ಮಾಡಲಾಗಿದೆ. ಮತ್ತಷ್ಟು ಆಗಬೇಕಿದೆ. ಹಾವೇರಿ ಮತ್ತು ಧಾರವಾಡ ಕಡೆಗಳಲ್ಲಿ ಹತ್ತಿ ಬೆಳೆ ನಷ್ಟವಾಗಿದೆ. ಚಿಕ್ಕಬಳ್ಳಾಪುರ ಮತ್ತು ತುಮಕೂರಿನಲ್ಲಿ ಶೇ.80 ರಷ್ಟು ರಾಗಿ ಮತ್ತು ಇತರೆ ತೋಟಗಾರಿಕಾ ಬೆಳೆ ಹಾಳಾಗಿದೆ. ಫೆಬ್ರವರಿಮಾರ್ಚ್‌ನಲ್ಲಿ ದನಗಳಿಗೆ ಮೇವಿನ ಸಮಸ್ಯೆ ಆಗುತ್ತಿದೆ. ರಾಗಿ, ಭತ್ತ, ಕಡಲೇಕಾಯಿ ಬೆಳೆ ನಷ್ಟವಾಗಿದೆ. ಜಿಲ್ಲಾಡಳಿತಕ್ಕೆ ದನಕರುಗಳಿಗೆ ಅನುಕೂಲವಾಗಲು ಮೇವು ಬೀಜ ವಿತರಿಸುವಂತೆ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.

Advertisement

ರಾಜ್ಯ ಕೆಎಸ್‌ಡಿಎಂಎ ಆಯುಕ್ತ ಡಾ. ಮನೋಜ್‌ರಾಜನ್‌, ಹೆಚ್ಚುವರಿ ಕೃಷಿನಿರ್ದೇಶಕ ಬಿ.ಬಸವರಾಜು, ಹೆಚ್ಚುವರಿ ತೋಟಗಾರಿಕಾ ನಿರ್ದೇಶಕ ಬಿ.ಕೆ.ದುಂಡಿ, ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್‌, ಜಿಪಂ ಸಿಇಒ ಕೆ.ರೇವಣಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೋ.ನಾ.ವಂಶಿಕೃಷ್ಣ, ತಹಶೀಲ್ದಾರ್‌ ಅನಿಲ್‌ ಕುಮಾರ್‌ ಅರೋಲಿಕರ್‌, ಮಂಜುನಾಥ್‌, ಶಿವರಾಜ್, ಗೀತಾ, ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕಿ ವಿನುತಾ, ತಾಲೂಕು ಸಹಾಯಕ ನಿರ್ದೇಶಕಿ ವೀಣಾ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವೈಜ್ಞಾನಿಕ ಬೆಲೆ ಇಲ್ಲ : ಕೇಂದ್ರದ ತಂಡಕ್ಕೆ ತಮ್ಮ ಅಹವಾಲು ಸಲ್ಲಿಸಿದ ರೈತರು, ಹಲವಾರು ವರ್ಷಗಳಿಂದ ತೀವ್ರ ಮಳೆ ಕೊರತೆಯಿಂದಾಗಿ ಬರಗಾಲ ಎದುರಿಸಿದ್ದೇವೆ. ದನಕರುಗಳಿಗೆ ಮೇವು ಸಿಗದೆ ಪರದಾಡಿದ್ದೇವೆ. ಈ ವರ್ಷವಾದರೂ ಉತ್ತಮವಾಗಿ ಬೆಳೆಯಾದರೆ, ಹಿಂದಿನ ವರ್ಷಗಳಲ್ಲಿ ಮಾಡಿರುವ ಸಾಲಗಳನ್ನಾದರೂ ತೀರಿಸಿಕೊಳ್ಳಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಈಗ ರಸಗೊಬ್ಬರಬೆಲೆಗಳು ಗಗನಕ್ಕೇರಿವೆ. ಕಾರ್ಮಿಕರ ಕೊರತೆ, ನಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆಯಿಲ್ಲ ಎಂದು ರೈತರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next