Advertisement

Crocodile Operation; ನಾಗೂರು: ಬಾವಿಯಲ್ಲಿದ್ದ ಮೊಸಳೆ ಸೆರೆ

09:59 AM Aug 01, 2024 | Team Udayavani |

ಉಪ್ಪುಂದ: ಕಿರಿಮಂಜೇಶ್ವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಾಗೂರಿನ ಬಾವಿಯೊಂದರಲ್ಲಿ ಮಂಗಳವಾರ ಕಂಡುಬಂದ ಮೊಸಳೆಯನ್ನು ಸತತ ಕಾಯಾಚರಣೆ ಮೂಲಕ ಬುಧವಾರ ಮಧ್ಯಾಹ್ನ ಸೆರೆಹಿಡಿಯಲಾಯಿತು.

Advertisement

ನಾಗೂರು ವಿಶ್ವನಾಥ ಉಡುಪರ ಮನೆಯ ಬಾವಿಯಲ್ಲಿ ಮೊಸಳೆ ಕಂಡುಬಂದಿತ್ತು. ಮೊಸಳೆಯನ್ನು ಸೆರೆಹಿಡಿಯಲು ಬೈಂದೂರು ಅರಣ್ಯ ಇಲಾಖೆ, ಪೋಲಿಸ್‌ ಇಲಾಖೆ, ಅಗ್ನಿಶಾಮಕದಳ ಕಂದಾಯ ಇಲಾಖೆಯ ಸಹಾಯದೊಂದಿಗೆ ನಾಗೂರು, ಕೊಡೇರಿ, ಕಿರಿಮಂಜೇಶ್ವರ ಹೊಸಹಿತ್ಲು ಭಾಗದ ಮೀನುಗಾರರು ಕಾರ್ಯಾಚರಣೆ ನಡೆಸಿದರು.

ರಾತ್ರಿಯಿಡಿ ನಿಗಾ:
ಮಂಗಳವಾರ ಸಂಜೆ ಮೊಸಳೆ ಬಾವಿಯಿಂದ ಹೊರ ಬರಲು ಬಾವಿಯ ದಂಡೆಯನ್ನು ನೆಲ ಸಮಾನಕ್ಕೆ ಒಡೆದು ಬೊನಿಗೆ ಕೋಳಿಯ ಮಾಂಸವನ್ನು ಹಾಕಿ ಇಡಲಾಗಿತ್ತು. ಬಾವಿಯ ಸುತ್ತಲೂ ಸಿಸಿ ಕೆಮರಾ ಅಳವಡಿಸಿ ಕಂಪ್ಯೂಟರ್‌ ಮೂಲಕ ರಾತ್ರಿಯಿಡಿ ಮೊಸಳೆಯ ಓಡಾಟವನ್ನು ಗಮನಿಸಲಾಯಿತು. ಅರಣ್ಯ ಇಲಾಖೆಯವರು ಇಟ್ಟಿರುವ ಮಾಂಸದ ಕಡೆಗೆ ತಿರುಗಿಯೂ ನೋಡದ ಮೊಸಳೆ ರಾತ್ರಿಯಿಡೀ ಬಾವಿಯಲ್ಲಿ ಸುತ್ತುತ್ತಿತ್ತು.

ಬುಧವಾರ ಮಧ್ಯಾಹ್ನ ಹೊತ್ತಿಗೆ ಬೋನಿಗೆ ಬರುವ ಸಾಧ್ಯತೆ ಇಲ್ಲದಿರುವುದನ್ನು ಅರಿತ ಮೀನುಗಾರರು ಬೀಡಿನ ಬಲೆ ಹಾಕಿ ಹಿಡಿಯುವ ಪ್ರಯತ್ನಕ್ಕೆ ಕೈಹಾಕಿದರು. ಸುಮಾರು ಒಂದು ಗಂಟೆಗಳ ಪ್ರಯತ್ನದಿಂದ ಮೊಸಳೆಯ ಸುತ್ತ ಬಲೆಯನ್ನು ಎಳೆದು ಸುತ್ತಿ ಹಗ್ಗದಿಂದ ಕಟ್ಟಲು ಯಶಸ್ವಿಯಾದರು. ಬಾಯಿ ಹಾಗೂ ಕಾಲಿಗೆ ಗಮ್‌ಟೇಪ್‌ ಅಂಟಿಸಿ ಮೊಸಳೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮೇಲಕ್ಕೆ ಎತ್ತಿದರು. ಮೊಸಳೆಗೆ 25-30 ವರ್ಷ ಪ್ರಾಯ ಅಂದಾಜಿಸಲಾಗಿದ್ದು, ಎಲ್ಲಿಗೆ ಬೀಡಲಾಗುತ್ತದೆ ಎನ್ನುವ ಮಾಹಿತಿ ನೀಡಲಿಲ್ಲ.

ಎಲ್ಲಿಂದ ಬಂದಿರಬಹುದು?: ಹಲವು ವರ್ಷಗಳ ಹಿಂದೆ ಮರವಂತೆ ಸೌರ್ಪಣಿಕಾ ನದಿ, ಬಿಜೂರು ಸುಮನಾವತಿ ನದಿಯಲ್ಲಿ ಮೊಸಳೆ ಗುಂಡಿ ಇರುವುದಾಗಿ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ. ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಿಂದಾಗಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಕಂಬದಕೋಣೆ ಎಡಮಾವಿನ ಹೊಳೆ ಮೂಲಕ ಬಂದಿದೆ ಎನ್ನಲಾಗುತ್ತಿದೆ.

Advertisement

3ದಿನದ ಹಿಂದೆ ಹೆಜ್ಜೆ ಪತ್ತೆ:
ಎಡೆಮಾವಿನ ನದಿ ತೀರದ ಗದ್ದೆಯಲ್ಲಿ 3 ದಿನ ಹಿಂದೆ ಯಾವುದೋ ಪ್ರಾಣಿ ತಿರುಗಾಡಿ ಭತ್ತದ ಪೈರು ಹಾಳಾಗಿತ್ತು. ಗದ್ದೆಯಲ್ಲಿ ಕಳೆ ತೆಗೆಯುವ ಮಹಿಳೆಯರು ಕಡಲಾಮೆಯಿಂದ ಹಾಳಾಗಿದೆ ಎಂದು ಭಾವಿಸಿದ್ದರು. ಆದರೆ ಹೆಜ್ಜೆಗಳನ್ನು ಗಮನಿಸಿದಾಗ ಮೊಸಳೆ ತಿರುಗಾಡಿರುವುದು ಖಚಿತವಾಗಿತ್ತು.

ಮಣಿಪಾಲ: ಮುಂದುವರಿದ ಚಿರತೆ ಹುಡುಕಾಟ

ಮಣಿಪಾಲ: ಮಣಿಪಾಲ ಪರಿಸರದಲ್ಲಿ ಆತಂಕ ಮೂಡಿಸಿದ್ದ ಚಿರತೆ ಹುಡುಕಾಟ ಮುಂದುವರಿದಿದ್ದು, ಮಂಗಳವಾರ ತಡರಾತ್ರಿ ಮತ್ತು ಬುಧವಾರ ಚಿರತೆ ಕುರುಹು ಪತ್ತೆಯಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಮಣಿಪಾಲ ಪ್ರದೇಶದಲ್ಲಿ ರಾತ್ರಿ ಗಸ್ತು ಆರಂಭಿಸಿದ್ದಾರೆ. ಚಿರತೆ ಓಡಾಡಿದೆ ಎನ್ನಲಾದ ಅನಂತನಗರ, ಮಣ್ಣಪಳ್ಳ ಪರಿಸರದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ಭಾಗದಲ್ಲಿ ಚಿರತೆ ಓಡಾಟದ ಸುಳಿವು ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಪೆರಂಪಳ್ಳಿ, ಎಂಡ್‌ಪಾಯಿಂಟ್‌ನಲ್ಲಿ ಚಿರತೆ ಓಡಾಡಿರುವ ಕುರುಹು ಪತ್ತೆಯಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಇಲ್ಲಿ ಬೋನು ಇರಿಸಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಚಿರತೆ ಕಾಣಿಸಿಕೊಂಡ ಬಗ್ಗೆ ಬುಧವಾರ ಸಾರ್ವಜನಿಕರಿಂದಲೂ ಯಾವುದೇ ದೂರವಾಣಿ ಕರೆಗಳು ಬಂದಿಲ್ಲ. ಅರಣ್ಯ ಇಲಾಖೆ ಸಿಬಂದಿ ಗಸ್ತು ತಂಡವು ರಾತ್ರಿ ಸೂಕ್ಷ್ಮ ಪ್ರದೇಶದಲ್ಲಿ ನಿಗಾ ವಹಿಸುತ್ತಿದ್ದು, ಮಣಿಪಾಲ ಆರ್‌ಡಿಎಫ್ ಅವರ ನೇತೃತ್ವ ತಂಡ ಈ ಬಗ್ಗೆ ಕಟ್ಟೆಚ್ಚರ ವಹಿಸಿದೆ. ಸ್ಥಳೀಯರಿಗೆ ಚಿರತೆ ಕಾಣಿಸಿಕೊಂಡಲ್ಲಿ ಕೂಡಲೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಉಡುಪಿ ಆರ್‌ಎಫ್ಒ ವಾರಿಜಾಕ್ಷಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next