ಪಾಟ್ನಾ: ಬಾಲಕನನ್ನು ಬಲಿ ಪಡೆದ ಮೊಸಳೆಯನ್ನು ಸೆರೆಹಿಡಿದು ಅಮಾನುಷವಾಗಿ ಹಲ್ಲೆಗೈದು ಸಾಯಿಸಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರ ದಿಯಾರಾ ದ್ವೀಪದಲ್ಲಿರುವ ಖಾಲ್ಸಾ ಘಾಟ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಗೋಕುಲಪುರ ನಿವಾಸಿ ಧರ್ಮೇಂದ್ರ ದಾಸ್ ಎನ್ನುವವರು ಇತ್ತೀಚೆಗೆ ಧಾರ್ಮಿಕ ವಿಧಿವಿಧಾನವೊಂದನ್ನು ನಡೆಸಲು ತನ್ನ ಕುಟುಂಬದೊಂದಿಗೆ ಗಂಗಾ ನದಿಯ ದಡಕ್ಕೆ ಬಂದಿದ್ದಾರೆ. ಈ ವೇಳೆ ಧರ್ಮೇಂದ್ರ ಅವರ 10 ವರ್ಷದ ಮಗ ಅಂಕಿತ್ ನೀರು ತರಲು ನದಿಯ ಬಳಿ ಹೋಗಿದ್ದಾನೆ. ಈ ಕ್ಷಣದಲ್ಲಿ ಬಾಯಿ ತೆರೆದು ಬಂದ ಮೊಸಳೆ ಅಂಕಿತ್ ನನ್ನು ಎಳೆದುಕೊಂಡು ಹೋಗಿದೆ. ಬಾಲಕ ಅಂಕಿತ್ ಕಿರುಚಾಡಿದ್ದನ್ನು ನೋಡಿದ ಕುಟುಂಬಸ್ಥರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಏನೇ ಮಾಡಿದರೂ ಮೊಸಳೆ ಬಾಯಿಯಿಂದ ಜೀವಂತವಾಗಿ ಬಾಲಕನನ್ನು ಹೊರ ತೆಗೆಯಲು ಸಾಧ್ಯವಾಗಿಲ್ಲ.
ಈ ಘಟನೆ ಅಲ್ಲಿ ನೆರೆದಿದ್ದ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗುವಂತೆ ಮಾಡಿದೆ. ಸ್ಥಳೀಯರು ಮೀನಿನ ಬಲೆಯನ್ನು ಹರಡಿ ದೋಣಿಯ ಮೂಲಕ ಸಾಗಿ ನದಿಗಿಳಿದು ಮೊಸಳೆಯನ್ನು ಹಿಡಿದು ದಡಕ್ಕೆ ತಂದಿದ್ದಾರೆ. ಕೋಲುಗಳಿಂದ, ಚಪ್ಪಲಿಯಿಂದ ಮೊಸಳೆ ಮೇಲೆ ಹಲ್ಲೆಗೈದಿದ್ದಾರೆ. ಅಮಾನುಷ ರೀತಿಯಲ್ಲಿ ಹಿಂಸಿಸಿ ಮೊಸಳೆಯನ್ನು ಸಾಯಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳು ಘಟನೆಯನ್ನು ಖಂಡಿಸಿದ್ದು,ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಬದಲು ಈ ರೀತಿ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.