ಮಸ್ಕಿ: ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆ, ಗಾಳಿಗೆ ತಾಲೂಕಿನಲ್ಲಿ ನಾಟಿ ಮಾಡಿದ ಭತ್ತದ ಬೆಳೆ ನೆಲಕ್ಕೆ ಬಿದ್ದು ಸಂಪೂರ್ಣ ನಾಶವಾಗಿದೆ.
ವಾಯುಭಾರ ಕುಸಿತದ ಪರಿಣಾಮ ಸೈಕ್ಲೋನ್‌ನ ಬಿಸಿ ತಾಲೂಕಿಗೂ ತಟ್ಟಿದೆ. ಕಳೆದ ಎರಡ್ಮೂರು ದಿನಗಳಿಂದ ಬಿಸುತ್ತಿರುವ ನಿವಾರ್ ಚಂಡ ಮಾರುತದಿಂದ ತುಂಗಭದ್ರಾ ಎಡನಾಲೆ ವ್ಯಾಪ್ತಿಯ ಹಾಲಾಪೂರ, ಜಂಗಮರಗಹಳ್ಳಿ, ತೊರಣದಿನ್ನಿ, ಬಸ್ಸಾಪುರ, ಹಾರಪೂರ, ಪೈಕ್ಯಾಂಪ್, ಶಂಕರನಗರಕ್ಯಾಂಪ್ ಸೇರಿದಂತೆ ಅನೇಕ ಕಡೆ ಭತ್ತದ ಬೆಳೆ ಸಂಪೂರ್ಣ ನೆಲಕ್ಕಚ್ಚಿದ್ದು, ಭತ್ತದ ಬೆಳೆ ಕಟಾವು ಹಂತದಲ್ಲಿರುವಾಗ ನಿವಾರ್ ಚಂಡಮಾರುತದಿಂದ ಸುರಿಯುತ್ತಿರುವ ಮಳೆಗೆ ಭತ್ತ ನೆಲಕುರುಳಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದರಿಂದ ಭತ್ತ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ತಾಲೂಕಿನ ವಿವಿಧ ಪ್ರದೇಶಗಳಲ್ಲಿ ರೈತರು ಭತ್ತ ಬೆಳೆಯಲು ಎಕರೆಗೆ 25-30 ಸಾವಿರ ರೂ. ಖರ್ಚು ಮಾಡಿದ್ದಾರೆ. ಆದರೆ ಬೆಳೆದ ಬೆಳೆಗೆ ಅತ್ತ ಬೆಲೆ ಇಲ್ಲ. ಇತ್ತ ಚಂಡ ಮಾರುತದಿಂದ ಬೆಳೆ ಹಾಳಾಗಿದ್ದು, ಇದೀಗ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದಭತ್ತ ಬೆಳೆದ ಅನ್ನದಾತ ಸಂಕಷ್ಟಕ್ಕೆ ಸಿಲುಕಿ ದಾರಿ ತೋಚದಂತಾಗಿ ತಲೆ ಮೇಲೆ ಕೈಇಟ್ಟು ಕುಳಿತುಕೊಳ್ಳುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಕಂದಾಯ ಇಲಾಖೆ ಅಧಿ ಕಾರಿಗಳು ಕೂಡಲೇ ಹಾಳಾದಭತ್ತವನ್ನು ವೀಕ್ಷಣೆ ಮಾಡಿ ರೈತರಿಗೆ ಆದ ಹಾನಿಯನ್ನು ಭರಿಸಬೇಕೆಂದು ರೈತರಾದ ವೆಂಕಟೇಶ್ವರ್ ರಾವ್, ಮಲ್ಲಿಕಾರ್ಜುನ, ಕಾಂತಣ್ಣ ಹಾಗೂ ಇತರರು ಒತ್ತಾಯಿಸಿದ್ದಾರೆ.
ಜನರು ತತ್ತರ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಹಗಲು ರಾತ್ರಿ ಜಿಟಿ-ಜಿಟಿ ಸುರಿಯುತ್ತಿರುವ ಮಳೆ ಹಾಗೂ ಶೀತ ಗಾಳಿಯಿಂದಾಗಿ ಜನ ಜೀವನ ಕೂಡ ಅಸ್ತವ್ಯಸ್ತ ವಾಗಿದೆ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಶೀಥ ಗಾಳಿಯಿಂದ ಜನರು ನೆಗಡಿ, ಜ್ವರದಿಂದ ಬಳಲುವಂತಾಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ.