ದಾಂಡೇಲಿ: ನಗರದಲ್ಲಿ ಈವರೆಗೆ ಮೊಸಳೆಗಳಿಂದಾದ ಜೀವ ಹಾನಿಗೆ ಶಾಸಕ ಆರ್.ವಿ. ದೇಶಪಾಂಡೆಯವರೆ ನೇರ ಹೊಣೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪಿಸಿದ್ದಾರೆ.
ಅವರು ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತನ್ನ ಪ್ರಚಾರಕ್ಕಾಗಿ ಮತ್ತು ಹಿಂಬಾಲಕರಿಗೆ ಗುತ್ತಿಗೆ ಕೊಡುವ ಉದ್ದೇಶದಿಂದ ಅವೈಜ್ಞಾನಿಕ ಮೊಸಳೆ ಪಾರ್ಕ್ ಮಾಡಿದ ನಂತರವೆ ಭಯದ ವಾತಾವರಣ ನಿರ್ಮಾಣವಾಗಿದೆ ಮತ್ತು ಮಾನವರ ಮೇಲೆ ಮೊಸಳೆಗಳು ದಾಳಿ ಮಾಡುವಂತಾಗಿದೆ ಎಂದೂ ದೂರಿದರು.
ಅನುಭವಿ ಶಾಸಕರೆಂದು ಕರೆಸಿಕೊಳ್ಳುವ ದೇಶಪಾಂಡೆಯವರು ನದಿಗೆ ಆವರಣ ಗೋಡೆ ನಿರ್ಮಿಸುವಂತೆ ನಿರ್ದೇಶನ ನೀಡುತ್ತಾರೆ. ಆದರೆ ಮೊಸಳೆಗಳು ಮೊಟ್ಟೆಯಿಡಲು ನದಿ ದಂಡೆಯನ್ನೆ ಬಯಸುತ್ತವೆ ಎನ್ನುವ ಅರಿವು ಅವರಿಗಿಲ್ಲವಾಗಿದೆ. ಮೊಸಳೆಗಳಿಗೆ ಆಹಾರದ ಅಭದ್ರತೆ ಕಾಡತೊಡಗಿದೆ. ಹಾಗಾಗಿ ಇಂಥ ಘಟನೆಗಳು ಸಂಭವಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಮೊಸಳೆಗಳಿಂದ ದುರ್ಘಟನೆಗಳು ಸಂಭವಿಸಿದಲ್ಲಿ ಶಾಸಕರು ಹಾಗೂ ಪ್ರವಾಸೋದ್ಯಮ ಇಲಾಖೆ ವಿರುದ್ಧ ಕಾನೂನು ಹೋರಾಟ ಕೈಗೊಳ್ಳಲಾಗುವುದು ಎಂದರು.
ಶ್ರೇಯಸ್, ಶ್ರೀನಿಧಿ ಕಾರ್ಖಾನೆ ಸ್ಥಗಿತಗೊಂಡಿದೆ. ಅಲ್ಲಿಯ ಕಾರ್ಮಿಕನೊಬ್ಬ ಮೃತಪಟ್ಟ ಸಂದರ್ಭದಲ್ಲಿ ಕ್ಷೇತ್ರದಲ್ಲಿದ್ದೂ ಆತನ ಕುಟುಂಬಕ್ಕೆ ಸಾಂತ್ವನ ಹೇಳಲೂ ಶಾಸಕರಿಗೆ ಬರದಿರುವುದು ನೋವಿನ ಸಂಗತಿ. ಶ್ರೇಯಸ್ -ಶ್ರೀನಿಧಿ ಕಾರ್ಖಾನೆ ಕಾರ್ಮಿಕರ ಸಮಸ್ಯೆ ಬರಲಿರುವ ದೀಪಾವಳಿಯೊಳಗೆ ಬಗೆಹರಿಸದಿದ್ದಲ್ಲಿ ಹೋರಾಟ ಅನಿವಾರ್ಯ ಎಂದ ಸುನೀಲ ಹೆಗಡೆ, ಶಾಸಕ ಆರ್.ವಿ. ದೇಶಪಾಂಡೆಯವರ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಉಪಾಧ್ಯಕ್ಷ ರವಿ ಗಾಂವಕರ್, ಸಂಜೀವ್ ಜಾಧವ್, ಪ್ರಧಾನ ಕಾರ್ಯದರ್ಶಿ ಗುರು ಮಠಪತಿ, ಗಿರೀಶ ಟೋಸೂರ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಶಿಕಾರಿಪುರ, ಮುಖಂಡರಾದ ಶಾರದಾ ಪರಶುರಾಮ, ರಫೀಕ್ ಹುದ್ದಾರ್, ಟಿ.ಎಸ್. ಬಾಲಮಣಿ, ಎಂ.ಎಸ್. ನಾಯ್ಕ, ಮಂಜುನಾಥ ಯರಗೇರಿ, ಶಶಿ ಓಶಿಮಠ, ರಿಯಾಜ್, ಸಂತೋಷ್ ಬುಲುಬುಲೆ, ಸಾವಿತ್ರಿ ರಾಯಭಾಗ್, ಅಶ್ವಿನಿ ಬಾಲಮಣಿ, ನಗರಸಭಾ ಸದಸ್ಯರಾದ ನರೇಂದ್ರ ಚೌವ್ಹಾಣ್, ಬುದ್ಧಿವಂತಗೌಡ ಪಾಟೀಲ, ದಶರಥ ಬಂಡಿವಡ್ಡರ, ರಮಾ ರವೀಂದ್ರ, ಶೋಭಾ ಜಾಧವ್ ಮೊದಲಾದವರು ಉಪಸ್ಥಿತರಿದ್ದರು.