ಕುಳಗೇರಿ ಕ್ರಾಸ್: ಸತತ ಮಳೆಯಿಂದ ಕುಳಗೇರಿ ಹೋಬಳಿಯ ಸಾವಿರಾರು ಹೆಕ್ಟೆರ್ ಪ್ರದೇಶದಲ್ಲಿನ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾಳಾಗಿ ರೈತರು ಕಂಗಾಲಾಗಿದ್ದಾರೆ. ಗೋವಿನಜೋಳ, ಈರುಳ್ಳಿ, ಹೆಸರು, ಸಜ್ಜಿ, ಜೋಳ ಹೀಗೆ ಎಲ್ಲ ಬೆಳೆಗಳನ್ನ ಕಳೆದುಕೊಂಡು ರೈತರು ಕಣ್ಣೀರಿಡುವಂತಾಗಿದೆ.
ಕಳೆದ ವರ್ಷ ಮಳೆ ಸುರಿದು ಪ್ರವಾಹ ಬಂದು ನಮ್ಮ ಹೊಲ ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದೆವೆ. ನಾಲ್ಕೈದು ಬಾರಿ ಪ್ರವಾಹ ಬಂದು ಬೆಳೆಗಳು ಹಾಳಾಗಿವೆ.ಆದರೆ ಇನ್ನೂ ಕೂಡಾ ಪರಿಹಾರ ಬಂದಿಲ್ಲ. ಬೆಳೆ ವೀಕ್ಷಣೆಗೆ ಪ್ರತಿ ವರ್ಷ ಕೇಂದ್ರ ತಂಡ, ರಾಜ್ಯ ತಂಡದವರು ಬಂದು ನೋಡಿ ಹೋಗ್ತಾರೆ, ಪರಿಹಾರ ಮಾತ್ರ ಕೊಡುತ್ತಿಲ್ಲ ಎಂದು ರೈತರು ಆರೋಪ ಮಾಡುತ್ತಿದ್ದಾರೆ.
ರೈತನ ಗೋಳು: ದನ-ಕರ ಅಷ್ಟ ಅಲ್ರಿ ನಾವೂ ಸಹ ಕೂಳಗೇಡಿ ಆದಿವ್ರಿ. ಹೊಲದಾಗ ಕೆಲಸರ ರಗಡ ಇತ್ತು, ಏನ್ ಮಾಡೋದ್ ಮಳೆರಾಯ ಎಲ್ಲ ಹಾಳ ಮಾಡಿ ಹೋದ. ಮೊಣಕಾಲುದ್ದ ಕಸ ಬೆಳದೈತಿ ನಮಗಂತೂ ಸಾಕಾಗಿ ಹೋಗೈತಿ ನೋಡ್ರಿ ಯಾರ ಮುಂದ ಹೇಳ್ಳೋದ್ರಿನಮ್ಮ ಗೋಳ ಅಂತಾ ಗೋವಿನಕೊಪ್ಪ ಗ್ರಾಮದ ರೈತ ಸಿದ್ದಪ್ಪ ದ್ಯಾವಪ್ಪ ಸಿರಗುಂಪಿ ಪತ್ರಿಕೆ ಎದುರು ಗೋಳು ತೋಡಿಕೊಂಡಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಉತ್ತಮ ಬೆಳೆ ಬೆಳೆದರೂ ಸಹ ನಮ್ಮ ಕೈ ಸೇರಿಲ್ಲ, ನೀರಿಗೆ ಕೊಚ್ಚಿ ಹೋಗಿ ಹೊಟ್ಟೆಗೆ ಹಿಟ್ಟು ಸಹ ಇಲ್ಲದಂಗ ಆಗೈತಿ. ಈ ಬಾರಿ ಸುಮಾರು 25 ಕ್ವಿಂಟಲ್ ಹತ್ತಿ ಬೆಳೆದಿದ್ದೆ. ಬೆಳೆ ಕೈ ಸೇರುವ ಸಮಯದಲ್ಲೇ ಬಿಟ್ಟು ಬಿಡದೆ ಸುರಿದ ಮಳೆಗೆ ಪಡ್ಲ ಒಡೆದ ಹತ್ತಿ ಕೊಳೆತು ಹೋತ. ಒಂದು ಹತ್ತಿ ಗಿಡದಾಗ 15 ರಿಂದ 20 ಕಾಯಿಗಳು ಕೊಳೆತು ಕಪ್ಪಾಗಿ ಹೋಗೈತಿ. ಪ್ರತಿ ವರ್ಷ ಸಾಲಾ ಮಾಡಿ ಸಾವಿರಾರು ರೂ. ಖರ್ಚ ಮಾಡ್ತೇನಿ, ಒಂದ ಬಾರಿನೂ ಬೆಳೆ ಕೈ ಸೇರಿಲ್ಲ ಎಂದು ರೈತ ಸಿದ್ದಪ್ಪ ನೋವು ತೋಡಿಕೊಂಡಿದ್ದಾನೆ.
ಹತ್ತಿ, ಸಜ್ಜಿ, ಈರುಳ್ಳಿ, ಕಬ್ಬು ಹಾಳಾಗಿವೆ.ಗೋವಿನಜೋಳ ಮಾತ್ರ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದೆ. ಕೆಲ ರೈತರಿಗೆ ಕಳೆದ ಬಾರಿ ಬೆಳೆ ಹಾನಿ ಪರಿಹಾರ ಬಂದಿಲ್ಲ. ಈ ಬಾರಿಯಾದರೂ ಸರ್ಕಾರ ಬೇಗ ಪರಿಹಾರ ಕೊಟ್ಟು ಅನುಕೂಲ ಮಾಡಬೇಕು
-ಕರಿಗೌಡ ಮುಷ್ಟಿಗೇರಿ, ಬೀರನೂರ ರೈತ
-ಸಿದ್ದಯ್ಯ ಹಿರೇಮಠ